ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಹ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪಗಳ ನಡುವೆ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಈ ಸಂಚಿನ ಹಿಂದಿರುವ ವಿದೇಶಿ ಹಣದ ಹರಿವನ್ನು ಜಾರಿ ನಿರ್ದೇಶನಾಲಯ (ಇಡಿ) ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಪತ್ರದ ಮೂಲಕ ರಾಜ್ಯದಲ್ಲಿ ಹರಿದಾಡುತ್ತಿರುವ ವಿವಾದಾತ್ಮಕ ಪ್ರಕರಣಕ್ಕೆ ಹೊಸ ಆಯಾಮ ಸೇರಿದ್ದು, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲಿನ ಆಕ್ರಮಣಗಳ ಬಗ್ಗೆ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ.
ಪ್ರಕರಣದ ಹಿನ್ನೆಲೆ :
ಕಳೆದ ಒಂದು ತಿಂಗಳಿನಿಂದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸುತ್ತಿದೆ. ಅನಾಮಧೇಯ ದೂರುದಾರನೊಬ್ಬನ ಆರೋಪದ ಮೇರೆಗೆ ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಲಾಗಿತ್ತು. ಈ ಆರೋಪದ ಆಧಾರದಲ್ಲಿ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳದ ಆವರಣದಲ್ಲಿ 17ಕ್ಕೂ ಹೆಚ್ಚು ಗುಂಡಿಗಳನ್ನು ತೋಡಿ ಪರಿಶೀಲಿಸಿದ್ದಾರೆ. ಆದರೆ, ದೂರುದಾರನ ಸೂಚನೆಯಂತೆ ಯಾವುದೇ ಶವಗಳು ಸಿಕ್ಕಿಲ್ಲ. ಇದರಿಂದಾಗಿ ಈ ಆರೋಪಗಳು ಸುಳ್ಳು ಎಂಬುದು ಸ್ಪಷ್ಟವಾಗಿದೆ ಎಂದು ಸಂಸದ ಪೂಜಾರಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಿಂದೂಗಳ ಆರಾಧ್ಯ ದೈವ ಬಾಹುಬಲಿ ಪ್ರತಿಮೆಯ ಬುಡಕ್ಕೂ ಜೆಸಿಬಿ ನುಗ್ಗಿಸಿ ಉತ್ಖನನ ಮಾಡಲಾಗಿದ್ದು, ಇದು ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದಿದ್ದಾರೆ..
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವತಃ ಧರ್ಮಸ್ಥಳದ ವಿರುದ್ಧ ಭಾರೀ ಷಡ್ಯಂತ್ರ ನಡೆದಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಎಡಪಂಥೀಯ ಗುಂಪುಗಳ ಒತ್ತಡಕ್ಕೆ ಒಳಗಾಗಿ ಎಸ್‌ಐಟಿ ರಚಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾಮಧೇಯ ಆರೋಪಿಯ ಮಾತುಗಳನ್ನು ನಂಬಿ ತನಿಖಾ ತಂಡ ರಚಿಸಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿವೆ. ಇಡೀ ಸರ್ಕಾರವೇ ಈ ಅನಾಮಧೇಯ ವ್ಯಕ್ತಿಗೆ ಶರಣಾಗಿದೆ ಎಂಬ ಅಭಿಪ್ರಾಯ ಮೂಡಿದೆ.
ಈಗ ಹೊಸ ಬೆಳವಣಿಗೆಯಲ್ಲಿ, ದೂರುದಾರನು ಪೊಲೀಸರ ಮುಂದೆ ತನ್ನ ಹೇಳಿಕೆಯನ್ನು ಬದಲಿಸಿದ್ದಾನೆ. ತನಗೆ ಹಣ ನೀಡಿ ಮತ್ತು ತಲೆಬುರುಡೆ ಕೊಟ್ಟು ಈ ಸುಳ್ಳು ಆರೋಪಗಳನ್ನು ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಅವನು ತಿಳಿಸಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಹಿಂದೆ ಕೆಲವು ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುವವರಿಗೆ ವಿದೇಶಿ ಹಣ ಸಂಗ್ರಹವಾಗುತ್ತಿದೆ ಎಂಬ ಗುಮಾನಿ ಇದೆ. ಈ ಫಂಡಿಂಗ್ ಮೂಲಕ ಧರ್ಮಸ್ಥಳದ ಹೆಸರನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲು ಯತ್ನಿಸಲಾಗುತ್ತಿದೆ ಎಂದು ಸಂಸದ ಪೂಜಾರಿ ಆರೋಪಿಸಿದ್ದಾರೆ.
ಇದನ್ನೂ ಓದಿ | ಧರ್ಮಸ್ಥಳ ಪ್ರಕರಣ: ವೀರೇಂದ್ರ ಹೆಗ್ಗಡೆ ಫಸ್ಟ್ ರಿಯಾಕ್ಷನ್
ಪೂಜಾರಿ ಅವರ ಪತ್ರದಲ್ಲಿ, ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ವಿದೇಶಿ ಹಣದ ಮೂಲಕ ಹಿಂದೂ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸುವ ಈ ಪ್ರವೃತ್ತಿ ದೇಶದ ಆಂತರಿಕ ಭದ್ರತೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರ ಇಡಿ ಮೂಲಕ ತನಿಖೆ ನಡೆಸಿದರೆ, ಈ ಸಂಚಿನ ಸತ್ಯ ಬಯಲಾಗಲಿದೆ ಎಂಬ ನಿರೀಕ್ಷೆ ಇದೆ. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಹಿಂದೂ ಸಂಘಟನೆಗಳು ಕೇಂದ್ರದ ಹಸ್ತಕ್ಷೇಪಕ್ಕೆ ಒತ್ತಾಯಿಸುತ್ತಿವೆ.







