ಕ್ರಿಕೆಟಿಗ ಯಶ್‌ ದಯಾಳ್‌ಗೆ ತಾತ್ಕಾಲಿಕ ರಿಲೀಫ್‌ ನೀಡಿದ ಕೋರ್ಟ್ 

ಕ್ರಿಕೆಟಿಗ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತಾತ್ಕಾಲಿಕ ರಿಲೀಫ್‌ ನೀಡಿದೆ.
Yash Dayal sexual exploitation  

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೇಗದ ಬೌಲರ್ ಯಶ್ ದಯಾಳ್‌ ವಿರುದ್ಧ ಮದುವೆಯ ಆಮಿಷದಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತಾತ್ಕಾಲಿಕ ರಿಲೀಫ್‌ ನೀಡಿದೆ. ಜುಲೈ 15ರಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅನಿಲ್ ಕುಮಾರ್ ಅವರ ವಿಭಾಗೀಯ ಪೀಠ, ದಯಾಳ್‌ರ ಬಂಧನಕ್ಕೆ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸರ್ಕಾರಿ ವಕೀಲರಿಗೆ ನಿರ್ದೇಶನ ನೀಡಿದೆ. ದೂರುದಾರ ಮಹಿಳೆಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ನೋಟಿಸ್ ಜಾರಿಗೊಳಿಸಲಾಗಿದೆ ಎಂದು ದಯಾಳ್‌ರ ವಕೀಲ ಗೌರವ್ ತ್ರಿಪಾಠಿ ತಿಳಿಸಿದ್ದಾರೆ.

ಆರೋಪಗಳ ಹಿನ್ನೆಲೆ: 

27 ವರ್ಷದ ಯಶ್ ದಯಾಳ್ ವಿರುದ್ಧ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಜುಲೈ 6ರಂದು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 69ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಸೆಕ್ಷನ್ ಮದುವೆಯ ಆಮಿಷದಡಿ ವಂಚನೆಯಿಂದ ಲೈಂಗಿಕ ಸಂಬಂಧವನ್ನು ಪಡೆಯುವುದಕ್ಕೆ ಸಂಬಂಧಿಸಿದೆ. ದೂರುದಾರ ಮಹಿಳೆಯ ಪ್ರಕಾರ, ತಾವು ದಯಾಳ್‌ರನ್ನು 2019ರಲ್ಲಿ ಸಾಮಾಜಿಕ ಜಾಲಾತಾಣದ ಮೂಲಕ ಭೇಟಿಯಾಗಿದ್ದು, ಐದು ವರ್ಷಗಳಿಂದ ಸಂಬಂಧದಲ್ಲಿದ್ದರು. ದಯಾಳ್ ತಮಗೆ ಮದುವೆಯ ಭರವಸೆ ನೀಡಿದ್ದರು ಮತ್ತು ತಮ್ಮ ಕುಟುಂಬಕ್ಕೆ ಸೊಸೆಯಾಗಿ ಪರಿಚಯಿಸಿದ್ದರು. ಆದರೆ, ದಯಾಳ್ ಮದುವೆಯನ್ನು ಮುಂದೂಡುತ್ತಿದ್ದು, ಕೊನೆಗೆ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದು ತಿಳಿದುಬಂದಿತು ಎಂದು ಆರೋಪಿಸಿದ್ದಾರೆ.

ಮಹಿಳೆಯ ದೂರಿನಲ್ಲಿ, ದಯಾಳ್ ತಮ್ಮನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ತಾವು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪಗಳನ್ನು ಬೆಂಬಲಿಸಲು ಮೊಬೈಲ್ ಕಾಲ್ ದಾಖಲೆಗಳು, ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳು ಮತ್ತು ವೀಡಿಯೊ ಕಾಲ್ ದಾಖಲೆಗಳನ್ನು ಪೊಲೀಸರಿಗೆ ಒದಗಿಸಲಾಗಿದೆ.

ದಯಾಳ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಪ್ರಯಾಗ್‌ರಾಜ್ ಪೊಲೀಸರಿಗೆ ದೂರು ಸಲ್ಲಿಸಿ, ಆರೋಪಿಯಾದ ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ. ತಮ್ಮ ಐಫೋನ್ ಮತ್ತು ಲ್ಯಾಪ್‌ಟಾಪ್ ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. 2020ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ತಾವು ಆಕೆಯನ್ನು ಭೇಟಿಯಾದದ್ದಾಗಿ, ಆಕೆಯ ಕುಟುಂಬದ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾಗಿ, ಆದರೆ ಆಕೆ ಆ ಹಣವನ್ನು ಮರಳಿಸಿಲ್ಲ ಎಂದು ದಯಾಳ್ ತಿಳಿಸಿದ್ದಾರೆ. ಮದುವೆಯ ಒತ್ತಡ ಹೇರಿದಾಗ ಆಕೆ ಆತ್ಮಹತ್ಯೆ ಧಮಕಿಗಳನ್ನು ನೀಡುತ್ತಿದ್ದಳು ಎಂದು ದಯಾಳ್ ಆರೋಪಿಸಿದ್ದಾರೆ.

ದಯಾಳ್‌ರ ವಕೀಲರಾದ ಗೋಪಾಲ್ ಸ್ವರೂಪ್ ಚತುರ್ವೇದಿ, ಗೌರವ್ ತ್ರಿಪಾಠಿ ಮತ್ತು ರಘುವಂಶ್ ಮಿಶ್ರಾ ಅವರು, ಐದು ವರ್ಷಗಳ ಕಾಲ ಸಂಬಂಧದಲ್ಲಿದ್ದಾಗ ಆಕೆಯನ್ನು ಮೋಸಗೊಳಿಸಲಾಗಿದೆ ಎಂದು ಒಪ್ಪಿಕೊಳ್ಳುವುದು ಅಸಂಭವ ಎಂದು ವಾದಿಸಿದ್ದಾರೆ. ದಯಾಳ್ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ನಂತರ ಈ ದೂರು ದಾಖಲಾಗಿದ್ದು, ಇದರ ಹಿಂದೆ ದುರುದ್ದೇಶವಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | ಆರ್‌ಸಿಬಿ ಕ್ರಿಕೆಟಿಗ ಯಶ್ ದಯಾಳ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಕೋರ್ಟ್‌ನ ಆದೇಶ

ನ್ಯಾಯಾಲಯವು ಎಫ್‌ಐಆರ್ ಪರಿಶೀಲಿಸಿದ್ದು, ಐದು ವರ್ಷಗಳ ಸಂಬಂಧದಿಂದ ಮದುವೆಯ ಭರವಸೆ ಇದ್ದಿಯೋ ಇಲ್ಲವೋ, ಅಥವಾ ಆ ಭರವಸೆ ವಂಚನೆಯ ಉದ್ದೇಶದಿಂದ ನೀಡಲಾಗಿತ್ತೇ ಎಂದು ಈ ಹಂತದಲ್ಲಿ ನಿರ್ಧರಿಸಲು ಕಷ್ಟ ಎಂದು ತಿಳಿಸಿದೆ. “ಒಬ್ಬರನ್ನು ಒಂದು ದಿನ, ಎರಡು ದಿನ, ಮೂರು ದಿನ ಮೋಸಗೊಳಿಸಬಹುದು, ಆದರೆ ಐದು ವರ್ಷಗಳ ಕಾಲ ಮೋಸಗೊಳಿಸಲಾಗದು,” ಎಂದು ನ್ಯಾಯಾಲಯವು ಮೌಖಿಕವಾಗಿ ಗಮನಿಸಿದೆ. ಈ ಕಾರಣಕ್ಕೆ, ಮುಂದಿನ ವಿಚಾರಣೆ ಅಥವಾ ಪೊಲೀಸ್ ವರದಿ ಸಲ್ಲಿಕೆಯವರೆಗೆ ದಯಾಳ್‌ರ ಬಂಧನವನ್ನು ತಡೆಯಲಾಗಿದೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »