ಯುರೋಪ್‌ನ ಅತಿದೊಡ್ಡ ವೈಮಾನಿಕ ಕಂಪನಿಯಾದ ಏರ್‌ಬಸ್ ಹಾಗೂ ಟಾಟಾ ಸಮೂಹದ ಏರೋಸ್ಪೇಸ್ ವಿಭಾಗವಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ಜೋಡಣೆ ಕಾರ್ಖಾನೆಯನ್ನು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಸ್ಥಾಪಿಸಲು ನಿರ್ಧರಿಸಿವೆ. ಬೆಂಗಳೂರಿನಿಂದ ಕೇವಲ ಎರಡು ಗಂಟೆಗಳ ದೂರದಲ್ಲಿರುವ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಈ ಅತ್ಯಾಧುನಿಕ ಘಟಕವು ಶೀಘ್ರದಲ್ಲಿ ತಲೆಎತ್ತಲಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರತಿಷ್ಠಿತ ಯೋಜನೆಯನ್ನು ಪಡೆಯಲು ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳು ಕರ್ನಾಟಕಕ್ಕೆ ತೀವ್ರ ಪೈಪೋಟಿ ನೀಡಿದ್ದವು. ಆದರೆ, ಕರ್ನಾಟಕದಲ್ಲಿ ಈಗಾಗಲೇ ವೈಮಾನಿಕ ಮತ್ತು ಏರೋಸ್ಪೇಸ್ ಕೈಗಾರಿಕೆಗಳಿಗೆ ಸಂಬಂಧಿಸಿದ ಕಂಪನಿಗಳ ಸಾಂದ್ರತೆ ಇರುವುದರಿಂದ, ಏರ್‌ಬಸ್ ಮತ್ತು ಟಾಟಾ ಕಂಪನಿಗಳು ಕೋಲಾರವನ್ನೇ ಆಯ್ಕೆ ಮಾಡಿಕೊಂಡಿವೆ.
ವಿಶ್ವದಾದ್ಯಂತ ಏರ್‌ಬಸ್ ಕಂಪನಿಯು ಫ್ರಾನ್ಸ್, ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಮಾತ್ರ ಹೆಲಿಕಾಪ್ಟರ್ ಜೋಡಣೆ ಘಟಕಗಳನ್ನು ಹೊಂದಿದ್ದು, ಕೋಲಾರದ ಘಟಕವು ಇದರ ನಾಲ್ಕನೇ ಘಟಕವಾಗಲಿದೆ. ಭಾರತೀಯ ವಾಯುಪಡೆಗಾಗಿ ಏರ್‌ಬಸ್ ಮತ್ತು ಟಿಎಎಸ್‌ಎಲ್ ಜಂಟಿಯಾಗಿ ಎಚ್125 ಹೆಲಿಕಾಪ್ಟರ್‌ಗಳ ಅಂತಿಮ ಜೋಡಣೆ ಘಟಕವನ್ನು ಕೋಲಾರದಲ್ಲಿ ಸ್ಥಾಪಿಸಲಿವೆ. ಆರಂಭಿಕ ಹಂತದಲ್ಲಿ ವಾರ್ಷಿಕ 10 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಗುರಿಯನ್ನು ಕಂಪನಿಗಳು ಹೊಂದಿವೆ. ಮುಂದಿನ ಎರಡು ದಶಕಗಳಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ 500 ಲಘು ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಇರಬಹುದು ಎಂದು ಏರ್‌ಬಸ್ ಅಂದಾಜಿಸಿದೆ.
ಈ ಯೋಜನೆಯಿಂದ ಕೋಲಾರ ಜಿಲ್ಲೆಯ ಆರ್ಥಿಕತೆಗೆ ಗಣನೀಯ ಉತ್ತೇಜನ ಸಿಗಲಿದ್ದು, ಸ್ಥಳೀಯ ಉದ್ಯೋಗ ಸೃಷ್ಟಿಗೂ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಲಿದೆ. ಕರ್ನಾಟಕವು ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರತದ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಬಲಗೊಳ್ಳಲಿದೆ.







