ವಿಮಾನ ದುರಂತ: ಸುಬ್ರಮಣಿಯನ್ ಸ್ವಾಮಿಯಿಂದ ಮೋದಿ, ಅಮೀತ್‌ ಶಾ ರಾಜೀನಾಮೆಗೆ ಆಗ್ರಹ

ಅಹಮದಾಬಾದ್‌ನ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮತ್ತು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನೈತಿಕ ಹೊಣೆಯನ್ನು ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಗುಜರಾತ್‌: ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜೂನ್ 12, 2025 ರಂದು ಏರ್ ಇಂಡಿಯಾ ವಿಮಾನ AI171 ಲಂಡನ್‌ಗೆ ತೆರಳುವಾಗ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಮೇಘನಿನಗರದಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 242 ಜನರಲ್ಲಿ ಕೇವಲ ಒಬ್ಬ ಪ್ರಯಾಣಿಕ ಬದುಕುಳಿದಿದ್ದು, ಉಳಿದವರೆಲ್ಲರೂ ಸಾವನ್ನಪ್ಪಿದ್ದಾರೆ. ಈ ಘಟನೆ ಭಾರತದ ಇತಿಹಾಸದ ಅತ್ಯಂತ ಭೀಕರ ವಿಮಾನ ದುರಂತಗಳಲ್ಲಿ ಒಂದಾಗಿದೆ.

ಈ ದುರಂತದ ನಂತರ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮತ್ತು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನೈತಿಕ ಹೊಣೆಯನ್ನು ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. 1956ರಲ್ಲಿ ಅರಿಯಲೂರ್ ರೈಲು ದುರಂತದಲ್ಲಿ 150 ಜನರು ಸಾವನ್ನಪ್ಪಿದಾಗ ರೈಲ್ವೆ ಸಚಿವರಾಗಿದ್ದ ಲಾಲ್ ಬಾಹದ್ದೂರ್ ಶಾಸ‍್ತಿಯವರು ರಾಜೀನಾಮೆ ನೀಡಿದ್ದ ಉದಾಹರಣೆಯನ್ನು ಉಲ್ಲೇಖಿಸಿ, ಸ್ವಾಮಿ ತಮ್ಮ X ಪೋಸ್ಟ್‌ನಲ್ಲಿ, “ನೈತಿಕತೆಯ ಆಧಾರದಲ್ಲಿ ಈ ಮೂವರು ನಾಯಕರು ರಾಜೀನಾಮೆ ನೀಡಿ, ಮುಕ್ತ ಮತ್ತು ನ್ಯಾಯಯುತ ತನಿಖೆಗೆ ಅವಕಾಶ ಮಾಡಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.

ಸ್ವಾಮಿಯವರ ರಾಜೀನಾಮೆ ಆಗ್ರಹಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ದುರಂತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ರಾಜಕೀಯಗೊಳಿಸಿದ್ದಕ್ಕಾಗಿ ಅನೇಕರು ಅವರನ್ನು ದೂಷಿಸಿದ್ದಾರೆ. “ಈ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಿಂತ, ಕುಟುಂಬಗಳಿಗೆ ಸಾಂತ್ವನ ಮತ್ತು ರಕ್ಷಣಾ ಕಾರ್ಯಕ್ಕೆ ಒತ್ತು ನೀಡಬೇಕು” ಎಂದು ವಿಮರ್ಶಕರು ಹೇಳಿದ್ದಾರೆ. ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಕಪ್ಪು ಪೆಟ್ಟಿಗೆಯನ್ನು ತನಿಖೆಗಾಗಿ ತೆಗೆದುಕೊಳ್ಳಲಾಗಿದ್ದು, ದುರಂತದ ಕಾರಣವನ್ನು ತಿಳಿಯಲು ಇದು ನಿರ್ಣಾಯಕವಾಗಿದೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »