ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ 2025ರ ಗೆಲುವಿನ ಸಂಭ್ರಮದ ಸಂದರ್ಭದಲ್ಲಿ ಜೂನ್ 4ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ನಡೆದ ಕಾಲ್ತುಳಿತದ ದುರಂತವು 11 ಜನರ ಸಾವಿಗೆ ಕಾರಣವಾಗಿತ್ತು ಮತ್ತು 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿತ್ತು. ಈ ಘಟನೆಯ ಮೂರು ತಿಂಗಳ ಬಳಿಕ, ಆರ್ಸಿಬಿ ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಭಾವುಕ ಸಂದೇಶವೊಂದನ್ನು ಆರ್ಸಿಬಿಯ ಅಧಿಕೃತ ಎಕ್ಸ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
ಕೊಹ್ಲಿ ತಮ್ಮ ಸಂದೇಶದಲ್ಲಿ, “ಜೀವನದಲ್ಲಿ ಯಾವುದೇ ಕ್ಷಣವು ಜೂನ್ 4ರ ದುರಂತದಂತಹ ನೋವನ್ನು ಎದುರಿಸಲು ತಯಾರು ಮಾಡಲಾರದು. ಆರ್ಸಿಬಿ ಫ್ರ್ಯಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದ ಕ್ಷಣವಾಗಬೇಕಿದ್ದ ದಿನವು ದುರಂತವಾಗಿ ಬದಲಾಯಿತು. ಈ ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಈ ನೋವು ಇದೀಗ ನಮ್ಮ ಕಥೆಯ ಭಾಗವಾಗಿದೆ. ಇನ್ಮುಂದೆ ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುಂದುವರಿಯೋಣ,” ಎಂದು ಬರೆದಿದ್ದಾರೆ. ಇವರ ನಂತರ ಆರ್ ಸಿಬಿ ನಾಯಕ ರಜತ್ ಪಟಿದಾರ್ ಕೂಡಾ ಪೋಸ್ಟ್ ಮಾಡಿದ್ದಾರೆ.
ಆರ್ಸಿಬಿಯ ಐಪಿಎಲ್ 2025ರ ಗೆಲುವಿನ ಸಂಭ್ರಮಕ್ಕಾಗಿ ಆಯೋಜಿಸಲಾಗಿದ್ದ ವಿಜಯೋತ್ಸವದ ಸಂದರ್ಭದಲ್ಲಿ, ಸುಮಾರು 2.5 ಲಕ್ಷ ಜನರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಸೇರಿದ್ದರು. ಆದರೆ, ಆಯೋಜಕರಿಂದ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಮತ್ತು ಭಾರೀ ಜನಸಂದಣಿಯಿಂದ ಈ ದುರಂತ ಸಂಭವಿಸಿತು. ಈ ಘಟನೆಯ ನಂತರ, ಆರ್ಸಿಬಿ ತಂಡವು ಸಾಮಾಜಿಕ ಜಾಲತಾಣಗಳಲ್ಲಿ ಮೌನವಾಗಿತ್ತು.
ಇದನ್ನೂ ಓದಿ | ಬೆಂಗಳೂರು ಕಾಲ್ತುಳಿತ: ನಿಖಿಲ್ ಸೋಸಲೆ ಸೇರಿ ನಾಲ್ವರಿಗೆ ಷರತ್ತುಬದ್ಧ ಜಾಮೀನು
ಈ ಘಟನೆಯ ಬಗ್ಗೆ ಕೊಹ್ಲಿ ಮಾತನಾಡುವುದು ಇದೇ ಮೊದಲ ಬಾರಿ. ಆರ್ಸಿಬಿಯು ‘ಆರ್ಸಿಬಿ ಕೇರ್ಸ್‘ ಎಂಬ ಉಪಕ್ರಮವನ್ನು ಆರಂಭಿಸಿ, ಸಂತ್ರಸ್ತ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿತು. ಇದರ ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಉತ್ತಮ ಜನಸಂದಣಿ ನಿರ್ವಹಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಕರ್ನಾಟಕ ಸರ್ಕಾರವು ಘಟನೆಯ ತನಿಖೆಗೆ ಆದೇಶಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣವು ದೊಡ್ಡ ಜನಸಂದಣಿಯ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಎಂದು ಜಸ್ಟೀಸ್ ಕುನ್ಹಾ ಆಯೋಗ ತಿಳಿಸಿದೆ.







