ECI ವಿರುದ್ಧ ಕಾಂಗ್ರೆಸ್ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂಬ ಗಂಭೀರ ಆರೋಪದಡಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.
rahul gandhi protest

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂಬ ಗಂಭೀರ ಆರೋಪದಡಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಈ ಸಮಾವೇಶವು ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನ ಜನಾಂದೋಲನದ ಆರಂಭವಾಗಿದ್ದು, ಮತದಾರರ ಹಕ್ಕುಗಳ ರಕ್ಷಣೆಗಾಗಿ ದೇಶಾದ್ಯಂತ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವು ಬಿಜೆಪಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮಹದೇವಪುರ ಮತ್ತು ರಾಜಾಜಿನಗರದಂತಹ ಕ್ಷೇತ್ರಗಳಲ್ಲಿ ನಕಲಿ ಮತದಾರರ ಸೇರ್ಪಡೆಯಾಗಿದೆ ಎಂದು ದಾಖಲೆಗಳೊಂದಿಗೆ ದೂರಿದ್ದಾರೆ. ಈ ಆರೋಪಗಳನ್ನು ಬಲವಾಗಿ ಒತ್ತಿಹೇಳಲು, ಸಮಾವೇಶದ ನಂತರ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ದಾಖಲೆ ಸಹಿತ ದೂರು ಸಲ್ಲಿಸಲಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ರಾಜ್ಯಾದಾದ್ಯಂತದಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ. ಕಾಂಗ್ರೆಸ್‌ನ ಈ ಬೃಹತ್ ಸಮಾವೇಶಕ್ಕೆ ಸಿದ್ಧತೆಯಾಗಿ, ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಕಟ್ಟಡದ ತಳಮಹಡಿಯಲ್ಲಿ ಭವ್ಯವಾದ ವೇದಿಕೆಯನ್ನು ನಿರ್ಮಿಸಲಾಗಿದೆ. 8,000ಕ್ಕೂ ಹೆಚ್ಚು ಆಸನಗಳನ್ನು ಸಾರ್ವಜನಿಕರಿಗಾಗಿ ವ್ಯವಸ್ಥೆಗೊಳಿಸಲಾಗಿದ್ದು, ಎಲ್‌ಇಡಿ ತೆರೆಗಳ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲಾ, ಮತ್ತು ಇತರ ನಾಯಕರು ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 50 ಮಂದಿ ಕಾರ್ಯಕರ್ತರನ್ನು ಕರೆತರುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. “ನಮ್ಮ ಮತ, ನಮ್ಮ ಹಕ್ಕು” ಎಂಬ ಘೋಷವಾಕ್ಯದೊಂದಿಗೆ, ಈ ಪ್ರತಿಭಟನೆಯು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಒತ್ತಾಯಿಸುವ ಜನಾಂದೋಲನವಾಗಿ ರೂಪುಗೊಳ್ಳಲಿದೆ.

ಇದನ್ನೂ ಓದಿ | 2024ರ ಚುನಾವಣೆಯಲ್ಲಿ ಮತಗಳ್ಳತನ: ರಾಗಾ ದಾಖಲೆ ?

ಬಿಜೆಪಿಯು ಈ ಪ್ರತಿಭಟನೆಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದು, ಸ್ವಾತಂತ್ರ್ಯ ಉದ್ಯಾನದಲ್ಲಿ ವೇದಿಕೆ ನಿರ್ಮಾಣಕ್ಕಾಗಿ ಕಾಂಪೌಂಡ್ ಗೋಡೆ ಮತ್ತು ಮರಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆದರೆ, ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಎಲ್ಲಾ ಕಾನೂನುಬದ್ಧ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದೆ.

ಪೊಲೀಸ್ ಇಲಾಖೆಯು ಸಮಾವೇಶದ ಸುರಕ್ಷತೆಗಾಗಿ 4,459 ಮಂದಿ ಸಿಬ್ಬಂದಿಯನ್ನು ನಿಯೋಜಿಸಿದ್ದು, ಶಾಂತಲಾ ಜಂಕ್ಷನ್, ಖೋಡ್ ಸರ್ಕಲ್‌ನಿಂದ ಆನಂದ್ ರಾವ್ ಮೇಲ್ಸೇತುವೆಯವರೆಗಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದೆ. ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »