ಬಾನು ಮುಷ್ತಾಕ್, ಅವರ “ಹಾರ್ಟ್ ಲ್ಯಾಂಪ್” ಕೃತಿಯು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಕನ್ನಡ ಸಾಹಿತ್ಯ ಲೋಕದ ಸಮಕಾಲೀನ ಬರಹಗಾರರ ಪಟ್ಟಿಯಲ್ಲಿ ಇವರು ಅಗ್ರಸ್ಥಾನದಲ್ಲಿದ್ದಾರೆ. ಬಾನು ಮುಷ್ತಾಕ್, 1948ರ ಏಪ್ರಿಲ್ 3ರಂದು ಕರ್ನಾಟಕದ ಹಾಸನ ಜಿಲ್ಲೆಯ ವಲಭಬಾಯಿಯಲ್ಲಿ ಜನಿಸಿದರು. ಮುಸ್ಲಿಂ ಸಮುದಾಯಕ್ಕೆ ಸೇರಿದ ಇವರು ಬಿ.ಎಸ್.ಸಿ. ಮತ್ತು ಎಲ್.ಎಲ್.ಬಿ. ಪದವಿಗಳನ್ನ ಪಡೆದಿರುತ್ತಾರೆ. ವಕೀಲೆಯಾಗಿ, ಲೇಖಕಿಯಾಗಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಪ್ರತಿಭೆಯಿಂದಲೇ ಜಗತ್ತಿನಾದ್ಯಂತ ಸಾಹಿತ್ಯ ವೇದಿಕೆಯಲ್ಲಿ ಕನ್ನಡದ ಕೀರ್ತಿಯನ್ನು ಮೇರೆಸಿದ್ದಾರೆ.
1990ರಿಂದ 2023ರವರೆಗೆ ಅವರು ಬರೆದ ಸುಮಾರು 50 ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಮತ್ತು ಇವುಗಳಲ್ಲಿ 12 ಕತೆಗಳನ್ನು ಆಯ್ದು “ಹಸೀನಾ ಮತ್ತು ಇತರ ಕತೆಗಳು” ಎಂಬ ಕಥಾ ಸಂಕಲನವನ್ನು ಮೈಸೂರು ಅಭಿರುಚಿ ಪ್ರಕಾಶನ ಸಂಸ್ಥೆಯ ಗಣಪತಿ ಅವರು ಪ್ರಕಟಿಸಿದ್ದರು. ದೀಪಾ ಭಸ್ತಿಯವರು ಈ ಕೃತಿಯನ್ನು ಇಂಗ್ಲಿಷ್‌ಗೆ (ಹಾರ್ಟ್ ಲ್ಯಾಂಪ್) ಅನುವಾದಿಸಿದರು. ದೀಪಾ ಭಸ್ತಿ, ಕರ್ನಾಟಕದ ಚಿಕ್ಕಮಗಳೂರಿನ ಕೊಪ್ಪದಿಂದ ಬಂದ ಇವರು ಪತ್ರಕರ್ತೆ, ಲೇಖಕಿ ಮತ್ತು ಅನುವಾದಕಿಯಾಗಿ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. “ಹಾರ್ಟ್ ಲ್ಯಾಂಪ್” ಕೃತಿಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸುವ ಮೂಲಕ, ಕನ್ನಡದ ಸಾಹಿತ್ಯಿಕ ಸೊಗಡನ್ನು ಜಗತ್ತಿಗೆ ತಲುಪಿಸಿದ್ದಾರೆ. ದೀಪಾ ಅವರ ಈ ಕೊಡುಗೆಯಿಂದ ಕನ್ನಡ ಭಾಷೆಯ ಸತ್ವವು ಇಂದು ವಿಶ್ವದಾದ್ಯಂತ ಮನ್ನಣೆ ಗಳಿಸಿದೆ.
“ಹಾರ್ಟ್ ಲ್ಯಾಂಪ್” ಕೃತಿಯು ಮುಸ್ಲಿಂ ಸಮುದಾಯದ ಬಾಲಕಿಯರು ಮತ್ತು ಮಹಿಳೆಯರ ದೈನಂದಿನ ಬದುಕಿನ ಸವಾಲುಗಳನ್ನು, ಆಕಾಂಕ್ಷೆಗಳನ್ನು ಮತ್ತು ಭಾವನೆಗಳನ್ನು ಕೇಂದ್ರೀಕರಿಸಿದ ಸಣ್ಣ ಕತೆಗಳ ಸಂಕಲನವಾಗಿದೆ. ಈ ಕತೆಗಳು ಕೇವಲ ವೈಯಕ್ತಿಕ ಕಥನಗಳಾಗದೇ, ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವನ್ನು ಒಳಗೊಂಡಿವೆ. ಬಾನು ಮುಷ್ತಾಕ್ ಅವರ ಬರವಣಿಗೆಯ ಸರಳತೆ ಮತ್ತು ಆಳವಾದ ಭಾವನಾತ್ಮಕ ಸಂವೇದನೆಯು ಓದುಗರ ಮನಸ್ಸನ್ನು ಸೆಳೆಯುತ್ತದೆ. ಈ ಕೃತಿಯ ಅನುವಾದಕಿ ದೀಪಾ ಭಸ್ತಿ ಅವರು ಕನ್ನಡದ ಕೃತಿಯನ್ನ ಚೆನ್ನಾಗಿ ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದಾರೆ, ಇದರಿಂದ ಕನ್ನಡ ಸಾಹಿತ್ಯದ ಸತ್ವವು ಓದುಗರಿಗೆ ಯಶಸ್ವಿಯಾಗಿ ತಲುಪಿದೆ.
ಈ ಇಬ್ಬರು ಮಹಿಳೆಯರ ಸಾಧನೆಯು ಕೇವಲ ಸಾಹಿತ್ಯಿಕ ಗೆಲುವಲ್ಲ, ಮಹಿಳೆಯರ ಧೈರ್ಯ, ಪ್ರತಿಭೆ ಮತ್ತು ಸಂಕಲ್ಪದ ಸಂಕೇತವಾಗಿದೆ. ಮೇ 21, 2025ರಂದು ಲಂಡನ್‌ನಲ್ಲಿ ಘೋಷಿತವಾದ ಈ ಪ್ರಶಸ್ತಿಯು, ಕರ್ನಾಟಕದ ಮಹಿಳೆಯರ ಶಕ್ತಿಯನ್ನು ವಿಶ್ವಕ್ಕೆ ಸಾರಿದೆ. ಬಾನು ಮತ್ತು ದೀಪಾ, ತಮ್ಮ ಕಠಿಣ ಹಿನ್ನೆಲೆಯನ್ನು ಮೀರಿ, ಕನ್ನಡ ಸಾಹಿತ್ಯವನ್ನು ಜಗತ್ತಿನ ಮುಂದೆ ಒಯ್ದು, ಮಹಿಳೆಯರ ಸಾಮರ್ಥ್ಯವನ್ನು ದಾಖಲಿಸಿದ್ದಾರೆ. ಈ ಗೆಲುವು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದ್ದು, ಮಹಿಳೆಯರ ಸಾಧನೆಯ ಜಾಗತಿಕ ಆಚರಣೆಯಾಗಿದೆ.







