ವಿಜ್ಞಾನದ ಕಥೆ ಹೇಳುವ ಸಚಿತ್ರ ಪುಸ್ತಕಗಳು

ಕನ್ನಡದಲ್ಲಿ ಮಕ್ಕಳಿಗಾಗಿ ವಿಜ್ಞಾನ ಪುಸ್ತಕಗಳು ಅಪರೂಪವಾಗಿದ್ದು, ಪ್ರಥಮ್ ಬುಕ್ಸ್‌ನಿಂದ ಭಾಷಾಂತರಗೊಂಡ ನಾಲ್ಕು ಪುಸ್ತಕಗಳು ಸೂಕ್ಷ್ಮಜೀವಿಗಳು, ತಿಮಿಂಗಲದ ಹಾಡು, ಕನ್ನಡಿಯ ಬಿಂಬ ಮುಂತಾದ ವಿಷಯಗಳನ್ನು ಕಥೆಯ ಮೂಲಕ ಆಕರ್ಷಕವಾಗಿ ಪರಿಚಯಿಸುತ್ತವೆ ಎಂದು ಕೊಳ್ಳೇಗಾಲ ಶರ್ಮರವರು ಈ ಲೇಖನದಲ್ಲಿ ತಿಳಿಸಿದ್ದಾರೆ.
kannada-childrens-science-books-discovery

ಮಕ್ಕಳ ಪುಸ್ತಕಗಳದ್ದೇ ಬೇರೆ ಲೋಕ. ಕನ್ನಡದಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸುವವರ ಸಂಖ್ಯೆಯೂ ಬೆರಳೆಣಿಕೆಯಷ್ಟೇ. ಪ್ರಕಟವಾಗುವ ಪುಸ್ತಕಗಳ ಸಂಖ್ಯೆಯೂ ವರ್ಷಕ್ಕೆ ಕೆಲವು ಡಜನ್‌ ಇರಬಹುದು.  ಈ ಪರಿಸ್ಥಿತಿಯಲ್ಲಿ ಮಕ್ಕಳಿಗಾಗಿ ವಿಜ್ಞಾನದ ಪುಸ್ತಕಗಳು ಎನ್ನುವದು ಅತ್ಯಂತ ಅಪರೂಪ. ವಿಜ್ಞಾನ ಎಂದರೆ ಮಕ್ಕಳಿಗೇ ಎನ್ನುವ ಅಭಿಪ್ರಾಯ ಜನಜನಿತ. ಮಕ್ಕಳಿಗಾಗಿ ಪ್ರಕಟವಾಗುವ ವಿಜ್ಞಾನ ಪುಸ್ತಕಗಳಲ್ಲಿ  ಮಾಹಿತಿಯನ್ನು ನೀಡುವ, ಅಥವಾ ರಸಪ್ರಶ್ನೆಗಳ ಮೂಲಕ ಕಲಿಕೆಯನ್ನು ಪ್ರಚೋದಿಸುವ ಅಥವಾ ಹುರುಪು ನೀಡುವ ವಿಜ್ಞಾನಿಗಳ ಜೀವನ ಚರಿತ್ರೆಗಳೇ ಹೆಚ್ಚು. ಅಪರೂಪಕ್ಕೊಮ್ಮೆ ಎನ್ನುವಂತೆ ಬೆರಗು ಮೂಡಿಸುವ ಪುಸ್ತಕಗಳು ಪ್ರಕಟವಾಗುತ್ತವೆ. ಇಲ್ಲಿರುವ ಈ ನಾಲ್ಕು ಪುಸ್ತಕಗಳೂ ಅಂತಹ ಅಪರೂಪದವು. ಮೂಲ ಇಂಗ್ಲೀಷಿನ ಪುಸ್ತಕಗಳನ್ನು ಕನ್ನಡಕ್ಕೆ ಅನುಭವಿ ಅನುವಾದಕರು ಭಾಷಾಂತರಿಸಿದ್ದಾರೆ.

ಇವುಗಳು ಹೇಳುವ ವಿಷಯಗಳೂ ವೈವಿಧ್ಯಮಯ. ಇರಾಳ ಅದೃಶ್ಯ ಪ್ರಪಂಚದಲ್ಲಿ ಸೂಕ್ಷ್ಮಜೀವಿಗಳನ್ನು ಅಧ್ಯಯನ ಮಾಡುವ ಪ್ರಯೋಗಾಲಯದ ಚಿತ್ರವಿದೆ. ಇರಾ ಎನ್ನುವ ವಿಜ್ಞಾನಿಯ ಸ್ವಗತ ಇದು. ಆ ಸ್ವಗತದ ಮೂಲಕ ಪ್ರಯೋಗಾಲಯದ ವಿವಿಧ ಅಂಶಗಳನ್ನು ಪರಿಚಯಿಸುವ ಪ್ರಯತ್ನ ಇದರಲ್ಲಿದೆ. ಅನುವಾದದಲ್ಲಿ ಮೂಲದ ಸೊಗಸನ್ನು ಉಳಿಸಿಕೊಂಡಿದ್ದಾರೆ.

ಸೂಕ್ಷ್ಮದರ್ಶಕದ ಅಡಿಯಲ್ಲಿ ಪುಸ್ತಕದ ವಿಷಯ ಶೀರ್ಷಿಕೆಯಲ್ಲಿಯೇ ಇದೆ. ಸೂಕ್ಷ್ಮದರ್ಶಕದ ಅಡಿಯಲ್ಲಿ ನಾವು ಕಾಣಬಲ್ಲ ಸಾಮಾನ್ಯ ಜೀವಿಗಳನ್ನು ಅವುಗಳ ನಡವಳಿಕೆಯ ಮೂಲಕ ಈ ಪುಸ್ತಕ ಪರಿಚಯಿಸುತ್ತದೆ. ಅತಿ ಕಡಿಮೆ ಪದಗಳಿರುವ ಪುಸ್ತಕ ಅನುವಾದವಾದ್ದರಿಂದ ಮೂಲದ್ದೇ ಶೀರ್ಷಿಕೆಯನ್ನು ಉಳಿಸಿಕೊಂಡಿರಬೇಕು. ಮೂಲ ಇಂಗ್ಲೀಷಿನ ಜಾಯಮಾನಕ್ಕೆ ಇದು ಸರಳವೂ, ಆಕರ್ಷಕವೂ ಆಗಿದ್ದರೂ, ಕನ್ನಡದಲ್ಲಿ ಬೇರೆ ಇರಬಹುದಿತ್ತೇನೋ ಅನಿಸಿದೆ ಇರದು.

ತಿಮಿಂಗಲದ ಹಾಡು ಕೇಳಿದ್ದೀರಾ? ಎನ್ನುವ ಶೀರ್ಷಿಕೆ ಗುಟ್ಟನ್ನು ಅಲ್ಲಿಯೇ ಬಿಟ್ಟುಕೊಟ್ಟು ಬಿಡುತ್ತದೆ. ಪುಸ್ತಕ ಸಾಗರದೊಳಗೆ, ನೀರಿನಡಿಯ ಲೋಕದಲ್ಲಿ ಕೇಳಿಸುವ ವಿವಿಧ ಶಬ್ದಗಳ ಪರಿಚಯದ ಜೊತೆಗೇ, ತಿಮಿಂಗಲಗಳ ಭಾಷೆ ಅಥವಾ ಹಾಡಿನ ಬಗ್ಗೆ ತಿಳಿವು ನೀಡುತ್ತದೆ. ಪ್ರತಿಯೊಂದು ಬಗೆಯ ತಿಮಿಂಗಲದ್ದೂ ಬೇರೆ, ಬೇರೆ ಹಾಡು. ಹಾಂ. ಆ ಹಾಡನ್ನು ವಿವರಿಸುವ ಶಬ್ದಪದಗಳನ್ನು ಓದುವುದೇ ಒಂದು ಮಜಾ!

ನಾಲ್ಕನೆಯ ಪುಸ್ತಕ ಕನ್ನಡಿಯನ್ನು ಸಣ್ಣ ಮಕ್ಕಳು ಕಾಣುವ ಬಗೆಯನ್ನು ತಿಳಿಸುತ್ತದೆ. ಪುಟ್ಟ ಮಾನಸಳಿಗೆ ಅಮ್ಮ ತಂದಿರುವ ದೊಡ್ಡ ಕನ್ನಡಿಯ ಬಗ್ಗೆ ಕುತೂಹಲ. ಅದರಲ್ಲಿ ತನ್ನಂತೆಯೇ ಇನ್ನೊಬ್ಬಳು ಇರುವುದು ಅಚ್ಚರಿ ಹಾಗೂ ಭೀತಿಯನ್ನುಂಟು ಮಾಡುತ್ತದೆ. ಕುತೂಹಲ ಕನ್ನಡಿಯನ್ನು ಒಡೆದು ಚೂರು ಮಾಡುತ್ತದೆ. ಅದರಿಂದ ಬೇಸರಗೊಂಡ ಮಾನಸಳಿಗೆ ದೊರೆಯುವುದ ಕನ್ನಡಿಯಲ್ಲಿ ಬಿಂಬ ಹೇಗೆ ಮೂಡುತ್ತದೆ ಎನ್ನುವ ಪಾಠ.

ಹೀಗೆ ವಿಜ್ಞಾನ ವಿಷಯಗಳನ್ನು ಕಥೆಯ ಹಂದರದೊಳಗೆ ಅಡಕ ಮಾಡಿ ಕೊಡುವ ಪ್ರಯತ್ನಗಳು ಇಲ್ಲಿವೆ. ಈ ಎಲ್ಲ ಪುಸ್ತಕಗಳನ್ನೂ ಸ್ವೇಚ್ಛೆಯಿಂದ ಓದಲು ಕಲಿತಿರುವ ಓದುಗವರ್ಗಕ್ಕೆ ಎಂದು ಸೂಚಿಸಿದ್ದರೂ, ಕನ್ನಡಿಯಲ್ಲಿ ಯಾರದು ಹಾಗೂ ಸೂಕ್ಷ್ಮದರ್ಶಕದ ಅಡಿಯಲ್ಲಿ ಪುಸ್ತಕಗಳು ಇನ್ನೊಬ್ಬರ ನೆರವಿನಿಂದ ಓದಿ ಕೇಳುವ ಪುಟ್ಟ ಮಕ್ಕಳಿಗೂ ಆಸಕ್ತಿ ತರಬಲ್ಲವು.  ಪ್ರಥಮ್‌ ಬುಕ್ಸ್‌ ಪ್ರಕಟಿಸಿರುವ ಇವುಗಳನ್ನು ಅಂಗಡಿಗಳಲ್ಲಿ ಕೊಳ್ಳಲಾಗದು.   ಆದರೆ ಆಸಕ್ತರಿಗೆ ಸ್ಟೋರಿವೀವರ್‌ ಜಾಲತಾಣದಲ್ಲಿ ಉಚಿತವಾಗಿ ಓದಲು ದೊರೆಯುತ್ತವೆ. ಅಗತ್ಯ ಬಿದ್ದರೆ ಡೌನ್‌ಲೋಡ್‌ ಮಾಡಿಕೊಳ್ಳಲೂ ಬಹುದು. ನಿಮ್ಮೂರಿನ ಶಾಲೆಗಳಿಗೆ ದಾನ ಮಾಡುವ ಇಚ್ಛೆ ಇದ್ದರೆ ನೇರವಾಗಿ ಪ್ರಥಮ್‌ ಬುಕ್ಸ್‌ನಿಂದ ಖರೀದಿಸಿ ಕೊಡಬಹುದು.

ಲೇಖಕರ ಮಾಹಿತಿ

1. ಕನ್ನಡಿಯಲ್ಲಿ ಯಾರದು? (ISBN: 978-93-5467-857-8)

ಲೇಖಕಿ: ಶಾಲಿನಿ ಶ್ರೀನಿವಾಸನ್‌

ಚಿತ್ರಗಳು ಪಿಯಾ ಅಲಿಸೆ ಹಜಾರಿಕಾ

ಅನುವಾದ: ಸಂದೇಶ್‌ ಎಚ್‌ ನಾಯ್ಕ್‌

2. ತಿಮಿಂಗಲದ ಹಾಡು ಕೇಳಿದ್ದೀರಾ? (ISBN: 978-93-5467-874-5)

ಲೇಖಕರು: ದಿವ್ಯಾ ಪಣಿಕ್ಕರ್‌

ಚಿತ್ರಗಳು: ದೀಪ್ತಿ ಶರ್ಮಾ

ಅನುವಾದ: ಭಾರತಿ ಹೆಗಡೆ

3. ಇರಾಳ ಅದೃಶ್ಯ ಪ್ರಪಂಚ (ISBN: 978-93-5467-936-0)

ಲೇಖಕರು: ಮೇನಕಾ ರಾಮನ್‌

ಚಿತ್ರಗಳು: ಅಂಜೋರಾ ನೊರೊನ್ಹಾ

ಅನುವಾದ: ಮಹೇಶ ಶಿವನಂಜಪ್ಪ

4. ಸೂಕ್ಷ್ಮದರ್ಶಕದ ಅಡಿಯಲ್ಲಿ (ISBN: 973-93-5467-919-3)

ಲೇಖಕರು: ಸಿ. ಜಿ. ಸಲಮಾಂಡರ್‌

ಚಿತ್ರಗಳು: ಇಪ್ಸಾ ಜೈನ್‌

ಅನುವಾದ: ಸಾವಿತ್ರಿ ಗಾಯ್‌ಕೊಂಡೆ ಶಾನಭಾಗ್‌

ಎಲ್ಲ ಪುಸ್ತಕಗಳ ಪ್ರಕಾಶಕರು:

ಪ್ರಥಮ್‌ ಬುಕ್ಸ್‌,

#521, 2ನೇ ಮಹಡಿ, 5ನೇ ಮೈನು

ಓಎಂಬಿಆರ್‌ ಲೇ ಔಟ್‌, ಬಾಣಸವಾಡಿ

ಬೆಂಗಳೂರು-ಬೆಂಗಳೂರು-560043

ಸಂಪರ್ಕ: ದೂರವಾಣಿ – +91-80-42052574; 41159009

ಜಾಲತಾಣ: www.prathambooks.org

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »