ಅರಮನೆ ಮೈದಾನ ಜಮೀನು ವಿವಾದ: ಸುಪ್ರೀಂ ಕೋರ್ಟ್‌ಲ್ಲಿ ರಾಜ್ಯ ಸರಕಾರಕ್ಕೆ ಭಾರೀ ಹಿನ್ನಡೆ

ಬೆಂಗಳೂರಿನ ಅರಮನೆ ಮೈದಾನಕ್ಕೆ ಸಂಬಂಧಿಸಿದ 15 ಎಕರೆ ಜಾಗವನ್ನು ರಸ್ತೆ ಅಗಲೀಕರಣಕ್ಕಾಗಿ ವಶಪಡಿಸಿಕೊಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೈಸೂರು ಒಡೆಯರ್ ಕುಟುಂಬಕ್ಕೆ ₹3,400 ಕೋಟಿ ಟಿಡಿಆರ್ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

ನವದೆಹಲಿ: ಬೆಂಗಳೂರಿನ ಅರಮನೆ ಮೈದಾನಕ್ಕೆ ಸಂಬಂಧಿಸಿದ 15 ಎಕರೆ ಜಾಗವನ್ನು ರಸ್ತೆ ಅಗಲೀಕರಣಕ್ಕಾಗಿ ವಶಪಡಿಸಿಕೊಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೈಸೂರು ಒಡೆಯರ್ ಕುಟುಂಬಕ್ಕೆ ₹3,400 ಕೋಟಿ ಮೌಲ್ಯದ ವರ್ಗಾಯಿಸಬಲ್ಲ ಅಭಿವೃದ್ಧಿ ಹಕ್ಕುಪತ್ರ (TDR) ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ಈ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ಭಾರೀ ಆರ್ಥಿಕ ಹೊರೆಯಾಗಿದ್ದು, ಗಮನಾರ್ಹ ಹಿನ್ನಡೆಯಾಗಿದೆ.

ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಯ ಅಗಲೀಕರಣಕ್ಕಾಗಿ ಅರಮನೆ ಮೈದಾನದ 15 ಎಕರೆ ಜಾಗವನ್ನು 1994ರಲ್ಲಿ ಸರ್ಕಾರ ವಶಪಡಿಸಿಕೊಂಡಿತ್ತು. ಈ ಜಾಗಕ್ಕೆ ₹1 ಲಕ್ಷ ಕೋಟಿಗೂ ಅಧಿಕ ಮೌಲ್ಯದ TDR ನೀಡಬೇಕೆಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕುಟುಂಬವು ಮನವಿ ಮಾಡಿದ್ದರು. ಆದರೆ, ರಾಜ್ಯ ಸರ್ಕಾರವು ಈ ಬೇಡಿಕೆಯನ್ನು ತಿರಸ್ಕರಿಸಿತ್ತು, ಇದರಿಂದಾಗಿ ಒಡೆಯರ್ ಕುಟುಂಬವು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಹೈಕೋರ್ಟ್ ರಾಜ್ಯ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಒಡೆಯರ್ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ರಾಜ್ಯ ಸರ್ಕಾರವು ತನ್ನ ವಾದದಲ್ಲಿ, “1994ರಲ್ಲಿ ಜಾಗವನ್ನು ವಶಪಡಿಸಿಕೊಳ್ಳಲಾಯಿತಾದರೂ, ಒಡೆಯರ್ ಕುಟುಂಬವು 2024ರ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಪರಿಹಾರ ಕೇಳುತ್ತಿದ್ದಾರೆ. ಅರಮನೆ ಮೈದಾನದ ಒಟ್ಟು 462 ಎಕರೆ ಜಾಗಕ್ಕೆ ₹1 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ನೀಡುವುದು ಸಾಧ್ಯವಿಲ್ಲ,” ಎಂದು ವಾದಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ ಈ ವಾದವನ್ನು ತಿರಸ್ಕರಿಸಿ, ₹3,400 ಕೋಟಿ ಮೌಲ್ಯದ TDR ನೀಡುವಂತೆ ಆದೇಶಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, 2025ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಒಂದು ವಾರದೊಳಗೆ TDR ನೀಡುವಂತೆ ಆದೇಶಿಸಿತ್ತು. ಆದರೆ, ಜನವರಿ 29, 2025ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿ, ಬೆಂಗಳೂರಿನ ಹೃದಯಭಾಗದಲ್ಲಿರುವ ಈ ಜಾಗವನ್ನು ತನಗೆ ಬೇಡವೆಂದು ತಿಳಿಸಿತ್ತು. ಒಡೆಯರ್ ಕುಟುಂಬವು, “ಈ ಜಾಗವು ಈಗ ರಸ್ತೆಯಾಗಿ ಬದಲಾಗಿದ್ದರಿಂದ, ಪರಿಹಾರವನ್ನು ನೀಡಲೇಬೇಕು,” ಎಂದು ವಾದಿಸಿತು. ಸುಪ್ರೀಂ ಕೋರ್ಟ್ ಈ ವಾದವನ್ನು ಒಪ್ಪಿಕೊಂಡು, ಕರ್ನಾಟಕ ಸರ್ಕಾರಕ್ಕೆ TDR ಮೂಲಕ ಪರಿಹಾರ ನೀಡುವಂತೆ ಸೂಚಿಸಿತು.

TDR ಎಂದರೇನು?

ವರ್ಗಾಯಿಸಬಲ್ಲ ಅಭಿವೃದ್ಧಿ ಹಕ್ಕುಪತ್ರ (Transferable Development Rights – TDR) ಎನ್ನುವುದು ಸರ್ಕಾರವು ವಶಪಡಿಸಿಕೊಂಡ ಜಾಗದ ಬದಲಿಗೆ ಒದಗಿಸುವ ಪರಿಹಾರದ ಪ್ರಮಾಣಪತ್ರವಾಗಿದೆ. ಈ ಪತ್ರದಲ್ಲಿ ಜಾಗದ ನಿರ್ದಿಷ್ಟ ಮೌಲ್ಯವನ್ನು ದಾಖಲಿಸಲಾಗುತ್ತದೆ. ಜಾಗದ ಮೂಲ ಮಾಲೀಕರು ಈ TDR ಪತ್ರವನ್ನು ಇತರರಿಗೆ ವರ್ಗಾಯಿಸಿ, ಹಣವನ್ನು ಪಡೆಯಬಹುದು ಅಥವಾ ಅಭಿವೃದ್ಧಿ ಯೋಜನೆಗಳಿಗೆ ಬಳಸಬಹುದು. 

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »