ಜು.23-25: ಜಿಎಸ್‌ಟಿ ನೋಟಿಸ್‌ ಖಂಡಿಸಿ ಕಾಫಿ, ಚಾ ಮಾರಾಟ ಬಂದ್

ಸಣ್ಣ ಉದ್ದಿಮೆದಾರರಿಗೆ ಜಿಎಸ್‌ಟಿ ನೋಟಿಸ್‌ಗಳನ್ನು ಜಾರಿಗೊಳಿಸಿರುವ ಕ್ರಮವನ್ನು ವಿರೋಧಿಸಿ, ಸಣ್ಣ ಉದ್ಯಮಿಗಳ ಸಂಘವು ಜುಲೈ 23 ರಿಂದ 25ರವರೆಗೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.
 GST notice 

ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ ವಾರ್ಷಿಕ 40 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿರುವ ಸಣ್ಣ ಉದ್ದಿಮೆದಾರರಿಗೆ ಜಿಎಸ್‌ಟಿ ನೋಟಿಸ್‌ಗಳನ್ನು ಜಾರಿಗೊಳಿಸಿರುವ ಕ್ರಮವನ್ನು ವಿರೋಧಿಸಿ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್, ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ಯಮಿಗಳ ಸಂಘವು ಜುಲೈ 23 ರಿಂದ 25ರವರೆಗೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು, ಈ ಕ್ರಮವು ಸಣ್ಣ ವ್ಯಾಪಾರಿಗಳ ಜೀವನಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಆರೋಪಿಸಿದರು.

 ಜುಲೈ 23 ಮತ್ತು 24ರಂದು ರಾಜ್ಯದಾದ್ಯಂತ ಸಣ್ಣ ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ, ಹಾಲು, ಟೀ, ಕಾಫಿ ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಿದ್ದಾರೆ. ಜುಲೈ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ. ಈ ದಿನ ರಾಜ್ಯಾದ್ಯಂತ ಎಲ್ಲ ವರ್ಗದ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಈ ಸಮಾವೇಶದಲ್ಲಿ ಭಾಗವಹಿಸುವಂತೆ ರವಿ ಶೆಟ್ಟಿ ಮನವಿ ಮಾಡಿದ್ದಾರೆ. “ನಮ್ಮ ಹಿತಾಸಕ್ತಿಗೆ ವಿರುದ್ಧವಾದ ಈ ಕ್ರಮವನ್ನು ಸರ್ಕಾರ ಹಿಂಪಡೆಯದಿದ್ದರೆ, ಹೋರಾಟವನ್ನು ತೀವ್ರಗೊಳಿಸುತ್ತೇವೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | GST ನೋಟೀಸ್‌: ರಾಮಲಿಂಗಾ ರೆಡ್ಡಿಯಿಂದ ಬಿಜೆಪಿಗೆ ತಿರುಗೇಟು

ವಾಣಿಜ್ಯ ತೆರಿಗೆ ಇಲಾಖೆಯ ಕ್ರಮ

ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು 2021-22 ರಿಂದ 2024-25ರವರೆಗಿನ ಯುಪಿಐ ವಹಿವಾಟು ಡೇಟಾವನ್ನು ಆಧರಿಸಿ, 40 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ವಹಿವಾಟು ನಡೆಸಿರುವ 14,000ಕ್ಕೂ ಹೆಚ್ಚು ವರ್ತಕರಿಗೆ ಜಿಎಸ್‌ಟಿ ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಈ ನೋಟಿಸ್‌ಗಳು ಫೋನ್‌ಪೇ, ಪೇಟಿಎಂ ಮತ್ತು ಇತರ ಯುಪಿಐ ಸೇವೆಗಳ ಮೂಲಕ ಪಾವತಿಗಳನ್ನು ಆಧರಿಸಿವೆ. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 22ರ ಅಡಿಯಲ್ಲಿ, ಸರಕುಗಳ ವಾರ್ಷಿಕ ವಹಿವಾಟು 40 ಲಕ್ಷ ರೂ. ಮತ್ತು ಸೇವೆಗಳಿಗೆ 20 ಲಕ್ಷ ರೂ. ಮೀರಿದರೆ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದೆ. ಆದರೆ, ತೆರಿಗೆಯ ಬಾಧ್ಯತೆ ಕೇವಲ ತೆರಿಗೆ ವಿಧಿಸಬಹುದಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಉದಾಹರಣೆಗೆ, ಬ್ರೆಡ್‌ಗೆ ತೆರಿಗೆ ವಿನಾಯಿತಿ ಇದ್ದರೆ, ಸ್ನ್ಯಾಕ್ಸ್‌ಗೆ 5% ತೆರಿಗೆ ಇದೆ.

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ನ ರವಿ ಶೆಟ್ಟಿ ಅವರು, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ಉದ್ದಿಮೆದಾರರಿಗೆ ವಿರೋಧಿಯಾದ ನೀತಿಗಳನ್ನು ಅನುಸರಿಸುತ್ತಿವೆ. ಜಿಎಸ್‌ಟಿ ಕಾಯ್ದೆಯಡಿ ರಿಯಾಯಿತಿಗಳಿದ್ದರೂ, ಈ ನೋಟಿಸ್‌ಗಳು ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಒತ್ತಡವನ್ನುಂಟು ಮಾಡಿವೆ,” ಎಂದು ಆರೋಪಿಸಿದ್ದಾರೆ. ಜುಲೈ 24ರೊಳಗೆ ನೋಟಿಸ್‌ಗಳನ್ನು ಹಿಂಪಡೆಯದಿದ್ದರೆ, ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯು ಸಣ್ಣ ವ್ಯಾಪಾರಿಗಳ ಹಿತಾಸಕ್ತಿಗಾಗಿ ಸಹಾಯವಾಣಿ (8884245123) ಆರಂಭಿಸಿದೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »