ನಗರದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಖೈದಿಗಳಿಗೆ ನೀಡಲಾಗುತ್ತಿರುವ ರಾಜಾತಿಥ್ಯವನ್ನು ಖಂಡಿಸಿ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ರೇಸ್ ಕೋರ್ಸ್ ರಸ್ತೆ ಬಳಿಯಲ್ಲಿ ತಡೆಯಲು ಯತ್ನಿಸಿ, ಕೆಲವರನ್ನು ವಶಕ್ಕೆ ಪಡೆದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಎಂಎಲ್‌ಸಿ ಸಿ.ಟಿ. ರವಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವಥ್ ನಾರಾಯಣ, ಜಿಲ್ಲಾ ಉಸ್ತುವಾರಿ ಎಸ್. ಹರೀಶ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.
ಘಟನೆಯ ಹಿನ್ನೆಲೆ:
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋಗಳು ಜೈಲಿನೊಳಗಿನ ಐಷಾರಾಮಿ ಜೀವನವನ್ನು ಬಹಿರಂಗಪಡಿಸಿವೆ. ಲಷ್ಕರ್-ಎ-ತೈಬಾ ಉಗ್ರ, ಐಎಸ್‌ಐಎಸ್ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿದ್ದ ಜಿಹಾದ್ ಹಮೀದ್ ಶಕೀಲ್ ಮನ್ನಾನ್, ವಿಕೃತ ಕಾಮಿ ಉಮೇಶ್ ರೆಡ್ಡಿ ಸೇರಿದಂತೆ ಭಯೋತ್ಪಾದಕರು ಮತ್ತು ಗಂಭೀರ ಅಪರಾಧಿಗಳು ಜೈಲಿನಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಾ, ಬಿರಿಯಾನಿ, ಗಾಂಜಾ, ಸಿಗರೇಟ್‌ಗಳೊಂದಿಗೆ ಪಾರ್ಟಿಗಳನ್ನು ನಡೆಸುತ್ತಿರುವುದು ಚಿತ್ರಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಜೈಲುಗಳು ‘ಪಂಚತಾರಾ ರೆಸಾರ್ಟ್‌ಗಳು’ ಆಗಿವೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ವಿಡಿಯೋಗಳು ವೈರಲ್ ಆದ ಬಳಿಕ ರಾಜ್ಯಾದ್ಯಂತ ಚರ್ಚೆಗೆ ಗುರಿಯಾಗಿದ್ದು, ಕಾಂಗ್ರೆಸ್ ಸರ್ಕಾರದ ಕಾನೂನು ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಪರಪ್ಪನ ಅಗ್ರಹಾರ ಜೈಲು ಒಂದು ರೀತಿ ನೈಟ್ ಕ್ಲಬ್ ಆಗಿದೆ. ಭಯೋತ್ಪಾದಕರು, ಐಎಸ್‌ಐಎಸ್ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳು ಇಲ್ಲಿ ಐಷಾರಾಮಿ ವ್ಯವಸ್ಥೆ ಪಡೆಯುತ್ತಿದ್ದಾರೆ. ಇದು ನಾಚಿಕೆಗೇಡಿನ ಕ್ರಮ. ಜೈಲು ಸಿಬ್ಬಂದಿ, ಅಧಿಕಾರಿಗಳನ್ನು ತಕ್ಷಣ ಬಂಧಿಸಿ, ದೇಶ ದ್ರೋಹಿ ಪ್ರಕರಣ ದಾಖಲಿಸಿ ಎನ್‌ಐಎ ತನಿಖೆಗೆ ನೀಡಬೇಕು” ಎಂದು ಒತ್ತಾಯಿಸಿದರು. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿ, “ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ರಾಹುಲ್ ಗಾಂಧಿ ಈಗ ಭಯೋತ್ಪಾದಕರಿಗೆ ಅವಕಾಶ ನೀಡುತ್ತಿದ್ದಾರೆಯೇ? ಇದು ದೇಶಾದ್ಯಂತ ಅಶಾಂತಿ ಸೃಷ್ಟಿಸುವ ಷಡ್ಯಂತ್ರವೇ?” ಎಂದು ಪ್ರಶ್ನಿಸಿದರು. ಜೈಲುಗಳನ್ನು ‘ಉಗ್ರರ ರೆಸಾರ್ಟ್’ ಆಗಿ ಪರಿವರ್ತಿಸಿರುವುದಕ್ಕೆ ಸರ್ಕಾರವನ್ನು ತೀವ್ರವಾಗಿ ಖಂಡಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಜೈಲುಗಳು ಭಯೋತ್ಪಾದಕರಿಗೆ ಸ್ವರ್ಗವಾಗಿವೆ. ಸಮಾಜ ಘಾತಕ ಶಕ್ತಿಗಳಿಗೆ ಪಂಚತಾರಾ ಹೋಟೆಲ್ ಸೌಲಭ್ಯ ನೀಡಲಾಗಿದೆ. ನಟ ದರ್ಶನ್ ಸಿಗರೇಟ್ ಸೇದಿದ್ದಕ್ಕೆ ಬೇಲು ರದ್ದು ಮಾಡಿದರೆ, ಭಯೋತ್ಪಾದಕರಿಗೆ ಮೊಬೈಲ್, ಬಿರಿಯಾನಿ, ಗಾಂಜಾ ನೀಡುವುದು ಏಕೆ? ಇದು ಕಾಂಗ್ರೆಸ್‌ನ ‘ಬಿಟ್ಟಿ ಗ್ಯಾರಂಟಿ’!” ಎಂದು ವ್ಯಂಗ್ಯವಾಡಿದರು. ಜೈಲಿಗೆ ಹೋದರೆ ‘ರಾಜ್ಯಾತೀಥ್ಯ ಫ್ರೀ’ ಎಂದು ಹರಿಹಾಯ್ದ ಅಶೋಕ್, ಸರ್ಕಾರದ ಆಡಳಿತ ಹದಗೆಟ್ಟಿದೆ ಎಂದು ಆರೋಪಿಸಿದರು.
ಇದನ್ನೂ ಓದಿ | “20 ವರ್ಷಗಳ ದುರಾಡಳಿತಕ್ಕೆ ಮುಕ್ತಿ ದೊರೆಯುತ್ತದೆ” : ಖರ್ಗೆ
ಈ ಪ್ರಕರಣಕ್ಕೆ ಬಿಜೆಪಿ ಮಾತ್ರವಲ್ಲ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯೂ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಪರಪ್ಪನ ಅಗ್ರಹಾರಕ್ಕೆ ಸೀಮಿತವಲ್ಲ, ವಿಧಾನಸೌಧದೊಳಗೂ ಇನ್ನಷ್ಟು ಅಪಾಯಕಾರಿ ಉಗ್ರರು ಇದ್ದಾರೆ” ಎಂದು ಹರಿಹಾಯ್ದ ಕುಮಾರಸ್ವಾಮಿ, ಈ ವಿಷಯವನ್ನು ವಿಧಾನಸಭೆಯಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿದರು.
ಪ್ರಕರಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು . “ಭಯೋತ್ಪಾದಕರಿಗಲ್ಲ, ಯಾರಿಗೂ ಜೈಲಿನಲ್ಲಿ ಮೊಬೈಲ್ ಅಥವಾ ಇತರ ಸೌಲಭ್ಯಗಳು ಸಿಗುವಂತಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಕರೆದು ತನಿಖೆಗೆ ಆದೇಶ ನೀಡಿದ್ದೇನೆ” ಎಂದು ಹೇಳಿದ್ದಾರೆ. ಆದರೂ, ಈ ಪ್ರಕರಣ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಿದ್ದು ಜೈಲು ಸುಧಾರಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜನಸಾಮಾನ್ಯರಿಂದ ಒತ್ತಡ ಬರುತ್ತಿದೆ.







