ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಹಾಗೂ ಹರ್ಯಾಣದ ಎಡಿಜಿಪಿ ಪೂರಣ್ ಕುಮಾರ್ ಅವರ ಆತ್ಮಹತ್ಯೆ, ಭಾರತದ ದಲಿತ ಸಮುದಾಯದ ಉನ್ನತ ಹುದ್ದೆಯ ಅಧಿಕಾರಿಗಳು, ಮುಖ್ಯಸ್ಥರು ಅನುಭವಿಸುತ್ತಿರುವ ಜಾತಿ ತಾರತಮ್ಯದ ಘೋರ ಮುಖವನ್ನ ತೆರೆದಿಟ್ಟಿದೆ.
ನ್ಯಾಯಾಂಗದ ಭಾಗವೇ ಆದ ನ್ಯಾಯಮೂರ್ತಿ ಹಾಗೂ ಪೊಲೀಸ್ ಅಧಿಕಾರಿ, ಸಂವಿಧಾನ ವಿರೋಧಿಯಾದ ಜಾತಿ ತಾರತಮ್ಯದ ಸಂಚಿಗೆ ಗುರಿಯಾದ ಈ ಎರಡು ಘಟನೆಗಳು ಉನ್ನತ ಹುದ್ದೆಗಳಿರುವವರೂ ಜಾತಿ ತಾರತಮ್ಯದ ದ್ವೇಷದಿಂದ ಬದುಕುಳಿದಿಲ್ಲ ಎಂಬುದನ್ನು ಸಾಬೀತು ಮಾಡಿ ಬಿಟ್ಟವು.
ವಿದ್ಯೆ, ಸಾಂವಿಧಾನ ಮೌಲ್ಯಗಳ ತಿಳಿವಳಿಕೆ ಕೇವಲ ಹುದ್ದೆಯ ಸೌಲಭ್ಯಗಳು ಮತ್ತು ಅಧಿಕಾರ ದರ್ಪಕ್ಕೆ ಸೀಮಿತವಾಗಿ, ಜಾತೀಯತೆ ಅಧಿಕಾರ ವರ್ಗದಲ್ಲಿ ಯಾವ ರೀತಿಯಲ್ಲಿ ಜೀವಂತವಾಗಿದೆ ಎಂಬ ಕರಾಳ ಸತ್ಯವನ್ನು ಎರಡೂ ವಿದ್ಯಮಾನಗಳು ಬಯಲು ಮಾಡಿವೆ.
ಅಂಬೇಡ್ಕರ್‌ರವರು ದಲಿತ ಹಾಗೂ ಯಾವುದೇ ಶೋಷಿತ ಸಮುದಾಯ ಶಿಕ್ಷಿತರಾಗಬೇಕು, ಸಂಘಟಿತರಾಗಬೇಕು ಎಂಬ ಸಾರ್ವಕಾಲಿಕ ಕರೆ ನೀಡಿದ್ದರು. ಶಿಕ್ಷಣ ಶೋಷಿತ ಸಮುದಾಯಗಳಿಗೆ ಅವಕಾಶವನ್ನು ಕೊಟ್ಟಿತು, ಆತ್ಮವಿಶ್ವಾಸವನ್ನು ನೀಡಿತು. ಆದರೆ ಶೋಷಕ ಸಮಾಜಗಳಲ್ಲಿ ಬದಲಾವಣೆಯನ್ನು ತರಲಿಲ್ಲ. ಜಾತಿ ದ್ವೇಷ, ಜಾತಿನಿಂದನೆಗಳಿಂದ ಕಾಪಾಡಲಿಲ್ಲ ಎಂಬುದೇ ವಿಪರ್ಯಾಸ.
ಆ ಘಟನೆಗಳು.. ಆರದ ಗಾಯಗಳು…
ಸೋಮವಾರ (ಅಕ್ಟೋಬರ್ 6), ಬೆಳಗ್ಗೆ ಕೋರ್ಟ್ ನಂ 1 ರಲ್ಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ವಿಚಾರಣೆ ನಡೆಸುತ್ತಿದ್ದಾಗ ನ್ಯಾಯವಾದಿ ರಾಕೇಶ್ ಕಿಶೋರ್, ‘ಸನಾತನ ಧರ್ಮಕ್ಕೆ ಮಾಡುವ ಅವಮಾನವನ್ನು ನಾವು ಸಹಿಸುವುದಿಲ್ಲ’ ಎಂದು ಕೂಗುತ್ತಾ, ಶೂವೊಂದನ್ನು ಗುರಿಯಾಗಿಸಿಕೊಂಡು ಎಸೆದರು.
ದಲಿತ ಸಮುದಾಯದಿಂದ ಬಂದ ಗವಾಯಿ, ಬೌದ್ಧ ಧರ್ಮದ ಅನುಯಾಯಿಗಳು. ಅವರು ಪ್ರಕರಣವೊಂದರ ವಿಚಾರಣೆಯ ವೇಳೆ ಹೇಳಿದ್ದಾರೆ ಎನ್ನಲಾದ ಮಾತುಗಳನ್ನು, ‘ಹಿಂದು ಧರ್ಮಕ್ಕೆ ಮಾಡಿದ ಅಪಮಾನ’ ಎಂದು ಭಾವಿಸಿದ ಹಿರಿಯ ನ್ಯಾಯವಾದಿ ತಮ್ಮ ಅಸಮಾಧಾನವನ್ನು ಶೂ ಎಸೆದು ಹೊರಹಾಕಿದ್ದರು.
ಸ್ವತಃ ಕಾನೂನು ವಿದ್ಯಾರ್ಥಿಯಾಗಿದ್ದು, ದಶಕಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ ರಾಕೇಶ್ ಕಿಶೋರ್ ನ್ಯಾಯ ಸ್ಥಾನದ ಗೌರವ, ಅಭಿಪ್ರಾಯ ಬೇದವನ್ನು ಗೌರವಿಸಬೇಕು ಎನ್ನುವ ಸಂವಿಧಾನದ ಮೌಲ್ಯವನ್ನು ಗಾಳಿಗೆ ದೂರಿ ವ್ಯಕ್ತಿಗತವಾದ ಧರ್ಮ ಪ್ರೇಮವನ್ನು ದ್ವೇಷವನ್ನಾಗಿ ಹೊರಹಾಕಿದ್ದು ನಿಜಕ್ಕೂ ಅಲುಗಾಡಿಸಿತು.
ಮಾರನೆಯ ದಿನ ಅಂದರೆ ಮಂಗಳವಾರ ( ಅಕ್ಟೋಬರ್ 7), ಹರ್ಯಾಣದಲ್ಲಿ ನಡೆದ ಇನ್ನೊಂದು ಘಟನೆ ಬೆಚ್ಚಿ ಬೀಳಿಸುವಂತಹದ್ದೇ. ಹರ್ಯಾಣದ 2001ರ ಬ್ಯಾಚ್‌ನ ಐಪಿಎಸ್ ಅಧಿಕಾರಿ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ವೈ ಪುರನ್‌ಕುಮಾರ್ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣರಾದರು. ಅತ್ತ ಗವಾಯಿ ಕೇವಲ ಉಗ್ರ ಜಾತಿವಾದಿಯ ಕೋಪಕ್ಕೆ ಗುರಿಯಾದರು. ಆದರೆ ಇಲ್ಲಿ ಸ್ವತಃ ಜಾತಿ ದ್ವೇಷ ಹಾಗೂ ಅವಮಾನಗಳಿಂದ ಪುರನ್ ಕುಮಾರ್ ಜೀವವನ್ನೇ ತೊರೆದಿದ್ದರು!
ಆತ್ಮಹತ್ಯೆ ಮಾಡಿಕೊಂಡು ಪುರನ್ ಕುಮಾರ್, ದಲಿತ ಸಮುದಾಯದವರು, ಅವರಿಗೆ ಕೇವಲ 52 ವರ್ಷ. ತಾವು ಬರೆದ ಎಂಟು ಪುಟಗಳ ಪತ್ರದಲ್ಲಿ ಐಜಿ ಶತ್ರುಜೀತ್ ಸಿಂಗ್ ಕಪೂರ್ ಮತ್ತು ರೋಹ್ಟಕ್ ಎಸ್‌ಪಿ ನರೇಂದ್ರ ಬಿಜಾರ್ನಿಯಾ ಸೇರಿದಂತೆ 10ಕ್ಕೂ ಹೆಚ್ಚು ಅಧಿಕಾರಿಗಳು ಜಾತಿ ಕಾರಣಕ್ಕೆ ನೀಡುತ್ತಿದ್ದ ಮಾನಸಿಕ ಕಿರುಕುಳ, ಜಾತಿ ತಾರತಮ್ಯ ನಿಲುವಿನ ಬಗ್ಗೆ ತಮ್ಮ ನೋವನ್ನು ಹೊರಹಾಕಿದ್ದಾರೆ.
ಈ ಕಿರುಕುಳ ಕೇವಲ ವೃತ್ತಿಯ ಒತ್ತಡವಲ್ಲ; ಇದು ಅನಾದಿಕಾಲದಿಂದಲೂ ದಲಿತರ ಮೇಲೆ ನಡೆಸಿಕೊಂಡು ಬಂದಿರುವ ದಬ್ಬಾಳಿಕೆ. ಅಧಿಕಾರಶಾಹಿ ವ್ಯವಸ್ಥೆ ಜಾತಿರಹಿತವಾಗಿದೆ ಎಂಬ ಭ್ರಮೆಯೊಂದು ಸಮಾಜದಲ್ಲಿತ್ತು. ಅದನ್ನು ಪುರನ್ ಕುಮಾರ್ ಅವರ ಆತ್ಮಹತ್ಯೆ ಒಡೆದುಹಾಕಿತು. ಭಾರತದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಆಳವಾಗಿ ಹರಡಿರುವ ವಿಷಕ್ಕೆ ಸಾಕ್ಷಿ.
ಅಂಬೇಡ್ಕರ್‌ರವರು ಇಂತಹ ಸನ್ನಿವೇಶವನ್ನು ನಿರೀಕ್ಷಿಸಿದ್ದರು ಎಂಬುದಕ್ಕೆ, ಅವರ ‘ಸ್ಟೇಟ್ಸ್ ಅಂಡ್ ಮೈನಾರಿಟಿಸ್’ ಕೃತಿಯಲ್ಲಿ ಉಲ್ಲೇಖಿಸಿರುವ ಅಂಶಗಳೇ ನಿದರ್ಶನ. ರಚನಾತ್ಮಕ ಬದಲಾವಣೆಗಳನ್ನು ತರದೇ ಹೋದಲ್ಲಿ, ಸ್ವಾತಂತ್ಯ್ರಾನಂತರದಲ್ಲಿ ಅಧಿಕಾರಿಶಾಹಿ ವ್ಯವಸ್ಥೆಯಲ್ಲಿ ಜಾತಿ ಆಧರಿತ ದ್ವೇಷದ ವಾತಾವರಣ ಸೃಷ್ಟಿಯಾಗಬಹುದು ಎಂದು ಎಚ್ಚರಿಸಿದ್ದರು. ಪುರನ್ ಕುಮಾರ್ ಎದುರಿಸಿಬೇಕಾಗಿ ಬಂದಿದ್ದು ಅಂತಹದ್ದೇ ಜಾತಿ ದ್ವೇಷವನ್ನು ಎಂಬುದು ಈಗ ಮನವರಿಕೆಯಾಗುತ್ತಿದೆ.
ಕ್ಯಾಥ್ರಿನ್ ಡೋನರ್ 2022ರಲ್ಲಿ ಭಾರತೀಯ ಅಧಿಕಾರಶಾಹಿಯಲ್ಲಿ ಜಾತಿ ಕುರಿತು ನಡೆಸಿದ ಸಂಶೋಧನೆಯ ಬೆಚ್ಚಿಬೀಳಿಸುವ ಸತ್ಯವನ್ನುಹೊರಹಾಕಿತ್ತು. ಸೆಕ್ರೆಟರಿ ಹಂತದ ಹುದ್ದೆಗಳಲ್ಲಿ ಕೇವಲ 1.1%ರಷ್ಟು ಎಸ್‌ಸಿಗಳಿದ್ದು, 3.37%ನಷ್ಟು ಎಸ್‌ಟಿಗಳಿದ್ದಾರೆ. ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯವೇ ಇಲ್ಲ. ಇಂತಹ ಅಧಿಕಾರಿ ವ್ಯವಸ್ಥೆಯಲ್ಲಿ ಒಬ್ಬ ಗವಾಯಿ, ಒಬ್ಬ ಪುರನ್ ಕುಮಾರ್ ಅಡ್ಡಿಗಳನ್ನು ದಾಟಿ ಉನ್ನತ ಸ್ಥಾನ ಅಲಂಕರಿಸಿದರೆ ಅವರು ಎದುರಿಸುವ ದ್ವೇಷವನ್ನು ನಾವು ಊಹೆ ಮಾಡಿಕೊಳ್ಳುವುದಕ್ಕೂ ಆಗದು.
ದಲಿತರನ್ನು ಕೊಲ್ಲಬಹುದು!
ಇಲ್ಲಿಯವರೆಗೆ ದಲಿತರ ಮೇಲೆ ದಾಳಿ, ದಲಿತರ ಹುಡುಗ ಅಥವಾ ಹುಡುಗಿಯ ಹತ್ಯೆಯ ಪ್ರಕರಣಗಳನ್ನ ಕೇಳುತ್ತಲೇ ಬಂದಿದ್ದೇವೆ. ಹಾತ್ರಾಸ್, ಉನ್ನಾವ್‌ದ ಘಟನೆಗಳು ದಲಿತ ಸಮುದಾಯಗಳ ಮೇಲೆ ನಡೆದ ದಾಳಿಗಳು ದೇಶದಲ್ಲಿ ದಲಿತರಿಗೆ ಇರುವ ಸ್ಥಾನಮಾನಗಳಿಗೆ ಸಾಕ್ಷಿ ಹೇಳಿದವು. ಕುದುರೆ ಏರಿದ ದಲಿತ ಯುವಕನ ಹತ್ಯೆ, ಮೀಸೆ ಬಿಟ್ಟ ಯುವಕರ ಕೊಲೆ ಘಟನೆಗಳೆಲ್ಲವೂ ಸಾಮಾನ್ಯ, ಅಸಹಾಯಕ, ಯಾವುದೇ ಸಾಮಾಜಿಕ ಸ್ಥಾನಗಳನ್ನು ಹೊಂದಿರದ ದಲಿತರು ಎದುರಿಸಿದ ಘೋರ, ಕ್ರೂರ ಸಂದರ್ಭಗಳು. ಮೇಲ್ಜಾತಿಯ ದರ್ಪ, ಅಧಿಕಾರದ ಅಹಂಕಾರಗಳನ್ನು ಅಸಹಾಯಕ ಜೀವಗಳ ಮೇಲೆ ತೋರುತ್ತಿದ್ದ ಈ ಸಂದರ್ಭಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇರುವುದು, ಸಂವಿಧಾನದ ಮೇಲೆ, ಅದನ್ನು ನಂಬಿದವರ ಮೇಲೆ ನಡೆಸಿದ ಸಂಚಿನ ದಾಳಿ ಎಂದೇ ನೋಡಬೇಕು.

ಐಐಟಿಯಂತಹ ಉನ್ನತ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಪ್ರಯತ್ನಿಸಿ, ಜೀವ ಕಳೆದುಕೊಂಡ ದಲಿತ ಸಮುದಾಯಗಳ ಯುವಕರದ್ದು ಇನ್ನೊಂದು ಕತೆ. ಇಂತಹವರ ಪೈಕಿ ತನ್ನ ನೋವನ್ನು ಅಕ್ಷರದಲ್ಲಿ ಉಳಿಸಿದ ರೋಹಿತ್ ವೇಮುಲು ಶಿಕ್ಷಣದ ಮೂಲಕ ಭವ್ಯ ಭವಿಷ್ಯ ರೂಪಿಸಿಕೊಳ್ಳುವ ಆಕಾಂಕ್ಷೆಯುಳ್ಳ ಶೋಷಿತ ಸಮುದಾಯ ಯುವಕರ ದುರಂತಗಾಥೆಯನ್ನು ಇಂದಿಗೂ ಪ್ರತಿಧ್ವನಿಸುತ್ತದೆ. ಈಗ ದಲಿತ ದ್ವೇಷ ಅಸಹಾಯಕ, ಆಕಾಂಕ್ಷಿಗಳಿಂದ, ಅಧಿಕಾರ ವರ್ಗದಲ್ಲಿ ಉನ್ನತ ಸ್ಥಾನದಲ್ಲಿರುವ ಶೋಷಿತರನ್ನು ಗುರಿಯಾಗಿಸಿದೆ.
ಇದನ್ನೂ ಓದಿ | ಋತುಚಕ್ರ ರಜೆ: ಮಹಿಳೆಯರ ದೈಹಿಕ, ಮಾನಸಿಕ ಆರೋಗ್ಯಕ್ಕೆ ರಕ್ಷಣೆ ?
ಜಾತಿ, ಧರ್ಮದ ಹೆಸರಿನಲ್ಲಿ ಒಡೆದಿರುವ ಸಮಾಜ ಹಾಗೂ ಇಂತಹ ಸನ್ನಿವೇಶವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ರಾಜಕಾರಣಿಗಳು ಪರೋಕ್ಷವಾಗಿ ಇಂತಹ ಘಟನೆಗಳಿಗೆ ಕಾರಣವಾದ ಶಕ್ತಿಗಳು. ಈ ಶಕ್ತಿಯನ್ನು ದುರ್ಬಲಗೊಳಿಸುವುದು ಹೇಗೆ? ಬಿ.ಆರ್. ಅಂಬೇಡ್ಕರ್‌ರವರು ಜಾತಿ, ರಾಕ್ಷಸ ರೂಪದಲ್ಲಿ ನಮ್ಮೆದುರು ನಿಲ್ಲುತ್ತದೆ ಎಂದಿದ್ದರು. ಈ ರಾಕ್ಷಸನನ್ನು ಕೊಂದರೆ, ರಾಜಕೀಯ, ಸಾಮಾಜಿಕ, ಆರ್ಥಿಕ ಸುಧಾರಣೆ ಸಾಧ್ಯ ಎಂದಿದ್ದರು. ಆದರೆ ರಾಕ್ಷಸನನ್ನು ಕೊಲ್ಲುವುದು ಸಾಧ್ಯವೆ?







