ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್ ಸಮಾಲೋಚನೆ
ಬೆಂಗಳೂರು: ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ, ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 3ನೇ ಕರ್ನಾಟಕ ಸಂಘಟಕರ ಸಮಾವೇಶವನ್ನು ಮೇ 25, 2026ರ ಸೋಮವಾರದಂದು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಅಂದು ಬೆಳಿಗ್ಗೆ 10:30 ರಿಂದ ರಾತ್ರಿ 8:00 ಗಂಟೆಯವರೆಗೆ ಈ ಬೃಹತ್ ಸಾಂಸ್ಕೃತಿಕ ಸಮಾವೇಶ ಮತ್ತು ಸಮಾಲೋಚನಾ ಸಭೆ ನಡೆಯಲಿದೆ.
ಪ್ರಸ್ತುತ ಸಾಂಸ್ಕೃತಿಕ ರಂಗ ಎದುರಿಸುತ್ತಿರುವ ಸವಾಲುಗಳು, ಸಂಘಟನೆಗಳ ಅಸ್ತಿತ್ವದ ಬಿಕ್ಕಟ್ಟು ಮತ್ತು ಸರ್ಕಾರದ ಮುಂದಿಡಬೇಕಾದ ತುರ್ತು ಒತ್ತಾಯಗಳ ಕುರಿತು ಚರ್ಚಿಸಲು ನಾಡಿನ ಹಿರಿಯ ಸಾಹಿತಿಗಳು, ಕಲಾವಿದರು, ಚಿಂತಕರು ಹಾಗೂ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳ ಅಧ್ಯಕ್ಷರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭ ಬೆಳಿಗ್ಗೆ 10:30
ಹಿರಿಯ ಸಾಂಸ್ಕೃತಿಕ ಚಿಂತಕ ಹಾಗೂ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಂಘಟಕರಾದ ಶ್ರೀನಿವಾಸ್ ಜಿ. ಕಪ್ಪಣ್ಣ ಮೊದಲ ಮಾತುಗಳನ್ನಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಬಿ.ಎಸ್. ಮಂಜುನಾಥಸ್ವಾಮಿ ಉಪಸ್ಥಿತರಿರಲಿದ್ದಾರೆ. ಸಮಾವೇಶದ ಅಧ್ಯಕ್ಷತೆಯನ್ನು ರಾಜಶೇಖರ ಕದಂಬ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಸೇರಿದಂತೆ ನಾಡಿನ ವಿವಿಧ ಪ್ರಮುಖ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಉಪಸ್ಥಿತರಿರುತ್ತಾರೆ.
ಪ್ರಮುಖ ಗೋಷ್ಠಿಗಳು ಮತ್ತು ವಿಷಯಗಳು:
ದಿನವಿಡೀ ನಡೆಯುವ ಈ ಸಮಾವೇಶದಲ್ಲಿ ಸಾಂಸ್ಕೃತಿಕ ವಲಯದ ಪ್ರಮುಖ ವಿಷಯಗಳ ಕುರಿತು ಮೂರು ಪ್ರತ್ಯೇಕ ಗೋಷ್ಠಿಗಳು ಹಾಗೂ ಮುಕ್ತ ಸಂವಾದ ನಡೆಯಲಿವೆ:
- ಮೊದಲ ಗೋಷ್ಠಿ : ಮಧ್ಯಾಹ್ನ 12:00ಕ್ಕೆ: “ಸಾಹಿತಿ, ಕಲಾವಿದರು ಮತ್ತು ಕನ್ನಡ, ಸಂಸ್ಕೃತಿ ಇಲಾಖೆಯ ಸಂಬಂಧಗಳು”
- ಎರಡನೇ ಗೋಷ್ಠಿ: ಮಧ್ಯಾಹ್ನ 2:00ಕ್ಕೆ: “ಅಕಾಡೆಮಿ, ಪ್ರಾಧಿಕಾರ, ರಂಗಾಯಣ ಹಾಗೂ ಟ್ರಸ್ಟ್ಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಹೊಣೆಗಾರಿಕೆ”
- ಮೂರನೇ ಗೋಷ್ಠಿ: ಮಧ್ಯಾಹ್ನ 3:30ಕ್ಕೆ: “ಸಂಘ-ಸಂಸ್ಥೆಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನ”
- ಸಂಜೆ 5:00ಕ್ಕೆ: ಅಧ್ಯಕ್ಷರೊಂದಿಗೆ ಸಂವಾದ ಹಾಗೂ ‘ರಂಗಗೌರವ’ ಸಮರ್ಪಣೆ ನಡೆಯಲಿದೆ.
ಸಮಾರೋಪ ಸಮಾರಂಭ: ಸಂಜೆ 6:00:
ಹಿರಿಯ ನಾಟಕಕಾರರಾದ ಡಾ. ರಾಜಪ್ಪ ದಳವಾಯಿ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭೂಮಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕರಾದ ಡಾ. ಎಂ.ಎಸ್. ಮೂರ್ತಿ, ಬುಡ್ಡಿದೀಪ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ ರಂಗ ಸಮಾಜ ಹಾಗೂ ವಿವಿಧ ಅಕಾಡೆಮಿಗಳ ಗಣ್ಯ ಸದಸ್ಯರು ಉಪಸ್ಥಿತರಿರುತ್ತಾರೆ.
ಸರ್ಕಾರದ ಮುಂದಿರುವ ಪ್ರಮುಖ ಬೇಡಿಕೆಗಳು:
- ಸಾಂಸ್ಕೃತಿಕ ನೀತಿ ಜಾರಿ: ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ಸಮಗ್ರ ‘ಸಾಂಸ್ಕೃತಿಕ ನೀತಿ’ಯನ್ನು ತಕ್ಷಣ ಜಾರಿಗೊಳಿಸಬೇಕು.
- ಬಜೆಟ್ ಹೆಚ್ಚಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಬಜೆಟ್ ಅನ್ನು 1000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕು.
- ಕಲಾವಿದರ ಹಿತರಕ್ಷಣೆ: ವೃದ್ಧಾಪ್ಯದಲ್ಲಿರುವ ಹಿರಿಯ ಕಲಾವಿದರ ಮಾಸಾಶನವನ್ನು ಕನಿಷ್ಠ 5000 ರೂಪಾಯಿಗಳಿಗೆ ಹೆಚ್ಚಿಸಬೇಕು.
- ಅಕಾಡೆಮಿಗಳ ಬಲವರ್ಧನೆ: ಸಾಂಸ್ಕೃತಿಕ ಅಕಾಡೆಮಿಗಳ ವಾರ್ಷಿಕ ಅನುದಾನವನ್ನು 5 ಕೋಟಿ ರೂಪಾಯಿಗಳಿಗೆ ಏರಿಸಬೇಕು.
- ಸಂಘ-ಸಂಸ್ಥೆಗಳ ಪ್ರೋತ್ಸಾಹ: ಸಾಂಸ್ಕೃತಿಕ ರಂಗವನ್ನು ಜೀವಂತವಾಗಿಟ್ಟಿರುವ ಸಂಘ-ಸಂಸ್ಥೆಗಳಿಗೆ ನೀಡುವ ಒಟ್ಟು ಅನುದಾನವನ್ನು 50 ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕು ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂಪಾಯಿ ಅನುದಾನ ನೀಡಬೇಕು.
- ರಂಗಮಂದಿರಗಳ ದುರಸ್ತಿ: ರಾಜ್ಯಾದ್ಯಂತ ಕೆಟ್ಟುಹೋಗಿರುವ ಎಲ್ಲಾ ಜಿಲ್ಲಾ ರಂಗಮಂದಿರಗಳನ್ನು ತಕ್ಷಣ ಸರಿಪಡಿಸಬೇಕು.
ನಾಡಿನ ರಂಗಕರ್ಮಿಗಳು, ಸಾಂಸ್ಕೃತಿಕ ಸಂಘಟಕರು ಹಾಗೂ ಕಲಾಭಿಮಾನಿಗಳು ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಮಾವೇಶದ ಅಧ್ಯಕ್ಷರಾದ ರಾಜಶೇಖರ ಕದಂಬ, ಸ್ವಾಗತ ಸಮಿತಿಯ ಡಾ. ಪ್ರದೀಪ್ ಮಾಲ್ಗುಡಿ, ಸಂಸ ಸುರೇಶ್ ಹಾಗೂ ಜಯಶಂಕರ್ ಬೆಳಗುಂಬ ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 9844086993, 8050643467











