ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ವಿಶೇಷವಾದ ಮತ್ತು ಪವಿತ್ರವಾದ ಬಂಧವೆಂದರೆ ಅದು ಸಹೋದರ ಮತ್ತು ಸಹೋದರಿಯ ಸಂಬಂಧ . ಇದು ರಕ್ತ ಸಂಬಂಧವನ್ನು ಮೀರಿದ ಒಂದು ಭಾವನಾತ್ಮಕ ಒಡನಾಟವಾಗಿದ್ದು, ಪ್ರೀತಿ, ಕಾಳಜಿ, ತ್ಯಾಗ ಎಲ್ಲವನ್ನೂ ಒಳಗೊಂಡಿರುತ್ತದೆ. ಜೀವನದ ಸಂತೋಷ, ದುಃಖ, ನೋವು. ನಲಿವು ಎಲ್ಲಾ ಹಂತದಲ್ಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವ ಶಕ್ತಿ ಈ ಸುಂದರ ಅನುಬಂಧಕ್ಕಿದೆ. ರಕ್ಷಾಬಂಧನವು ಈ ಸುಂದರ ಬಂಧವನ್ನು ಆಚರಿಸುವ ಮತ್ತು ಬಲಪಡಿಸುವ ಒಂದು ವಿಶಿಷ್ಟ ಹಬ್ಬವಾಗಿದೆ, ಇದರಲ್ಲಿ ಸಹೋದರಿಯು ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟಿ, ಅವನ ರಕ್ಷಣೆ ಮತ್ತು ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾಳೆ, ಮತ್ತು ಸಹೋದರ ತನ್ನ ಸಹೋದರಿಯನ್ನು ಎಂದಿಗೂ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ.
ಅಣ್ಣ – ತಂಗಿ, ಅಕ್ಕ- ತಮ್ಮನ ಒಡನಾಟವೇ ಚಂದ . ಚಿಕ್ಕ ವಯಸ್ಸಿನಲ್ಲಂತೂ ಆಗಾಗ ಕಿತ್ತಾಟ, ಜಗಳ ಮತ್ತು ಕೀಟಲೆಗಳು ಸಾಮಾನ್ಯವಾಗಿರುತ್ತವೆ. ಆದರೆ ಈ ಎಲ್ಲದರ ಹಿಂದೆ ಒಂದು ಗಾಢವಾದ ಪ್ರೀತಿ ಮತ್ತು ಕಾಳಜಿಯ ಭಾವನೆ ಇರುತ್ತದೆ, ಇದು ಸಮಯ ಕಳೆದಂತೆ ಇನ್ನಷ್ಟು ಬಲವಾಗುತ್ತದೆ.

ತಾಯಿಯಂತೆ ಕಾಳಜಿವಹಿಸುವ ಸಹೋದರಿ, ತನ್ನ ಸುಖ ದುಃಖಗಳನ್ನು ಯಾವುದೇ ಮುಚ್ಚುಮರೆಯಿಲ್ಲದೇ ತನ್ನ ಸಹೋದರರನ ಬಳಿ ಬಿಚ್ಚುಡುತ್ತಾಳೆ. ಜೀವನದ ಪ್ರತಿ ಹಂತದಲ್ಲೂ ಸಹೋದರಿಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹೋದರನ ಪ್ರೋತ್ಸಾಹ ಇದ್ದೇ ಇರುತ್ತದೆ. ಹಾಗೆಯೇ ಸಹೋದರನ ಯಶಸ್ಸಿನಲ್ಲಿ ಸಹೋದರಿಯ ಪ್ರಾರ್ಥನೆ ಮತ್ತು ಸಾಕಾರವಿರುತ್ತದೆ. ಬಹುಶಃ ಸ್ವಾರ್ಥವಿಲ್ಲದೆ ಸಂಬಂಧವೆಂದರೆ ಅದು ಸಹೋದರ ಸಹೋದರಿಯ ಸಂಬಂಧವಿರಬೇಕು. ಇಲ್ಲಿ ಕೇವಲ ಒಬ್ಬರಿಗೊಬ್ಬರ ಒಳಿತಿಗಾಗಿ ಯೋಚಿಸುವ ಗುಣವಿರುತ್ತದೆ.
ರಕ್ಷಾಬಂಧನವು ಸಹೋದರ-ಸಹೋದರಿಯರ ಸಂಬಂಧವನ್ನು ಆಚರಿಸುವ ಒಂದು ಸುಂದರ ಹಬ್ಬವಾಗಿದ್ದು. ಈ ದಿನ, ಸಹೋದರಿಯು ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟುವ ಸಂಪ್ರದಾಯ ಮೊದಲಿನಿಂದ ಇದೆ. ರಾಕಿ ಕೇವಲ ಒಂದು ದಾರವಲ್ಲ, ಅದೊಂದು ನಂಬಿಕೆ ಪ್ರೀತಿ, ವಿಶ್ವಾಸ ಮತ್ತು ಒಡನಾಟದ ಸಂಕೇತವಾಗಿದೆ.
ಈ ಹಬ್ಬವು ಕೇವಲ ಒಡಹುಟ್ಟಿದ ಸಹೋದರ-ಸಹೋದರಿಯರ ನಡುವಿನ ಸಂಬಂಧಕ್ಕೆ ಸೀಮಿತವಾಗಿಲ್ಲ. ಕೆಲವೊಮ್ಮೆ, ದೂರದ ಸಂಬಂಧಿಕರು, ಸ್ನೇಹಿತರು ಅಥವಾ ಗೆಳೆಯ-ಗೆಳತಿಯರಂತಹ ಆಪ್ತರಿಗೂ ರಾಖಿಯನ್ನು ಕಟ್ಟುವ ಸಂಪ್ರದಾಯವಿದೆ. ಇದು ಸಮಾಜದಲ್ಲಿ ಪರಸ್ಪರ ಕಾಳಜಿ ಮತ್ತು ಒಡನಾಟದ ಭಾವನೆಯನ್ನು ಬೆಳೆಸುತ್ತದೆ.
ಇದನ್ನೂ ಓದಿ | ನಾಗರ ಪಂಚಮಿ: ಸರ್ಪದೇವರ ಆರಾಧನೆಯ ಸೊಗಡು
ಈ ರಕ್ಷಾಬಂಧನದಂದು, ಎಲ್ಲಾ ಸಹೋದರ-ಸಹೋದರಿಯರು ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿ, ಒಬ್ಬರಿಗೊಬ್ಬರು ಪ್ರೀತಿಯಿಂದ, ಕಾಳಜಿಯಿಂದ ಮತ್ತು ಒಡನಾಟದಿಂದ ಜೀವನವನ್ನು ಇನ್ನಷ್ಟು ಸುಂದರಗೊಳಿಸಲಿ.







