ಮರಗಳು ಮನುಕುಲದ ಜೀವನಾಡಿ

ಮರಗಳು ಜೀವನ, ಸಂಸ್ಕೃತಿ, ಇತಿಹಾಸ ಮತ್ತು ಪರಿಸರದ ಸಂಕೇತಗಳಾಗಿ, ಮನುಷ್ಯರೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ, ಆದರೆ ಹವಾಮಾನ ಬದಲಾವಣೆ, ಕಾಡ್ಗಿಚ್ಚು, ನಗರೀಕರಣ ಮತ್ತು ಕೃಷಿ ವಿಸ್ತರಣೆಯಿಂದಾಗಿ ದೊಡ್ಡ, ಪುರಾತನ ಕಣ್ಮಣಿ ಮರಗಳು ಅಳಿವಿನಂಚಿನಲ್ಲಿದ್ದು, ಇವುಗಳ ಸಂರಕ್ಷಣೆಗೆ ಜಾಗೃತಿ ಮತ್ತು ಸಂಶೋಧನೆಯ ಅಗತ್ಯವಿದೆ ಎಂದು ಡಾ. ಎಸ್‌. ನಟೇಶ್‌ ತಿಳಿಸಿದ್ದಾರೆ.

ಪುಟ್ಟ ಚುಕ್ಕೆಯಂಥದ್ದೊಂದು ಬೀಜ ಮೊಳೆತು, ಗಗನವನ್ನು ಮುತ್ತಿಕ್ಕುವ ರೆಡ್‌ವುಡ್‌ ಮರವಾಗಿಯೋ, ಎಕರೆಗಟ್ಟಲೆ ಹರಡಿಕೊಂಡ ಅರಳಿಯಾಗಿಯೋ ಬೆಳೆಯುತ್ತದಲ್ಲ, ಅದಕ್ಕಿಂತ ಬೇರೆ ಪವಾಡ ಇನ್ನೊಂದಿಲ್ಲ. ಮರಗಳು ನಮ್ಮ ಒಳಗನ್ನು ತಟ್ಟುವ ಜೀವಿಗಳು. ನೆಲದೊಳಗೆ ಆಳವಾಗಿ ನೆಲೆಯಾದ ಅವುಗಳ ಬೇರುಗಳು, ಸಾಮರ್ಥ್ಯದ ಪ್ರತೀಕ. ಗಾಳಿಯಲ್ಲಿ ಮೇಲೆದ್ದು ನಿಂತ, ಗಟ್ಟಿಯಾಗಿ, ಧೃಡವಾಗಿದ್ದರೂ, ಮಂದಮಾರುತದಲ್ಲಿ ತೊನೆದಾಡುವ ಕಾಂಡ, ರೆಂಬೆಗಳು, ಸಹನೆ, ಕಷ್ಟಸಹಿಷ್ಣುತೆಯ ಬಿಂಬಗಳು.

ಮರಗಳು ಅಪಾಯ ಎದುರಾದಾಗ ಓಡಿಹೋಗುವ ಪ್ರಾಣಿಗಳಂತಲ್ಲ. ಉಗ್ರವಾದ, ಕೋಟಲೆಯ ಪರಿಸರದಲ್ಲಿಯೂ, ಎಲ್ಲ ಅಡೆತಡೆಗಳನ್ನೂ ಮೀರಿ ಬದುಕುಳಿಯುವ ಸಾಮರ್ಥ್ಯಶಾಲಿಗಳು ಇವು. ನೂರಲ್ಲ, ಸಾವಿರಾರು ವರ್ಷಗಳವರೆಗೂ ಬದುಕುವ ಶಕ್ತಿಯುಳ್ಳ ಮರಗಳು ಇತಿಹಾಸದೊಡನೆ ನಮ್ಮನ್ನು ಕೂಡಿಸುವ ಸೇತುವೆಗಳು. ಮರಗಳಿಗೂ ಜೀವವಿದೆ. ಅವು ಕೂಡ ನೋವು, ನಲಿವನ್ನು ಅನುಭವಿಸುತ್ತವೆ ಎಂದು ಹಲವು ಸಂಸ್ಕೃತಿಗಳು ನಂಬುತ್ತವೆ. ಮರಗಳು ಬದುಕಿದ್ದಾಗ ಎಷ್ಟು ಘನತೆಯಿಂದ ಕಾಣುತ್ತವೆಯೋ, ಸಾವಿನಲ್ಲಿಯೂ ಅಷ್ಟೇ ಅಮೋಘ. ಇತಿಹಾಸದಲ್ಲಿ ದಾಖಲಾಗಿರುವ ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ನೃತ್ಯ, ಸಂಗೀತ, ಕಾವ್ಯ, ಪ್ರಬಂಧ, ಕಲೆ ಹಾಗೂ ಶಿಲ್ಪಕಲೆಗೆ ಮರಗಳು ಸ್ಪೂರ್ತಿಯಾಗಿರುವುದು ಅಚ್ಚರಿಯ ವಿಷಯವೇನಲ್ಲ. ಮರಗಳನ್ನು ಮಾದರಿಯನ್ನಾಗಿ, ಪ್ರತೀಕಗಳನ್ನಾಗಿ, ಉದಾಹರಣೆಯಾಗಿ ಕಾಣಲಾಗಿದೆ. ಮರಗಳು ಸಂಸ್ಕೃತಿಗಳನ್ನು ಪ್ರಭಾವಿಸಿರುವುದಷ್ಟೆ ಅಲ್ಲದೆ, ತಲೆತಲೆಮಾರುಗಳ ಕುಶಲಕರ್ಮಿಗಳನ್ನು ಹುರಿದುಂಬಿಸಿದ ಕಲೆಗಳ ಆಧಾರಸ್ತಂಭಗಳೂ ಹೌದು. ಹಲವು ನಾಗರೀಕತೆಗಳಲ್ಲಿ ಕಾಣುವ ಸ್ವರ್ಗದ ಪರಿಕಲ್ಪನೆಯಲ್ಲಿ ಮರಗಳೇ ಕೇಂದ್ರಬಿಂದು. ಅಥವಾ ಅವುಗಳೇ ಸ್ವರ್ಗದ ಮೆಟ್ಟಿಲ ಏಣಿಗಳು ಎನಿಸಿವೆ. ಬೈಬಲ್ಲಿನಲ್ಲಿ ಸ್ವರ್ಗವನ್ನು ಲೆಬನಾನ್‌ ಸೆಡಾರ್‌ ಮರಗಳಿಂದ ಸಮೃದ್ಧವಾದ ತೋಟ ಎಂದೇ ವಿವರಿಸಲಾಗಿದೆ. ಅದೇ ಗ್ರೀಕರ ನೋರ್ಸೆ ಪುರಾಣಗಳು ಇಗ್ದಾಸ್ರಿಲ್‌ ಎನ್ನುವ ಬೂದಿ ಮರವನ್ನು  ದೇವರುಗಳ ನೆಲೆ ಎಂದೂ, ಅದರ  ಒಂದು ಬೇರು ವಲ್ಹಾಲಾ ಎನ್ನುವ ಶೂರರುಗಳ ನೆಲೆಯೆಂದೂ, ಮತ್ತೊಂದು ಬೇರನ್ನು ನರಕವೆಂದೂ ಗುರುತಿಸುತ್ತವೆ. ಬೌದ್ಧ, ಹಿಂದೂ ಹಾಗೂ ಜೈನರ ಧಾರ್ಮಿಕ ಗ್ರಂಥಗಳಲ್ಲಿ ಮರಗಳು ಮತ್ತು ದೇವರು, ಹಾಗೂ ಗುರುಗಳ ಜೊತೆಗೆ ಅವುಗಳಿಗಿರುವ ಸಂಬಂಧಗಳ ಉಲ್ಲೇಖ ಯಥೇಚ್ಛವಾಗಿದೆ. ಮನುಷ್ಯರು ಹಾಗೂ ಮರಗಳ ನಡುವಿನ ಸಂಬಂಧ ಇಷ್ಟೊಂದು ಆಳವಾದದ್ದು.  

ಮನುಷ್ಯರಿಗೆ ನಿಸರ್ಗದ  ಜೊತೆಗಿನ ಆಪ್ತತೆಯೇ ಇದಕ್ಕೆ ಕಾರಣ ಎನ್ನುವ ವಾದವೊಂದಿದೆ. ಇದನ್ನು ಬಯೋಫೀಲಿಯ ಅಥವಾ ಜೀವಿಪ್ರೇಮ ಎನ್ನೋಣ. ಈ ಸಹಜ ಅನುಭಾವವೇ ನಿಸರ್ಗದ ಕೆಲವು ಅಂಶಗಳಿಗೆ ನಾವು ಹೆಚ್ಚಿನ ಪ್ರಾಮುಖ್ಯ ನೀಡುವಂತೆ ಮಾಡಿವೆಯಂತೆ. ಬಯೋಫೀಲಿಯ ಎನ್ನುವ ಪದವನ್ನು ಜರ್ಮನ್‌ ಮನೋವಿಜ್ಞಾನಿ ಹಾಗೂ ತತ್ವಶಾಸ್ತ್ರಜ್ಞ ಎರಿಕ್‌ ಫ್ರಾಮ್‌ 1964ರಲ್ಲಿ ವಿವರಿಸಿದ್ದ. ಅವನ ಪ್ರಕಾರ ಜೀವ ಹಾಗೂ ಜೀವವಿರುವ ಎಲ್ಲದರ ಬಗೆಗಿನ ಉತ್ಕಟ ಪ್ರೀತಿ ಇದು. 1984ರಲ್ಲಿ ಈ ಪದವನ್ನು  ಇನ್ನಷ್ಟು ಜನಪ್ರಿಯಗೊಳಿಸಿದ ಪುಲಿಟ್ಸರ್‌ ಪ್ರಶಸ್ತಿ ವಿಜೇತ ವಿಜ್ಞಾನಿ, ಇ.ಓ.ವಿಲ್ಸನ್‌ ಪ್ರಕಾರ ಇದು ಇತರೆ ಜೀವಿಗಳ ಜೊತೆಗೆ ಸಹಬಾಳ್ವೆಯನ್ನು ನಡೆಸುವ ನಮ್ಮ ಬಯಕೆ.

ಅನಂತರದ ದಿನಗಳಲ್ಲಿ ಪ್ರಕಟವಾದ ಹಲವು ಸಂಶೋಧನಾ ಪ್ರಬಂಧಗಳು ಮನುಷ್ಯರಲ್ಲಿ ನಿಸರ್ಗಪ್ರೇಮ ಎನ್ನುವುದು ಆಳವಾಗಿ ಬೇರೂರಿದೆ ಎಂದು ತಿಳಿಸಿವೆ. ಉದಾಹರಣೆಗೆ, ಖಾಯಿಲೆ ಅಥವಾ ಶಸ್ತ್ರಕ್ರಿಯೆಯಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ, ಪ್ರಕೃತಿಯ ದೃಶ್ಯಗಳನ್ನು ನೋಡುವ ಅಥವಾ ಕಾಣಬಲ್ಲಂತಹವರು ಶೀಘ್ರವಾಗಿ ಚೇತರಿಸಿಕೊಳ್ಳಬಲ್ಲರು, ಮಾನಸಿಕ ಒತ್ತಡಗಳನ್ನು ಸಹಿಸಿಕೊಳ್ಳಬಲ್ಲರು.  ದೀರ್ಘ ಕಾಲ ಗಮನ ಹರಿಸಬೇಕಾದ ಕಷ್ಟದ ಕೆಲಸಗಳನ್ನು ಇಂತಹವರು, ನಿಸರ್ಗದ ಒಡನಾಟ ಇಲ್ಲದವರಿಗಿಂತಲೂ ಸಮರ್ಪಕವಾಗಿ ಮಾಡಬಲ್ಲರು.

ಆದರೆ, ಈ ಬಯೋಫೀಲಿಯಾ ತರ್ಕಕ್ಕೂ ಮಿತಿಯಿದೆ. ಉದಾಹರಣೆಗೆ, ಮನುಷ್ಯರು ಪರಿಸರವನ್ನು ರಕ್ಷಿಸುವುದಕ್ಕಿಂತಲೂ ನಾಶ ಮಾಡಿರುವುದೇ ಹೆಚ್ಚು.. ಜಾಗತಿಕವಾಗಿ ಕಾಣುವ ಅಗಣ್ಯ ಪರಿಸರ ಸಮಸ್ಯೆಗಳೇ ಇದಕ್ಕೆ ಪುರಾವೆ. ಅಲ್ಲದೆ ಎಲ್ಲ ಜೀವಿಗಳನ್ನೂ ಜನರು ಸಮಾನವಾಗಿ ಗೌರವಿಸುವುದಿಲ್ಲ. ಹಾವು, ಜೇಡ ಮೊದಲಾದ ಕೆಲವು ಜೀವಿಗಳು ಹಾಗೂ ದಟ್ಟವಾದ ಕಾಡು ಮನುಷ್ಯರಲ್ಲಿ ಪ್ರೀತಿಯನ್ನಲ್ಲ, ಭಯವನ್ನು ಹುಟ್ಟಿಸುತ್ತವೆ. ಜನರನ್ನು ದೂರವಿಡುತ್ತವೆ. ಅಂದರೆ ನಾವು ನಮ್ಮ ಲಾಭಕ್ಕೆ ಬೇಕಾದ ಸಂಪನ್ಮೂಲಗಳನ್ನು ಕೊಡುವುದರಿಂದ ಪರಿಸರಕ್ಕೆ ಬೆಲೆ ಕೊಡುತ್ತೇವೆಯೇ ಹೊರತು ಅದೊಂದು ಸಂರಕ್ಷಿಸಬೇಕಾದ ಸಿರಿ ಎಂದಲ್ಲ!. ಸಸ್ಯಗಳು ಹಾಗೂ ಪ್ರಾಣಿಗಳ ಈ ಶೋಷಣೆಯ ಚರಿತ್ರೆ ಇಂದು, ನಿನ್ನಿನದಲ್ಲ. ಕೆಲವೊಮ್ಮೆ ಅಗಾಧ ಪ್ರಮಾಣದ ಕ್ರೌರ್ಯ ನಡೆಸಿರುವ ಚರಿತ್ರೆಯೂ ಉಂಟು. ಅದೇನೇ ಇರಲಿ. ಮನುಷ್ಯರು ಹಾಗೂ ನಿಸರ್ಗದ ನಡುವಣ ಸಂಬಂಧ, ಒಟ್ಟಾರೆ ಮರಗಳ ಜೊತೆಗೆ ಎನ್ನಲಾಗದು.  ನಿರ್ದಿಷ್ಟವಾದ ಕೆಲವು ಮರಗಳು ಅಥವಾ ಮರಗಳ ಗುಂಪಿನ ಜೊತೆಗೆ, ಬೇರೆ, ಬೇರೆ ಕಾರಣಗಳಿಂದಾಗಿ, ವಿಶೇಷವಾದೊಂದು ಬಾಂಧವ್ಯ ಬೆಳೆದಿರುವುದೂ ಉಂಟು. ಇಂತಹ ಕೆಲವು ವಿಶಿಷ್ಟವಾದ, ಕಣ್ಮಣಿ ಮರಗಳ ಬಗ್ಗೆ ಈ ಲೇಖನ.

ಕಣ್ಮಣಿ ಮರ ಎಂದರೇನು?

ಪ್ರತಿಯೊಂದು ದೇಶದಲ್ಲಿಯೂ ವಿಶೇಷವಾದ ಕೆಲವು ಮರಗಳಿರುತ್ತವೆ. ವಿಶಿಷ್ಟವಾದ, ಗಮನಾರ್ಹವಾದ ಗುಣ ಹಾಗೂ ಮೌಲ್ಯಗಳಿರುವುದರಿಂದಾಗಿ ಕೆಲವು ಮರಗಳನ್ನು ಸಮುದಾಯದ ವಿಶಿಷ್ಟ ಸಂಪನ್ಮೂಲಗಳೆಂದು ಪರಿಗಣಿಸಲಾಗುತ್ತದೆ. ಇಂತಹ ಮರಗಳನ್ನು ಚಾರಿತ್ರಿಕ, ಪಾರಂಪರಿಕ, ಕಣ್ಮಣಿ, ಪ್ರಮುಖ, ಅಥವಾ ವಿಶೇಷ ಆಸಕ್ತಿಯ ಮರಗಳು ಎಂದು ಗುರುತಿಸುತ್ತೇವೆ. ಇಂತಹ ಬಿರುದನ್ನು ಗಳಿಸಲು ಮರಗಳಿಗೆ ಇರಬೇಕಾದ ಗುಣಗಳೂ ವೈವಿಧ್ಯಮಯ ಎಂದು ಈ ಹೆಸರುಗಳೇ ಸೂಚಿಸುತ್ತವೆ. ಕಣ್ಮಣಿ ಮರಗಳನ್ನು ಬೇರೆ ತೆರನಾಗಿಯೂ ವಿವರಿಸಬಹುದು. ವಿವರಣೆ ಏನೇ ಇರಲಿ, ಅರ್ಥ ಒಂದೇ. ಈ ಮರಗಳು ಎದ್ದು ತೋರುವ ಯಾವುದೋ ಗುಣದಿಂದಾಗಿ ಅಸಾಮಾನ್ಯ ಎನ್ನಿಸುತ್ತವೆ. ಬೆರಗನ್ನೂ, ಕುತೂಹಲವನ್ನೂ, ಗೌರವ ಭಾವವನ್ನೂ,  ಅಚ್ಚರಿಯನ್ನೂ ಉಂಟು ಮಾಡುತ್ತವೆ.  ಕೆಲವೊಮ್ಮೆ ಇಡೀ ಸಮುದಾಯಕ್ಕೆ  ಮುಖ್ಯ ಎನ್ನಿಸುವುದರಿಂದ ಅವು ಪ್ರಮುಖ ಎನ್ನಿಸುತ್ತವೆ. ಇಂತಹ ಮರಗಳು ನಿಸರ್ಗದ ಜೊತೆಗೆ ನಮಗಿರುವ ದೀರ್ಘ ನಂಟಿನ ಪ್ರತೀಕಗಳು. ಈ ನಂಟನ್ನು ನಾವು ಗುರುತಿಸಬೇಕು. ಮರಗಳನ್ನು ನಾವು ಗೌರವಿಸಬೇಕು. ಮತ್ತು ನಮ್ಮ ಸಂತತಿಗಳಿಗೂ ಈ ಮರಗಳ ಸಂಗಾತ ಸಿಗುವಂತೆ ಕಾಪಿಡಬೇಕು. ಇಂತಹ ಮರಗಳನ್ನು ಕಣ್ಮಣಿ ಎಂದು ಹೆಸರಿಸಬಹುದು..

ಕಣ್ಮಣಿ ಎಂದು ಗುರುತಿಸಿದ ಮರಗಳ ನೆನಪು ನಮ್ಮ ಮನಸ್ಸಿನಲ್ಲಿ ಅಚ್ಚಳಿದಯದೆ ಹಚ್ಚ ಹಸಿರಾಗಿ ಉಳಿಯುತ್ತವೆ. ಗಿಡ್ಡ ಮರಗಳ ಕಾಡಿನಲ್ಲಿರುವ ಏಕಾಂಗಿ ದೈತ್ಯ ಮರವಿರಬಹುದು, ಕಾಡಿನ ರಕ್ಷಕ ಎನ್ನಿಸಿದೊಂದು ವೃಕ್ಷವಿರಬಹುದು. ಎಲ್ಲರ ಹರಕೆಯನ್ನೂ ಪೂರೈಸುವ ಮರವಿಬಹುದು. ಸಸ್ಯಶಾಸ್ತ್ರದ ಪ್ರಕಾರ ಅಪರೂಪವೆನ್ನಿಸಿದ ಮರವೇ ಇರಬಹುದು. ಒಟ್ಟಾರೆ ಇಂತಹ ಕಣ್ಮಣಿಗಳು ಕಾಲ-ದೇಶವನ್ನು ಮೀರಿದ ಆಸಕ್ತಿಯನ್ನು ಉಂಟು ಮಾಡುತ್ತವೆ. ಇತಿಹಾಸಕ್ಕೆ ನಂಟಾಗುತ್ತವೆ. ಸಮುದಾಯದ ಆಸ್ತಿಯೂ ಆಗುತ್ತವೆ.

ಭಾರತದ ಚರಿತ್ರೆ, ಇಲ್ಲಿನ ಸಂಸ್ಕೃತಿಯ ಸಿರಿ, ವೈವಿಧ್ಯಮಯವಾದ ವಾತಾವರಣದಿಂದಾಗಿ, ಹಲವು ವಿಶಿಷ್ಟ ಮರಗಳು ಇಲ್ಲಿ ಬೆಳೆದು ನಿಂತಿವೆ. ಕಣ್ಮಣಿ ಮರಗಳು ಎಂದ ಕೂಡಲೇ ಮೊದಲು ನೆನಪಾಗುವುದು ಬುದ್ಧಗಯಾದ ಬೋಧಿವೃಕ್ಷ, ಕೊಲ್ಕತಾದ ದೈತ್ಯ ಅರಳಿ, ಉತ್ತರಾಖಂಡದ ಜೋಶಿಮಠದಲ್ಲಿರುವ ಪುರಾತನ ಹಿಪ್ಪುನೇರಳೆಯ ಮರ, ಕೇರಳದ ಪರಂಬಿಕುಳಂ ಕಾಡುಗಳಲ್ಲಿರುವ ಕನ್ನಿಮಾರನ್‌ ತೇಗ ವೃಕ್ಷಗಳು ಹಾಗೂ ಅಮೃತಸರದ ಸ್ವರ್ಣದೇವಾಲಯದಲ್ಲಿರುವ ಪುರಾತನ ಬೇರ್‌ ಮರಗಳು. ಇವುಗಳಲ್ಲಿ ಕೆಲವು ಎಲ್ಲೆಡೆಯಿಂದಲೂ. ಪ್ರವಾಸಿಗಳನ್ನು ಸೆಳೆಯುಷ್ಟು ಸುಪ್ರಸಿದ್ಧ. ಇನ್ನು ಕೆಲವು ಕೇವಲ ಆಯಾ ಪ್ರಾಂತ್ಯದಲ್ಲಿ ಮಾತ್ರ ಪ್ರಸಿದ್ಧ.

ಭಾರತದಲ್ಲಿ ಸುಪ್ರಸಿದ್ಧವಾದ, ಅಲ್ಪ ಪ್ರಸಿದ್ಧವಾದ ಹಾಗೂ ನಮಗಾರಿಗೂ ಗೊತ್ತೇ ಇಲ್ಲದ ಕಣ್ಮಣಿ ಮರಗಳನ್ನು ಗುರುತಿಸಿ, ವಿಜ್ಞಾನ, ಜನತೆ, ಸಂಸ್ಕೃತಿ ಹಾಗೂ ಚರಿತ್ರೆಗೆ ಇರುವ ಅವುಗಳ ನಂಟಿನ ಬಗ್ಗೆ ಈ ಲೇಖನ ಚುಟುಕಾಗಿ ತಿಳಿಸಲಿದೆ.  ಇಂತಹ  ನೂರಾರು ಮರಗಳ ಕಥೆಗಳು ಇವೆ. ಇನ್ನೂ ಇರಬಹುದು.  

ಕಣ್ಮಣಿಗಳು ಏಕೆ ಮುಖ್ಯವಾಗುತ್ತವೆ?

ಪರಿಸರ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಮರಗಳು ಬಹಳ ಮುಖ್ಯ. ಇವು ಹವಾಗುಣ ಬದಲಾವಣೆಯನ್ನು ತಡೆಯುತ್ತವೆ, ಮಲಿನ ಗಾಳಿಯನ್ನು ಶುಚಿಗೊಳಿಸುತ್ತವೆ, ಊದಾತೀತ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತವೆ, ನಗರ-ಪಟ್ಟಣಗಳನ್ನು ತಣ್ಣಗಿರಿಸುತ್ತವೆ, ನೆರಳು ಕೊಡುತ್ತವೆ, ನೀರು ಮತ್ತು ಶಕ್ತಿಯನ್ನು ಉಳಿತಾಯ ಮಾಡಲು ನೆರವಾಗುತ್ತವೆ, ಮಾಲಿನ್ಯವನ್ನು ಕಡಿಮೆ ಮಾಡುತ್ತವೆ, ಮಣ್ಣಿನ ಸವಕಳಿಯನ್ನು ತಡೆಯುತ್ತವೆ, ಮರಮುಟ್ಟು, ಆಹಾರ, ಔಷಧ ಮೊದಲಾದ ಉಪಯುಕ್ತ ಉತ್ಪನ್ನಗಳ ಮೂಲವೂ ಆಗಿವೆ. ಜೊತೆಗೇ ವನ್ಯಜೀವಿಗಳಿಗೆ ಆಶ್ರಯ ಮತ್ತು ನೆರಳನ್ನು ನೀಡುತ್ತವೆ. ಇವು ನೋಡಲು ಸುಂದರವಷ್ಟೆ ಅಲ್ಲ,  ಹೂವು, ಹಣ್ಣುಗಳನ್ನು ತಳೆದಾಗ, ಋತುಗಳನ್ನು ತಿಳಿಸುವ ಸೂಚಿಗಳೂ ಆಗುತ್ತವೆ.  ಆಸ್ತಿಯ ಬೆಲೆಯನ್ನು ಹೆಚ್ಚಿಸುವುದಲ್ಲದೆ, ಇನ್ನೂ ಹಲವು ಉಪಯೋಗಗಳಿವೆ.

ಜೀವಿಗಳ ಆಯುಸ್ಸು, ಪುರಾತನ ಕಾಲದ ಹವಾಮಾನ ಬದಲಾವಣೆಗಳ ಘಟನೆಗಳು ಮೊದಲಾದ ಜೈವಿಕ ಅರಿವನ್ನು ನೀಡುವ ಸಾಧನಗಳಾದ ಮರಗಳು ಜೀವಿನೆಲೆಯಾಗಿ, ನೆಲಜೀವಿಗಳಿಗೆ ಆಸರೆಯಾಗಿ, ಭೂರಚನೆಯ ಹಾಗೂ ಜೈವಿಕ ವೈವಿಧ್ಯದ ಅವಿಭಾಜ್ಯ ಅಂಗಗಳು. ವಾಯಮಂಡಲದಲ್ಲಿ ಹೆಚ್ಚುವರಿ ಕಾರ್ಬನ್‌ ಡಯಾಕ್ಸೈಡು ಕೂಡಿಕೊಳ್ಳದಂತೆ ಮಾಡುವ ಅಮೂಲ್ಯ ಕಾರ್ಬನ್‌ ಸಿಂಕುಗಳು. ವಿವಿಧ ಪರಿಸರನೆಲೆಗಳನ್ನು ಒಂದು ಗೂಡಿಸುವ ಜೀವಿಗಳು. ಜೀವಿಗಳ ಹಾಗೂ ನಮ್ಮ ಆರೋಗ್ಯಕ್ಕೆ ಮರಗಳ ಕೊಡುಗೆ ಅಪಾರ. ಅಗಣಿತ.

ಕೀಟಗಳ ಹಾಗೂ ಇತರೆ ಅಕಶೇರುಕ ಜೀವಿಗಳ ಬೇಟೆಗಾರರಿಗೆ ಆಶ್ರಯ ನೀಡುವ ಮರಗಳು ಅದರಲ್ಲಿಯೂ ವಿಶೇಷವಾಗಿ ಹಳೆಯ ಮರಗಳು ಜೈವಿಕ ಕೀಟನಿಯಂತ್ರಣದಲ್ಲಿ ಪ್ರಮುಖ ಪಾತ್ರಧಾರಿಗಳು. ದೊಡ್ಡಗಾತ್ರದ ಕಾಂಡಗಳಿರುವ ಹಳೆಯ ಮರಗಳು ಸಣ್ಣ ಮರಗಳಿಗೆ ಹೋಲಿಸಿದರೆ, ಅಗಾಧ ಪ್ರಮಾಣದ ಕಾರ್ಬನ್‌ ಡಯಾಕ್ಸೈಡನ್ನು ಹೀರಿಕೊಳ್ಳಬಲ್ಲವು.  ಮರಗಳ ಈ ಗುಣವೇ ಹವಾಮಾನ ನಿಯಂತ್ರಣದಲ್ಲಿ ಅವುಗಳ ಪಾತ್ರವೆಷ್ಟು ಪ್ರಮುಖವೆಂದು ಹೇಳುತ್ತದೆ. ಹಳೆಯ ಮರಗಳು ಪಾರಂಪರಿಕವಾಗಿ ಮುಖ್ಯವಷ್ಟೆ ಅಲ್ಲ, ಅವು ಪುರಾತನ ಕಾಲದಲ್ಲಿದ್ದ ಹವಾಗುಣಗಳನ್ನೂ ಪ್ರಭಾವಿಸಿದ್ದವಷ್ಟೆ. ಹೀಗಾಗಿ ಇವು ಪರಿಸರದ ಚರಿತ್ರೆಯ ಜೀವಂತ ದಾಖಲೆಗಳೂ ಹೌದು.

ಎಲ್ಲ ಮರಗಳ ಗುಂಪುಗಳೂ ಮುಖ್ಯವೇ ಆದರೂ, ಹಳೆಯ ಮರಗಳು ವಿಶೇಷತಃ ಬಹಳ ಮುಖ್ಯ. ಅಮೆರಿಕದ ಕೆಲಿಫೋರ್ನಿಯಾದಲ್ಲಿರುವ ಮೆಥುಸೆಲಾ ಎಂದು ಹೆಸರುವಾಸಿಯಾದ 4,850 ವರ್ಷ ಪುರಾತನ ಬ್ರಿಸಲ್‌ಕೋನ್‌ ಮರ ಹಾಗೂ ಚಿಲಿಯಲ್ಲಿರುವ 3,600 ವರ್ಷ ಹಳೆಯ ಅಲರ್ಕೆ ಮರ ಶತಮಾನಗಳಷ್ಟು ದೀರ್ಘ ಅಯುಸ್ಸಿಗೆ ಉತ್ತಮ ಉದಾಹರಣೆಗಳು.  ಅಷ್ಟೇ ಅಲ್ಲ. ಇಂದಿರುವ ಮರಗಳನ್ನು ನಾವೇಕೆ ಸಂರಕ್ಷಿಸಿ, ಉಳಿಸಿಕೊಳ್ಳಬೇಕು. ಹೊಸ ಮರಗಳನ್ನು ಬೆಳೆಸಬೇಕು ಎನ್ನುವುದಕ್ಕೆ ಪ್ರಬಲ ಪ್ರೇರಕಗಳು ಕೂಡ.

ನೋಟ ಹಾಗೂ ಸೌಂದರ್ಯಗಳ ಖನಿಯಷ್ಟೆ ಅಲ್ಲದೆ, ಈ ಕಣ್ಮಣಿ ಮರಗಳು ನಮ್ಮ ಚಾರಿತ್ರಿಕ, ಪಾರಂಪರಿಕ ಆಸ್ತಿಗಳೂ ಆಗಿವೆ. ಸ್ಥಳೀಯ ಸಂಪ್ರದಾಯಗಳತ್ತ ಗಮನ ಸೆಳೆಯುವ ವಸ್ತುಗಳಾಗಿವೆ. ಅವುಗಳ ಇರವೇ ಅಲ್ಲಿನ ಸಮುದಾಯ ಹಾಗೂ ಸ್ಥಳದ ಜೊತೆಗಿನ ದೀರ್ಘ ಒಡನಾಟಕ್ಕೆ, ದಂತಕಥೆಗಳಿಗೆ, ಘಟನೆಗಳಿಗೆ, ಪುರಾಣಕ್ಕೆ ಸಾಕ್ಷಿ.  ಯುಗಯುಗಾದಿಗಳು ಬಂದು ಹೋಗುತ್ತವೆ. ನದಿಗಳು ಉಕ್ಕಿ ಹರಿಯುತ್ತವೆ. ರೋಗರುಜಿನಗಳು ಇಡೀ ಸಮುದಾಯವನ್ನೇ ನಾಶ ಮಾಡಿಬಿಡುತ್ತವೆ. ಕಾಲ ಉರುಳುತ್ತಲೇ ಇರುತ್ತದೆ. ಆದರೆ ಮರಗಳು ಮಾತ್ರ ಇನ್ನಷ್ಟು ಜೀವಗಳಿಗೆ ಹುಟ್ಟನ್ನು ನೀಡಿ, ಹಲವಾರು ತಲೆಮಾರುಗಳವರೆಗೂ ಅಮರವಾಗಿ ಉಳಿಯುತ್ತವೆ.  ಅವುಗಳ ಸುದೀರ್ಘ ಬದುಕೇ ಮನುಷ್ಯರು ಮರಗಳನ್ನು ಹಲವು ಪುರಾತನ ಘಟನೆಗಳಿಗೆ ಸಾಕ್ಷಿ ಎಂದು ಕಲ್ಪಿಸಿಕೊಳ್ಳುವಂತೆ ಮಾಡಿದೆ. ಹೊಸ ಯುಗದ ಆಗಮನ, ಸಾಮುದಾಯಿಕ ಪಲ್ಲಟಗಳು, ಪೌರಾಣಿಕ ಪ್ರೇಮಕಥೆಗಳು, ವಾಣಿಜ್ಯದ ಒಪ್ಪಂದಗಳು, ಕಪ್ಪುಕಲೆ ಎನ್ನಿಸುವ ಘಟನೆಗಳು, ಕ್ರೂರ ಕ್ಷಣಗಳೆಲ್ಲವನ್ನೂ ಇಂತಹ ಮರಗಳು ಕಂಡಿರುತ್ತವೆ.

ಸುಪ್ರಸಿದ್ಧವೆನ್ನಿಸುವ, ಕುಖ್ಯಾತ ಎನ್ನಿಸುವ ಘಟನೆಗಳು ನಿರ್ದಿಷ್ಟ ಮರ ಅಥವಾ ಕಾಡುಗಳಲ್ಲಿ ನಡೆದ ಬಗ್ಗೆ ಕೇಳಿದ್ದೇವೆ. ಸುಪ್ರಸಿದ್ಧ ರಾಬಿನ್‌ಹುಡ್‌ ಕಥೆಯನ್ನೇ ನೆನಪಿಸಿಕೊಳ್ಳಿ. ಕಾಲದ ಹರಿವಿನಲ್ಲಿ ಆತ ಯಾರೆಂದು ಮರೆತೇ ಹೋಗಿದೆ. ಆದರೆ ಅವನ ನಂಟು ಇದ್ದ ಕಾಡಿನ ನೆನಪು ಮಾತ್ರ ಅಳಿದಿಲ್ಲ. ತಿರುವನಂತಪುರದ ರಾಜ ಮಾರ್ತಾಂಡ ವರ್ಮನನ್ನು (1706-1758) ಶತ್ರುಗಳು ಬೆನ್ನು ಹತ್ತಿದ್ದಾಗ, ಹಲಸಿನ ಮರವೊಂದರ ಪೊಟರೆಯಲ್ಲಿ ಅಡಗಿ ಕುಳಿತುಕೊಳ್ಳಲು ಕುರಿಗಾಹಿ ಹುಡುಗನೊಬ್ಬ ನೆರವು ನೀಡಿದ್ದನೆಂಬ ಕಥೆ ಇದೆ. ಬದುಕುಳಿದ ರಾಜ ಸ್ವತಃ ಕೃಷ್ಣನೇ ಹುಡುಗನ ಅವತಾರದಲ್ಲಿ ಬಂದು ತನ್ನನ್ನು ರಕ್ಷಿಸಿದನೆಂದು ಭಾವಿಸಿ, ಅಲ್ಲಿ ದೇವಾಲಯವೊಂದನ್ನು ಕಟ್ಟಿ, ಕೃಷ್ಣನ ಜೊತೆಗೆ ಆ ಮರವನ್ನೂ ಪೂಜಿಸುತ್ತಿದ್ದ. ಮಲಯಾಳದಲ್ಲಿ ಅಮ್ಮಚ್ಚಿಪ್ಲಾವು ಅಥವಾ ಅಜ್ಜಿಹಲಸು ಎನ್ನುವ ಈ ಮರ, 1970ನೇ ಇಸವಿಯವರೆಗೂ ಫಲ ಬಿಡುತ್ತಿತ್ತು. ಈಗ ಅದರ ಬೊಡ್ಡೆಯೊಂದನ್ನು ತಿರುವನಂತಪುರ ಸಮೀಪದಲ್ಲಿರುವ ದೇವಾಲಯವೊಂದರಲ್ಲಿ ಸಂರಕ್ಷಿಸಿ ಇಡಲಾಗಿದೆ.

ವಿಶೇಷವಾದ ಕೆಲವು ಮರಗಳನ್ನು ಬುದ್ಧಿವಂತ ಜೀವಿಗಳೆಂದೋ, ದೇವರ ನೆಲೆಯೆಂದೋ ಭಕ್ತಿ, ಗೌರವದಿಂದ ಪೂಜಿಸುವುದು ನಮಗೆ ಅಚ್ಚರಿಯ ವಿಷಯವೇನಲ್ಲ. ಕಾಲ, ದೇಶ, ಸಂಸ್ಕೃತಿಗಳನ್ನೂ ಮೀರಿದ ಮರಪೂಜೆಗಳು ಬಹುದೈವಗಳಲ್ಲಿ ವಿಶ್ವಾಸವಿಡುವ ಸಂಸ್ಕೃತಿಗಳಲ್ಲಿ ಸಾಮಾನ್ಯ. ಹಾಗಿದ್ದೂ, ಸಂರಕ್ಷಣಾ ಕ್ರಮ ಹಾಗೂ ನೀತಿಗಳನ್ನು ರೂಪಿಸುವಾಗ ಮರಗಳ ಇಂತಹ ಸಾಮಾಜಿಕ ಹಾಗೂ ಜೀವ-ಸಾಂಸ್ಕೃತಿಕ ಮೌಲ್ಯಗಳನ್ನು ಪರಿಗಣಿಸುವುದೇ ಇಲ್ಲ.

ಜೀವಿವೈವಿಧ್ಯಕ್ಕೆ ಇದು ವಿಷಮ ಕಾಲ. ದಶಲಕ್ಷಕ್ಕೂ ಹೆಚ್ಚು ಸಸ್ಯ ಹಾಗೂ ಪ್ರಾಣಿ ಜೀವಿಗಳು ಅಳಿವಿನಂಚಿನಲ್ಲಿ ಇವೆ ಎಂದು ಅಂದಾಜಿಸಲಾಗಿದೆ. ಇಂಗ್ಲೆಂಡಿನ ಬಟಾನಿಕ್‌ ಗಾರ್ಡನ್ಸ್‌ ಕನ್ಸರ್ವೇಶನ್‌ ಇಂಟರ್‌ನ್ಯಾಶನಲ್‌ ಸಂಸ್ಥೆಯು ಪ್ರಪಂಚದ ವಿವಿಧೆಡೆಗಳಲ್ಲಿರುವ ಮರಗಳ ಸ್ಥಿತಿಗತಿಗಳ ಬಗ್ಗೆ ಸಿದ್ಧಪಡಿಸಿರುವ ವರದಿಯು 60000 ಮರ ಪ್ರಭೇದಗಳಲ್ಲಿ, ಸುಮಾರು 17510 ಪ್ರಭೇದಗಳು, ಅಂದರೆ ಸರಿಸುಮಾರು ಮೂರನೇ ಒಂದು ಭಾಗದಷ್ಟು ಮರಗಳು, ಅಳಿವಿನ ಅಂಚಿನಲ್ಲಿವೆ ಎಂದು ಎಚ್ಚರಿಸಿದೆ.  ಇದು ಅಳಿವಿನ ಅಂಚಿನಲ್ಲಿವೆ ಎಂದು ಅಂದಾಜಿಸಲಾದ ಸ್ತನಿಗಳು, ಕಪ್ಪೆಗಳಂತಹ ಉಭಯಜೀವಿಗಳು ಹಾಗೂ ಉರಗಗಳ ಪ್ರಭೇದಗಳೆಲ್ಲದರ ದುಪ್ಪಟ್ಟು ಸಂಖ್ಯೆ. ಪ್ರಪಂಚದ ಹಲವೆಡೆಗಳಲ್ಲಿ ದೊಡ್ಡ, ಪುರಾತನ ಮರಗಳ ಅಳಿವಿನ ಬಗ್ಗೆ ಕಾಳಜಿ ಹೆಚ್ಚುತ್ತಿದೆ.  ಮೇಯುವುದು ವ್ಯಾಪಕವಾಗಿರುವ ಕೆಲಿಫೋರ್ನಿಯಾ, ಕೋಸ್ಟಾರಿಕಾ, ಸ್ಪೇನ್‌ ಹಾಗೂ ಉಳಿದೆಡೆಗಳಲ್ಲಿ ದೊಡ್ಡ, ಹಳೆಯ ಮರಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಮುಂದಿನ ಶತಮಾನದೊಳಗೆ ಇವು ಕಣ್ಮರೆಯಾಗಬಹುದೆಂದು ಗಣಿಸಲಾಗಿದೆ.

ಇತ್ತೀಚೆಗೆ ನೇಚರ್‌ ಪತ್ರಿಕೆಯಲ್ಲಿ ಪ್ರಕಟವಾದ ಶೋಧಪ್ರಬಂಧವೊಂದು ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿರುವ ಹಳೆಯ ಉಷ್ಣವಲಯದ ಕಾಡುಗಳಲ್ಲಿ ಮರಣಿಸುತ್ತಿರುವ ಮರಗಳ ಪ್ರಮಾಣ 1980ರಲ್ಲಿದ್ದುದರ ದುಪ್ಪಟ್ಟಾಗಿದೆ ಎನ್ನುತ್ತದೆ. ಸಂಶೋಧಕರ ಪ್ರಕಾರ ಹವಾಮಾನ ಬದಲಾವಣೆ, ಅದರಲ್ಲಿಯೂ ವಿಶೇಷವಾಗಿ ವಾಯುಮಂಡಲದಲ್ಲಿನ ತೇವಾಂಶದ ಒತ್ತಡ, ಅಥವಾ ಗಾಳಿಯ ಒಣಗಿಸುವ ಸಾಮರ್ಥ್ಯ ಕುಗ್ಗಿದ್ದು ಇದಕ್ಕೆ ಕಾರಣ. ಬಹುಶಃ ಇದು ಅಲ್ಲಿನ ಹವಾಮಾನದ ಉಷ್ಣತೆ ಹೆಚ್ಚಿದ್ದರಿಂದ ಆಗಿರಬಹುದೆನ್ನುವುದು ಊಹೆ.  ಕಳೆದ ನಲವತ್ತೊಂಭತ್ತು ವರ್ಷಗಳಿಂದಲೂ ಉತ್ತರ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡಿನಲ್ಲಿರುವ ಇಪ್ಪತ್ತನಾಲ್ಕು ಪ್ರಾಂತ್ಯಗಳಲ್ಲಿ ಮರಣಿಸುತ್ತಿರುವ ಮರಗಳ ಸಂಖ್ಯೆಯ ಬಗ್ಗೆ ಇಟ್ಟಿದ್ದ ಅಪೂರ್ವ ದಾಖಲೆಯ ಫಲವಾಗಿ ಈ ಶೋಧ ಸಾಧ್ಯವಾಗಿದೆ. ಉದ್ದೇಶ ಪೂರ್ವಕವಾಗಿ ಕಡಿಯುವುದಷ್ಟೆ ಅಲ್ಲದೆ, ಮರಣದ ಪ್ರಮಾಣ ಹೆಚ್ಚಿದ್ದರಿಂದ, ಈಗಿರುವ ಮರಗಳ ಜೊತೆಗೆ ಹೊಸದಾಗಿ ಮೊಳೆಯುವ ಮರಗಳ ಸಂಖ್ಯೆ ಕಡಿಮೆಯಾಗಿದ್ದರಿಂದ, ಕಾಳ್ಗಿಚ್ಚು, ನಗರೀಕರಣ, ಕೃಷಿ ವಿಸ್ತರಣೆ ಮೊದಲಾದವುಗಳು ಒಟ್ಟಾಗಿ ಇಲ್ಲವೇ ಪ್ರತ್ಯೇಕವಾಗಿ ಈ ಸ್ಥಿತಿಗೆ ಕಾರಣವಾಗಬಹುದು. ಉಷ್ಣವಲಯದಲ್ಲಿ ಇದು ಇನ್ನೂ ಎದ್ದು ಕಾಣುತ್ತದೆ. ಆನೆ, ಸಿಂಹ, ಹುಲಿ, ತಿಮಿಂಗಲ, ಡಾಲ್ಫಿನ್ನುಗಳಂತಹ ಆಕರ್ಷಕ ಪ್ರಾಣಿಗಳ ಸಂಖ್ಯೆ ಪ್ರಪಂಚದೆಲ್ಲೆಡೆ ಕಡಿಮೆಯಾಗಿರುವಂತೆಯೇ, ದೊಡ್ಡ ಹಳೆಯ ಮರಗಳ ಸಂಖ್ಯೆಯೂ ಪ್ರಪಂಚದ ಹಲವು ತಾಣಗಳಲ್ಲಿ ಕಡಿಮೆಯಾಗುತ್ತಿದೆ ಎಂದು ಅಧ್ಯಯನಗಳು ಸೂಚಿಸಿವೆ. ಅವುಗಳಿಗೆ ಬಂದೊದಗಿದ ಅಪಾಯಗಳೇನು, ಅವುಗಳನ್ನು ಸಂರಕ್ಷಿಸುವ ಉಪಾಯಗಳೇನು ಎಂಬುದರ ಬಗ್ಗೆ ಸಂಶೋಧನೆಗಳ ಅಗತ್ಯವಿದೆ. ಡಾ. ಎಸ್.‌ ನಟೇಶ್‌, ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿನಿ ವೃತ್ತರಾಗಿದ್ದಾರೆ. ಮರಗಳ ಅಧ್ಯಯನ ಇವರ ಪ್ರವೃತ್ತಿ. ಭಾರತದಲ್ಲಿರುವ ಹಲವು ವಿಶೇಷ ಮರಗಳ ವಿವರಗಳನ್ನು ನೀಡುವ “ದಿ ಐಕಾನಿಕ್‌ ಟ್ರೀಸ್‌ ಆಫ್‌ ಇಂಡಿಯಾ” ಎಂಬ ಇವರ ಗ್ರಂಥವನ್ನು ರೋಲಿ ಬುಕ್ಸ್‌ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »