‘ತಿಥಿ’ ಚಿತ್ರದ ಮೂಲಕ ಮನೆಮಾತಾದ ಗಡ್ಡಪ್ಪ ಅವರ ನಿಜ ಹೆಸರು ಚನ್ನೇಗೌಡ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ನಿಧನರಾದರು. ಕನ್ನಡ ಚಿತ್ರರಂಗಕ್ಕೆ ‘ತಿಥಿ’ ಚಿತ್ರ ಒಂದು ವಿಸ್ಮಯವಾದರೆ, ಗಡ್ಡಪ್ಪ ಅವರೂ ಒಂದು ವಿಸ್ಮಯವೇ. ಈ ಚಿತ್ರಕ್ಕೆ ಕತೆ-ಚಿತ್ರಕತೆ ಬರೆದ ಈರೇಗೌಡ ಗಡ್ಡಪ್ಪ ಅವರ ಸೋದರಳಿಯ. ಸಮಾಚಾರ.ಕಾಂ ನೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಮಂಡ್ಯ ತಾಲೂಕಿನ ನೊದೆಕೊಪ್ಪಲು ವಾಸಿಯಾದ ಚನ್ನೇಗೌಡರು, ನಮ್ಮೆಲ್ಲರಿಗೂ ಗಡ್ಡಪ್ಪ ಎಂದೇ ಪರಿಚಯ. ರಾಮ್ ರೆಡ್ಡಿನಿರ್ದೇಶನದ ‘ತಿಥಿ’ ಚಿತ್ರದ ಮೂಲಕ ಪರಿಚಿತರಾದ ಚನ್ನೇಗೌಡ, ತಮ್ಮ 78ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿದವರು. ಅಲ್ಲಿಯವರೆಗೆ ನಟನೆಯ ಕನಸೂ ಕಂಡವಲ್ಲ.
ತನ್ನ ಕತೆ ಹಾಗೂ ನಿರ್ಮಾಣದಲ್ಲಿ ನೈಜತೆಯ ಕಾರಣಕ್ಕೆ ‘ತಿಥಿ’ 11 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಈ ಕಾರಣಕ್ಕೆ ಗಡ್ಡಪ್ಪ ಅಪಾರ ಜನಪ್ರಿಯತೆಯನ್ನೂ ಪಡೆದುಕೊಂಡರು.

ನೈಜತೆ ಮತ್ತು ಸಹಜತೆ ಇದ್ದ ಗಡ್ಡಪ್ಪ ಅವರ ನಟನೆ, ಮತ್ತು ಅವರ ಗ್ರಾಮೀಣ ಸೊಗಡಿನ ವ್ಯಕ್ತಿತ್ವ ಚಿತ್ರಕ್ಕೆ ಜೀವ ತುಂಬಿತ್ತು. ಈ ಕಾರಣಗಳಿಗೆ ತಿಥಿ ಚಿತ್ರದ ನಂತರ ತಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿದಂತೆ 8 ಚಿತ್ರಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡರು.
ಮಂಡ್ಯ-ಪಾಂಡವಪುರ ರಸ್ತೆಯಲ್ಲಿ ಪುಟ್ಟದೊಂದು ಮನೆ ಕಟ್ಟಿಕೊಂಡು, ಒಂದೂವರೆ ಎಕರೆ ಜಾಗದಲ್ಲಿ ಕೃಷಿಯನ್ನು ಮಾಡಿಕೊಂಡು ಬದುಕಿದ ಗಡ್ಡಪ್ಪ, ಅಭಿನಯದಿಂದ ಹೆಚ್ಚೇನು ಗಳಿಸಿದ ಗಡ್ಡಪ್ಪ, ಅಪಾರ ಪ್ರೀತಿಯನ್ನು ಸಂಪಾದಿಸಿದ್ದರು ಎಂದು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.
ನಿಧನಕ್ಕೆ ಸಂತಾಪ ಸೂಚಿಸಿ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಪೋಸ್ಟ್ ಬರೆದಿರುವ ತಿಥಿ ಚಿತ್ರದ ನಿರ್ದೇಶಕ ರಾಮ್ ರೆಡ್ಡಿ, ” ನಾನುಭೇಟಿಯಾದ ಅಪರೂಪದ ಆತ್ಮಗಳಲ್ಲಿ ಒಬ್ಬರನ್ನು ಕಳೆದುಕೊಂಡು ತೀವ್ರವಾಗಿ ದುಃಖಿತನಾಗಿದ್ದೇನೆ. ಈ ಗಳಿಗೆ ಎಂದಿಗೂ ಬರಬಾರದು ಎಂದು ಬಯಸಿದ್ದೆ. ಇವರ ಕಣ್ಣುಗಳಲ್ಲಿನ ಮಿನುಗು, ಇವರ ನಗುವಿನ ಆಳ, ಇವರ ಹೆಜ್ಜೆಗಳಲ್ಲಿನ ಚೈತನ್ಯ, ಇವರ ಸೌಂದರ್ಯ ಮತ್ತು ನನ್ನ ಬದುಕಿನಲ್ಲಿ ಅತ್ಯುಂತ ಮಹತ್ವದ ಮತ್ತು ಶ್ರೀಮಂತ ಪಾತ್ರವನ್ನುನಿರ್ವಹಿಸಿದ ವ್ಯಕ್ತಿ ಇವರು. ನಾನು ಭೇಟಿಯಾದ ಮೊದಲ ದಿನದಿಂದಲೂ ನನಗೆ ಸ್ಫೂರ್ತಿಯಾಗಿದ್ದವರು. ಕೆಲವೇ ಕೆಲವು ವ್ಯಕ್ತಿಗಳು ನಮ್ಮ ಬದುಕಿನಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಅವರೊಂದಿಗೆ ನಾವು ಬದುಕಿನ ಅನುಭವಗಳನ್ನು ಹಂಚಿಕೊಳ್ಳುತ್ತೇವೆ. ಚನ್ನೇಗೌಡ ಅಂತಹ ಪಟ್ಟಿಯಲ್ಲಿ ಅಗ್ರಗಣ್ಯರು. ತನ್ನ ಸುತ್ತು ಇರುವವರೆಲ್ಲರನ್ನು ಕಾಳಜಿಯಿಂದ ನೋಡುವ, ಯಾವಾಗಲೂ ಸಿದ್ದರಿರುವ, ಶುದ್ಧ ಮನಸ್ಸಿನ ಇವರು ನನ್ನ ಹೃದಯ ತುಂಬಿದವರು. ಇವರನ್ನು ಮೊದಲು ಭೇಟಿಯಾದ ಮತ್ತು ಜೊತೆಗೆ ಚಹಾ ಕುಡಿದ ನೆನಪು ಎಂದಿಗೂ ಮಾಸುವುದಿಲ್ಲ” ಎಂದು ತಮ್ಮ ನೆನಪು ಮತ್ತು ಪ್ರೀತಿಯನ್ನು ದಾಖಲಿಸಿದ್ದಾರೆ.
ಚನ್ನೇಗೌಡ ಅವರು ಗಡ್ಡಪ್ಪನಾಗಿ, ತಿಥಿ ಚಿತ್ರದಲ್ಲಿ ನಟಿಸಲು ಕಾರಣ, ಈರೇಗೌಡ. ಸೋದರ ಸಂಬಂಧಿಯಾದ ಈರೇಗೌಡ ಅವರು, ತಮ್ಮ ಮಾವನ ಅಗಲಿಕೆಯನ್ನು, ಪ್ರೀತಿಯ ಮಾವ, ನನ್ನ ಬಾಲ್ಯದ ಕುತೂಹಲ, ವಿಸ್ಮಯ ಮತ್ತು ಸ್ಫೂರ್ತಿಯ ಮೂಲ ನೀವು, ನಿಮ್ಮ ಸರಳತೆ, ಸ್ವಾಭಿಮಾನ ಮತ್ತು ಯಾವ ಸಂದರ್ಭದಲ್ಲೂ ದೃತಿಗೆಡದೆ ನೀವು ಬದುಕಿದ ರೀತಿ, ನಿಮ್ಮ ಜೀವನ ನನಗೆ ಸದಾ ಮಾರ್ಗದರ್ಶನವಾಗಿದೆ. ನಿಮ್ಮೊಂದಿಗಿನ ಒಡನಾಟ ಅವಿಸ್ಮರಣೀಯ, ನಮ್ಮ ಮೊದಲ ಸಿನಿಮಾ ಪ್ರಯಾಣದಲ್ಲಿ ನಿಮ್ಮ ಅಮೂಲ್ಯ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ನಿಮ್ಮ ಸ್ಮರಣೆ ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಭಾವ ಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ.
ಗಡ್ಡಪ್ಪ ಅವರ ಅಗಲಿಕೆಗೆ ಅಪಾರ ಅಭಿಮಾನಿ ಬಳಗ ಹಾಗೂ ಚಿತ್ರರಂಗ ಕಂಬಿನಿ ಮಿಡಿದಿದೆ.







