ಕಳೆದ ತಿಂಗಳು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಗೆ ಭಾಜನರಾದ ಹಾಸನದ ಮೂಲದ ಲೇಖಕಿ ಬಾನು ಮುಷ್ತಾಕ್ ಅವರನ್ನು ಡಿಸೆಂಬರ್ ತಿಂಗಳಲ್ಲಿ, ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಭಾನುವಾರ ಬಳ್ಳಾರಿಯ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹದಿನೈದು ವರ್ಷಗಳ ನಂತರ ಲೇಖಕಿಯೊಬ್ಬರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. 2010ರಲ್ಲಿ ಗೀತಾ ನಾಗಭೂಷಣ್ ಅವರನ್ನು ಗದಗ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
ಲೇಖಕಿ, ಅನುವಾದಕಿ, ದೀಪಾ ಭಾಸ್ತಿಯವರು, ಅನುವಾದಿಸಿದ, ನುಮುಷ್ತಾಕ್ ಅವರ ಆಯ್ದ ಕತೆಗಳ ಇಂಗ್ಲಿಷ್ ಸಂಕಲನ, ಹಾರ್ಟ್ ಲ್ಯಾಂಪ್ ಕೃತಿಗೆ ಇತ್ತೀಚೆಗೆ ಬುಕರ್ ಪುರಸ್ಕಾರ ಲಭಿಸಿತು. ಇದೇ ಮೊದಲ ಬಾರಿಗೆ ಕನ್ನಡಕ್ಕೆ ಈ ಗೌರವ ಸಂದ ಹಿನ್ನೆಲೆಯಲ್ಲಿ ಬಾನು ಮುಷ್ತಾಕ್ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಕೃತಿಯ ಅನುವಾದಕರಾದ ದೀಪಾ ಅವರನ್ನು ಸನ್ಮಾನಿಸಲು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮಹೇಶ್ ಜೋಶಿ ಆಯ್ಕೆಯಾದ ಮೇಲೆ ಹಲವು ಕಾರಣಗಳಿಗೆ ಕಸಾಪ ವಿವಾದಗಳಿಂದಾಗಿ ಸುದ್ದಿ ಮಾಡುತ್ತಿತ್ತು.







