ಕರ್ನಾಟಕ ಸಹಕಾರ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅವರು ಆಗಸ್ಟ್ 11, 2025ರಂದು ರಾಜೀನಾಮೆ ಸಲ್ಲಿಸಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ರಾಜಣ್ಣ ಅವರ ರಾಜೀನಾಮೆಯ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈವಾಡ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಇದು ಕೇವಲ ರಾಜಕೀಯ ಷಡ್ಯಂತ್ರವೇ ಅಥವಾ ಪಕ್ಷದ ಶಿಸ್ತುಕ್ರಮವೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ರಾಜಣ್ಣ ಅವರ ರಾಜೀನಾಮೆಯ ಪ್ರಮುಖ ಕಾರಣವೆಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ‘ಮತಗಳ್ಳತನ’ ನಡೆದಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಂಬಂಧಿಸಿದ್ದು. ರಾಹುಲ್ ಅವರು ಚುನಾವಣಾ ಆಯೋಗದ ವಿರುದ್ಧ ಆರೋಪಿಸಿದ್ದರು. ಆದರೆ ರಾಜಣ್ಣ ಅವರು ಪಕ್ಷದ ನಿಲುವಕ್ಕೆ ವಿರುದ್ಧವಾಗಿ ಮಾತನಾಡಿ, “ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಮತದಾರರ ಪಟ್ಟಿ ಪರಿಶೀಲನೆ, ಬೂತ್ ಏಜೆಂಟರ ತರಬೇತಿ, ಚುನಾವಣಾ ನಂತರ ದೂರು ಸಲ್ಲಿಕೆ – ಇದೆಲ್ಲವೂ ಪಕ್ಷದ ಜವಾಬ್ದಾರಿಯಾಗಿತ್ತು. ಇದನ್ನು ಮಾಡದೆ ಈಗ ಆಯೋಗದ ಮೇಲೆ ಆರೋಪ ಹೊರಿಸುವುದು ಸರಿಯಲ್ಲ” ಎಂದು ಹೇಳಿದ್ದರು. ಇದು ಪಕ್ಷದ ಹೈಕಮಾಂಡ್‌ಗೆ ಬೇಸರ ತಂದಿತು. ಈ ಹೇಳಿಕೆಯು ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದಂತೆಯೇ ಆಗಿತ್ತು, ಇದರಿಂದಾಗಿ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ರಾಜಣ್ಣರನ್ನು ವಜಾ ಮಾಡುವಂತೆ ಸೂಚಿಸಿತು.
ಪಕ್ಷದೊಳಗಿನ ಬಣ ರಾಜಕಾರಣ
ಆದರೆ ಈ ರಾಜೀನಾಮೆಯ ಹಿಂದೆ ಡಿಕೆಶಿ ಅವರ ಪಾತ್ರ ಇದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ. ಮಾರ್ಚ್ 2025ರಲ್ಲಿ ನಡೆದ ‘ಹನಿಟ್ರ್ಯಾಪ್’ ವಿವಾದದಲ್ಲಿ ರಾಜಣ್ಣ ಅವರು ತಾವು ಸೇರಿದಂತೆ 48 ರಾಜಕಾರಣಿಗಳು ಟಾರ್ಗೆಟ್ ಆಗಿದ್ದರೆಂದು ಆರೋಪಿಸಿದ್ದರು. ಇದರ ಹಿಂದೆ ಡಿಕೆಶಿ ಅವರ ಹೆಸರು ಕೇಳಿಬಂದಿತ್ತು, ಆದರೆ ಸಿಐಡಿ ತನಿಖೆಯಲ್ಲಿ ಯಾವುದೇ ಪುರಾವೆ ಸಿಗಲಿಲ್ಲ. ಈ ಪ್ರಕರಣ ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿತ್ತು ಮತ್ತು ವಿರೋಧ ಪಕ್ಷ ಬಿಜೆಪಿಗೆ ಅಸ್ತ್ರವಾಯಿತು.
ಈ ವಿವಾದವು ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ನಡುವಿನ ಅಧಿಕಾರ ಹೋರಾಟದ ಭಾಗವಾಗಿತ್ತು. ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಅವರ ಪ್ರಮುಖ ಪೈಪೋಟಿಯಾಗಿದ್ದರು. ಸಿಎಂ ಬದಲಾವಣೆಯ ಕೂಗು ಎದ್ದಾಗಲೆಲ್ಲಾ ಕೆಪಿಸಿಸಿ ಬದಲಾವಣೆಯನ್ನು ರಾಜಣ್ಣ ಒತ್ತಾಯಿಸುತ್ತಿದ್ದರು. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಬಳಗಕ್ಕೆ ರಾಜಣ್ಣ ಗಟ್ಟಿ ದನಿಯಾಗಿ ಬಿಂಬಿತರಾಗಿದ್ದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಡಿಕೆಶಿ ಅವರ ಆಪ್ತರೆಂದು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಡಿಕೆಶಿ ಅವರು ಸುರ್ಜೆವಾಲಾರನ್ನು ಪ್ರಭಾವಿಸಿ, ರಾಜಣ್ಣರ ರಾಜೀನಾಮೆಗೆ ಕಾರಣರಾದರೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಹೈಕಮಾಂಡ್‌ನ ಕೆ.ಸಿ. ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರಿಗೆ ರಾಜಣ್ಣರನ್ನು ವಜಾ ಮಾಡುವಂತೆ ಸೂಚಿಸಿದ್ದರು. ಇದು ಸಿದ್ದರಾಮಯ್ಯ ಬಣಕ್ಕೆ ಧಕ್ಕೆಯಾಗಿದ್ದು, ಡಿಕೆಶಿ ಬಣ ಬಲಿಷ್ಠಗೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಬಲಿಪಶು ಮಾಡಿದಂತೆಯೇ, ಡಿಕೆಶಿ ಅವರು ಸಿದ್ದರಾಮಯ್ಯ ಆಪ್ತರನ್ನು ಒಬ್ಬೊಬ್ಬರಾಗಿ ತೆಗೆದುಹಾಕುತ್ತಿದ್ದಾರೆ ಎಂಬ ಆರೋಪಗಳಿವೆ. ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಇದು ದೊಡ್ಡ ಷಡ್ಯಂತ್ರ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸ್ಪಷ್ಟಪಡಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | ಸತ್ಯ ಹೇಳಿದ್ದಕ್ಕೆ ರಾಜಣ್ಣ ತಲೆದಂಡ: ಕಾಂಗ್ರೆಸ್ ದಬ್ಬಾಳಿಕೆ ಬಯಲು ಮಾಡಿದ ಬಿಜೆಪಿ
ಈ ಹೇಳಿಕೆಯನ್ನು ನೀಡುವಾಗಲೂಸಹ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು ಅವರ ಜೊತೆ ಇದ್ದರು, ಇದರಿಂದ ಸಿಎಂ ರಾಜಣ್ಣನ ಪರವಾವಾಗಿ ನಿಂತಿರುವದು ಯಾರು ಸ್ಪಷ್ಟವಾಗಿ ಕಂಡು ಬರುತ್ತದೆ. ರಾಜಣ್ಣ ಅವರನ್ನು ಪರಿಶಿಷ್ಟ ಜಾತಿಗಳ ಸಮುದಾಯದ ನಾಯಕರಾಗಿ ದಮನ ಮಾಡುವ ಪ್ರಯತ್ನ ನಡೆದಿದೆ ಎಂದು ವಿರೋಧ ಪಕ್ಷ ದಾಳಿನಡೆಸುತ್ತಿದೆ.
ಡಿಕೆಶಿ ಅವರು ಪ್ರತಿಕ್ರಿಯಿಸಿ, “ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು” ಎಂದು ಹೇಳಿದ್ದಾರೆ. ಈ ಘಟನೆ ಕಾಂಗ್ರೆಸ್‌ನ ಆಂತರಿಕ ಕಲಹವನ್ನು ಬಯಲು ಮಾಡಿದ್ದು, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಅಧಿಕಾರ ಹೋರಾಟವನ್ನು ತೀವ್ರಗೊಳಿಸಿದೆ. ಪಕ್ಷದಲ್ಲಿ ಪರಿಶಿಷ್ಟ ಸಮುದಾಯದ ನಾಯಕತ್ವ ದಮನದ ಆರೋಪಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಇದು ಸಂಪುಟ ಬದಲಾವಣೆಗೆ ಕಾರಣವಾಗಬಹುದು ಎಂಬ ಚರ್ಚೆಗಳಿವೆ.







