ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತದ ತಾಂತ್ರಿಕ ಮಿಷನ್ ಅನ್ನು ಪೂರ್ಣ ಪ್ರಮಾಣದ ರಾಯಭಾರಿ ಕಚೇರಿಯಾಗಿ ಮೇಲ್ದರ್ಜೆಗೇರಿಸುವುದಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇಂದು (ಅಕ್ಟೋಬರ್ 10) ಘೋಷಿಸಿದ್ದಾರೆ.
ಇದು ಭಾರತ-ಅಫ್ಘಾನ್ ಸಂಬಂಧಗಳಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದ್ದು, 2021ರಲ್ಲಿ ತಾಲಿಬಾನ್ ಆಳ್ವಿಕೆ ಮರುಕಳಿಸಿದ ನಂತರ ಮುಚ್ಚಿದ್ದ ರಾಯಭಾರಿ ಕಚೇರಿಯನ್ನು ಮತ್ತೊಮ್ಮೆ ತೆರೆಯುವ ಸೂಚನೆಯಾಗಿದೆ. ಭಾರತವು ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಗುರುತಿಸದಿದ್ದರೂ, ಜನತಾಭಿಮುಖಿ ಸಹಕಾರ ಮತ್ತು ಭದ್ರತಾ ಸಮಸ್ಯೆಗಳ ಮೇಲೆ ಒತ್ತು ನೀಡಿ ಸಂಬಂಧಗಳನ್ನು ಬಲಪಡಿಸುತ್ತಿದೆ.
ಹೊಸದೆಹಲಿಯಲ್ಲಿ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗಿನ ಸಭೆಯಲ್ಲಿ ಜೈಶಂಕರ್ ಮಾತನಾಡಿ, “ಇದನ್ನು ಬಲಪಡಿಸಲು, ಇಂದು ಭಾರತ ಕಾಬೂಲ್‌ನಲ್ಲಿನ ತಾಂತ್ರಿಕ ಮಿಷನ್ ಅನ್ನು ಭಾರತದ ರಾಯಭಾರಿ ಕಚೇರಿಯ ಸ್ಥಾನಮಾನಕ್ಕೆ ಮೇಲ್ದರ್ಜೆಗೇರಿಸುವುದಾಗಿ ಘೋಷಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ | ಟ್ರಂಪ್‌ಗಿಲ್ಲದ ನೊಬೆಲ್, ಮಾರಿಯಾ ಮಚಾಡೊ ಮುಡಿಗೆ
ಈ ಸಭೆಯಲ್ಲಿ ಜೈಶಂಕರ್ ಅಫ್ಘಾನ್ ಸರ್ಕಾರದ ಭಯೋತ್ಪಾದನೆ ವಿರುದ್ಧದ ನಿಲುವನ್ನು ಪ್ರಶಂಸಿಸಿದರು. “ಅಫ್ಘಾನಿಸ್ತಾನದ ಭಯೋತ್ಪಾದನೆಯ ವಿರುದ್ಧದ ಬದ್ಧತೆಯನ್ನು ಭಾರತ ಸ್ವಾಗತಿಸುತ್ತದೆ” ಎಂದು ಹೇಳಿದರು. ಮುತ್ತಕಿ ಅವರೂ ಭಾರತವನ್ನು “ನಿಕಟ ಸ್ನೇಹಿತ” ಎಂದು ಕರೆದು, ಈ ಮೇಲ್ದರ್ಜೆಯನ್ನು ಸ್ವಾಗತಿಸುವುದರು.







