2000ರ ಜುಲೈ, ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದ ಸಂದರ್ಭ. ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರ ಅಪಹರಣದ ಸುದ್ದಿಯಿಂದ ಇಡೀ ರಾಜ್ಯವೇ ತಲ್ಲಣಗೊಂಡಿತ್ತು. ಈ ಸಂಕಷ್ಟದ ಸಮಯದಲ್ಲಿ ಒಬ್ಬರೇ ಒಬ್ಬರು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ವೀರಪ್ಪನ್‌ನಿಂದ ನೇರ ಮಾಹಿತಿಯನ್ನು ತಂದುಕೊಡುತ್ತಿದ್ದರು. ಆ ವ್ಯಕ್ತಿ ನಕ್ಕೀರನ್ ಗೋಪಾಲ್, ಈತ ತಮಿಳುನಾಡಿನ ‘ನಕ್ಕೀರನ್’ ವಾರಪತ್ರಿಕೆಯ ಸಂಪಾದಕ.
ನಕ್ಕೀರನ್ ಗೋಪಾಲ್ ಅವರಿಗೆ ವೀರಪ್ಪನ್‌ನೊಂದಿಗೆ ನೇರ ಸಂಪರ್ಕವಿತ್ತು. ರಾಜ್‌ಕುಮಾರ್ ಅವರ ಆರೋಗ್ಯ, ವೀರಪ್ಪನ್‌ನ ಬೇಡಿಕೆಗಳು, ಮತ್ತು ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಅವರು ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದರು. ಅವರ ಮಾತುಗಳೇ ಅಧಿಕೃತವಾಗಿದ್ದವು. ಆದರೆ, ಕರ್ನಾಟಕದ ಯಾವುದೇ ಮಾಧ್ಯಮವು ಇದುವರೆಗೆ ನಕ್ಕೀರನ್ ಅವರನ್ನು ಸಂದರ್ಶಿಸಿರಲಿಲ್ಲ. ಈ ಸಂದರ್ಭದಲ್ಲಿ ಪ್ರಸರಣೆಯಲ್ಲಿದ್ದ , ಕನ್ನಡದ ‘ಆಕೃತಿ’ ಪಾಕ್ಷಿಕ ಪತ್ರಿಕೆಯ ಉಪಸಂಪಾದಕ ಮತ್ತು ವರದಿಗಾರ ಕನಕರಾಜು ಅವರು ಸಂದರ್ಶನ ಮಾಡಲು ಮುಂದಾದರು. ಅವರು ಚೆನೈಗೆ ತೆರಳಿ, ರಾಜ್‌ಕುಮಾರ್ ಅಪಹರಣವಾಗಿ ಹತ್ತು ದಿನಗಳಾದ ನಂತರ, ನಕ್ಕೀರನ್ ಗೋಪಾಲ್ ಅವರೊಂದಿಗೆ ಕನ್ನಡದಲ್ಲಿ ಮೊದಲ ಸಂದರ್ಶನವನ್ನು ಮಾಡಿದ್ದರು.

ಸಂದರ್ಶನದ ಕ್ಷಣಗಳು
ಕನಕರಾಜು ಅವರಿಗೆ ಈ ಸಂದರ್ಶನಕ್ಕೆ ಮೂರು ದಿನಗಳ ಕಾಯುವಿಕೆಯ ನಂತರ ಅವಕಾಶ ಸಿಕ್ಕಿತು. “ನಾನು ಆಗ ಇನ್ನೂ ವಿದ್ಯಾರ್ಥಿಯಾಗಿದ್ದೆ. ಆದರೂ, ರಾಜ್‌ಕುಮಾರ್ ಅವರ ಅಪಹರಣದ ಬಗ್ಗೆ ಇಡೀ ಕರ್ನಾಟಕದ ಆತಂಕವನ್ನು ನಕ್ಕೀರನ್ ಅವರಿಗೆ ಮನದಟ್ಟು ಮಾಡಿದೆ,” ಎಂದು ಕನಕರಾಜು ಹೇಳುತ್ತಾರೆ. ಸಂದರ್ಶನದಲ್ಲಿ, ರಾಜ್‌ಕುಮಾರ್ ಅವರ ಆರೋಗ್ಯ, ವೀರಪ್ಪನ್‌ನ ಬೇಡಿಕೆಗಳು ಮತ್ತು ಅವರನ್ನು ಕಾಡಿನಲ್ಲಿ ಸ್ಥಳಾಂತರಿಸುವ ರೀತಿಯ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು.
ನಕ್ಕೀರನ್ ಗೋಪಾಲ್ ಹೇಳಿದಂತೆ, “ವೀರಪ್ಪನ್ ಮತ್ತು ಆತನ ಸಹಚರರು ರಾಜ್‌ಕುಮಾರ್ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಅವರನ್ನು ‘ಅಣ್ಣಾ’ ಎಂದು ಗೌರವದಿಂದ ಕರೆಯುತ್ತಿದ್ದರು. ಆದರೆ, ಮೊದಲು ರಾಜ್‌ಕುಮಾರ್ ಸ್ವಲ್ಪ ಗಲಿಬಿಲಿಯಾಗಿದ್ದರು. ನಂತರ ಅವರು ಸರಿಹೋದರು.” ವೀರಪ್ಪನ್‌ನ ಮೂರು ಪ್ರಮುಖ ಬೇಡಿಕೆಗಳ ಬಗ್ಗೆಯೂ ಗೋಪಾಲ್ ಮಾಹಿತಿ ನೀಡಿದರು. “ಪ್ರತಿ ಆರು ಗಂಟೆಗೊಮ್ಮೆ ರಾಜ್‌ಕುಮಾರ್ ಅವರನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ತುಂಬಾ ಜಾಗರೂಕತೆಯಿಂದ ಸ್ಥಳಾಂತರಿಸಲಾಗುತ್ತಿತ್ತು,” ಎಂದು ಅವರು ವಿವರಿಸಿದರು.
ದಂತವಿಲ್ಲದ ಆನೆ ಕಥೆ
ಸಂದರ್ಶನದಲ್ಲಿ ನಕ್ಕೀರನ್ ಗೋಪಾಲ್ ಒಂದು ರೋಚಕ ಮತ್ತು ರೋಮಾಂಚಕ ಘಟನೆಯನ್ನು ಹಂಚಿಕೊಂಡರು. ರಾಜ್‌ಕುಮಾರ್ ಮತ್ತು ಇತರರನ್ನು ಸ್ಥಳಾಂತರಿಸುವಾಗ, ಕಾಡಿನ ದಾರಿಯಲ್ಲಿ ಒಂದು ದಂತವಿಲ್ಲದ ಆನೆ ಮೇಲಿನಿಂದ ಕೆಳಗೆ ಧಾವಿಸುತ್ತಿರುವುದನ್ನು ಯಾರೂ ಗಮನಿಸಿರಲಿಲ್ಲ. “ನಾನೂ ಆ ಸಂದರ್ಭದಲ್ಲಿ ರಾಜ್‌ಕುಮಾರ್ ಜೊತೆಗಿದ್ದೆ,” ಎಂದು ಗೋಪಾಲ್ ಹೇಳಿದರು. ವೀರಪ್ಪನ್‌ನ ಗುಪ್ತಚರರು ಮರದ ಮೇಲಿಂದ ಎಲ್ಲವನ್ನೂ ಗಮನಿಸುತ್ತಿದ್ದರು. ಆಗ ದಿಢೀರ್ ಎಂದು ವೀರಪ್ಪನ್ ಎಲ್ಲರನ್ನೂ ತಡೆದರು. “ಅವನ ಬಲಗೈ ಭಂಟ ಸೇತುಕುಳಿ ಗೋವಿಂದನಿಗೆ ಏನೋ ಸೂಚನೆ ಸಿಗುತ್ತದೆ. ನಂತರ ಎಲ್ಲರೂ ಎಡಭಾಗಕ್ಕೆ ಸರಿಯುತ್ತಾರೆ. ಸರಿದ ಎರಡೇ ಕ್ಷಣಕ್ಕೆ, ಬೆಟ್ಟದ ಮೇಲಿದ್ದ ಆನೆ ಕೆಳಗೆ ಬೀಳುತ್ತದೆ. ಒಂದು ವೇಳೆ ಸ್ವಲ್ಪ ತಡವಾಗಿದ್ದರೆ, ಆನೆ ನಮ್ಮ ಮೇಲೆ ಬಿದ್ದಿರುತ್ತಿತ್ತು,” ಎಂದು ಗೋಪಾಲ್ ರೋಮಾಂಚಕವಾಗಿ ವಿವರಿಸಿದರು. ಈ ಘಟನೆಯಿಂದ ರಾಜ್‌ಕುಮಾರ್ ಅವರ ಮುಖದಲ್ಲಿ ಸ್ವಲ್ಪ ಭಯ ಕಾಣಿಸಿತು ಎಂದೂ, ತಾನೂ ಭಯಭೀತನಾಗಿದ್ದೆ ಎಂದೂ ಗೋಪಾಲ್ ಹೇಳಿದರು.
ಇದನ್ನೂ ಓದಿ | ಡಾ. ರಾಜ್‌ಕುಮಾರ್ ಅಪಹರಣ: ಇಂದಿಗೆ 25 ವರ್ಷ
ಇದರ ಜೊತೆಗೆ ಕನಕರಾಜು ಅವರು ತಮ್ಮ ಜೀವನದ ಅವರು ಮಾಡಿರುವ ದೊಡ್ಡ ತಪ್ಪೆಂದರೆ “ನನಗೆ ತಮಿಳು ಚೆನ್ನಾಗಿ ಬರುತ್ತಿತ್ತು. ಬಹುಶಃ ನಕ್ಕೀರನ್ ಗೋಪಾಲ್ ಅವರು ನನ್ನನ್ನು ತಮ್ಮ ಜೊತೆ ಕಾಡಿಗೆ ಕರೆದುಕೊಂಡು ಹೋಗುತ್ತಿದ್ದರೇನೋ. ರಾಜ್‌ಕುಮಾರ್ ಅವರನ್ನು ಭೇಟಿಯಾಗಲು ವೀರಪ್ಪನ್ ಬಳಿಗೆ ಕರ್ನಾಟಕದಿಂದ ಒಬ್ಬ ಪತ್ರಕರ್ತನಾಗಿ ನಾನು ಹೋಗಬಹುದಿತ್ತು. ಆ ಆಸೆಯೂ ಇತ್ತು, ಕೇಳಬೇಕೆಂದುಕೊಂಡಿದ್ದೆ. ಆದರೆ, ಯಾಕೋ ಧೈರ್ಯ ಮಾಡಲಿಲ್ಲ,” ಎಂದು ಕನಕರಾಜು ಖೇದದಿಂದ ನೆನಪಿಸಿಕೊಂಡರು.
ಇದರ ಜೊತೆಗೆ “ನಕ್ಕೀರನ್ ಅವರು ನನ್ನ ಪ್ರಶ್ನೆಗಳನ್ನು ನೋಡಿ ತುಂಬಾ ಖುಷಿಪಟ್ಟಿದ್ದರು. ಅವರ ಪತ್ರಿಕೆಯಲ್ಲಿ ಪ್ರಕಟವಾಗದೇ ಇರುವ ಕೆಲವು ವಿಶೇಷ ಫೋಟೋಗಳನ್ನು ಕೂಡ ನನಗೆ ನೀಡಿದರು,” ಎಂದು ಕನಕರಾಜು ಹೇಳಿದರು. ಈ ಸಂದರ್ಶನದ ನಂತರವೂ ಅವರು ಗೋಪಾಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿಸಿದರು.ಈ ಸಂದರ್ಶನದ ಮೂಲಕ ಕನಕರಾಜು ಅವರು ಕರ್ನಾಟಕದ ಜನತೆಗೆ ರಾಜ್‌ಕುಮಾರ್ ಅವರ ಬಗ್ಗೆ ಅತ್ಯಂತ ಮೌಲ್ಯಯುತ ಮಾಹಿತಿಯನ್ನು ತಂದುಕೊಟ್ಟರು ಎನ್ನಬಹುದು.







