ಮೊನ್ನೆ ಆರಂಭವಾದ ಚಳಿಗಾಲದ ಸಂಸತ್ ಅಧಿವೇಶದನಲ್ಲಿ ರಾಜ್ಯಸಭೆಯ ಸದಸ್ಯ ಎಚ್.ಡಿ. ದೇವೇಗೌಡರರು ನೂತನ ಸಭಾಪತಿಗೆ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಿ, ಹಿಂದಿನ ಸಭಾಪತಿ ಜಗದೀಪ್ ಧನಕರ್ ಅವರಿಗೆ ಬೀಳ್ಕೊಡುಗೆ ನೀಡುವ ಸಂಪ್ರದಾಯವನ್ನು ನಿರ್ಲಕ್ಷಿಸಿದರು. ಈ ನಡೆ ಸದನದ ‘ಸತ್ ಸಂಪ್ರದಾಯ’ದ ಬಗ್ಗೆ ಅವರೇ ನೀಡಿದ ಕರೆಗೆ ವಿರುದ್ಧವಾಗಿತ್ತು. ಪ್ರಧಾನಿ ಮೋದಿ ಸಂಸತ್ತನ್ನು ‘ನಾಟಕದ ವೇದಿಕೆ’ಯಲ್ಲ ಎಂದು ಟೀಕಿಸಿದಾಗಲೂ ದೇವೇಗೌಡರು ಮೌನ ವಹಿಸಿದ್ದರು.
ಬೆಳ್ಳಿ ಹಬ್ಬದ ಈ ಹೊಸ್ತಿಲಿನಲ್ಲಿ, ಜೆಡಿಎಸ್ ನಡಿಗೆ ಸೈದ್ಧಾಂತಿಕ ಅಸ್ಪಷ್ಟತೆ ಮತ್ತು ಅಧಿಕಾರದ ಮೇಲಿನ ಹಿತಾಸಕ್ತಿಗೆ ಪೆಟ್ಟುಬೀಳುವುದನ್ನು ಎತ್ತಿ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ, ಅದರ ನಡಿಗೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲದೆ ಉಳಿದಿದೆ.
ಜೆಡಿಎಸ್‌ನ ಬೇರುಗಳು ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣರ ಸಮಾಜವಾದಿ ಮತ್ತು ಜಾತ್ಯತೀತ ವಿಚಾರಧಾರೆಯನ್ನು ಪ್ರತಿಪಾದಿಸಿದ ಜನತಾ ಪರಿವಾರದಲ್ಲಿದೆ. ದೇಶದ ಬೇರಾವ ಪ್ರಾದೇಶಿಕ ಪಕ್ಷವೂ ತನ್ನ ಹೆಸರಿನಲ್ಲಿ ಇಬ್ಬಿಬ್ಬರು ರಾಷ್ಟ್ರೀಯ ನಾಯಕರ ಹೆಸರು ಮತ್ತು ಸಿದ್ದಾಂತವನ್ನು ಹೊಂದಿಲ್ಲ. ಆ ಎರಡೆರೆಡು ಹೆಸರುಗಳನ್ನು ಹೊಂದಿಯೂ ಜೆಡಿಎಸ್ ಆ ಆಶಯದ ದಿಕ್ಕಿನಲ್ಲಿ ಸಾಗುತ್ತಿಲ್ಲ. 1999ರಲ್ಲಿ ಜನತಾ ದಳದ ವಿಭಜನೆಯ ನಂತರ ಅಸ್ತಿತ್ವಕ್ಕೆ ಬಂದ ಈ ಪಕ್ಷವು ಜಾತ್ಯತೀತತೆ, ಸಮಾಜವಾದ ಮತ್ತು ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡುವ ನಿಲುವಿನೊಂದಿಗೆ ತನ್ನ ಪಯಣ ಆರಂಭಿಸಿತು.
ಪ್ರಾರಂಭದಲ್ಲಿ ಪಕ್ಷವು ತನ್ನ ಸಮಾಜವಾದಿ ನಾಯಕರ ಪರಂಪರೆಯನ್ನು ಬಳಸಿಕೊಂಡು ರೈತರು, ಬಡವರು ಮತ್ತು ಹಿಂದುಳಿದ ವರ್ಗಗಳ ಬೆಂಬಲವನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಮುಖ್ಯವಾಗಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಬಲವಾದ ಬೆಂಬಲವನ್ನು ಕ್ರೋಢೀಕರಿಸಿತು. ಇದು ಪಕ್ಷಕ್ಕೆ ಒಂದು ಸ್ಥಿರವಾದ ಮತಬ್ಯಾಂಕ್ ನೀಡಿತಾದರೂ ದೊಡ್ಡ ಅಸ್ತಿತ್ವವನ್ನೇನು ನೀಡಲಿಲ್ಲ. ಪಕ್ಷದ ಕಚೇರಿಯಲ್ಲಿರುವ ಸೈದ್ಧಾಂತಿಕ ನಾಯಕರ ಹೆಸರುಗಳನ್ನು ಹೊರತುಪಡಿಸಿ, ಪಕ್ಷದ ನಡಿಗೆ ಈ ತಾತ್ವಿಕ ಚಿಂತನೆಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಟೀಕೆಗಳನ್ನು ಎದುರಿಸುತ್ತಿದೆ.

ಪ್ರಾದೇಶಿಕ ಪಕ್ಷಗಳ ಸಾಮಾನ್ಯ ರೋಗ: ಕುಟುಂಬ ಮತ್ತು ಅಧಿಕಾರ ಮೋಹ
ರಾಜ್ಯದ ಜನರ ಭಾಷೆ, ಭಾವನೆ, ನೆಲ, ಜಲ, ಸಂಸ್ಕೃತಿ ಮತ್ತು ಅಭಿವೃದ್ಧಿಯನ್ನು ಕಾಪಾಡುವುದಾಗಿದೆ ಪ್ರಾದೇಶಿಕ ಪಕ್ಷಗಳ ಆಶಯವಾಗಿರುತ್ತದ. ಭಾರತದ ಐವತ್ತು ವರ್ಷಗಳ ಪ್ರಾದೇಶಿಕ ಪಕ್ಷಗಳ ಇತಿಹಾಸವನ್ನು ಗಮನಿಸಿದರೆ, ಅವುಗಳ ಸ್ಥಾಪನೆಯು ಇನ್ನೊಂದು ಪಕ್ಷದ ದುರಾಡಳಿತ, ಭಾಷೆ, ಭಾವನೆ ಅಥವಾ ರಾಜ್ಯ ವಿಂಗಡಣೆಯಂತಹ ಭಾವನಾತ್ಮಕ ವಿಷಯಗಳನ್ನು ಆಧರಿಸಿರುತ್ತದೆಯೇ ಹೊರತು ರಾಜ್ಯದ ಹಿತಾಸಕ್ತಿ ಎಂಬುದು ಕೇವಲ ತೋರುಗಾಣಿಕೆಗೆ ಸೀಮಿತ. ನಂತರದ ದಿನಗಳಲ್ಲಿ ರಾಜ್ಯದ ಹಿತಾಸಕ್ತಿ ಸಂಪೂರ್ಣ ನೆನಪೇ ಮರೆತು ಹೋಗಿ ಅಧಿಕಾರ ಮತ್ತು ಕುಟುಂಬದ ಹಿತಾಸಕ್ತಿ ಮೆರೆದಾಡುವುದನ್ನು ಇತಿಹಾಸದಲ್ಲಿ ಕಾಣಬಹುದು. ಜೆಡಿಎಸ್ ಕೂಡ ಇದಕ್ಕೆ ಹೊರತಲ್ಲ.
ಇಪ್ಪತ್ತೈದು ವರ್ಷಗಳ ಅವಧಿಯು ಯಾವುದೇ ಪ್ರಾದೇಶಿಕ ಪಕ್ಷಕ್ಕೆ ಇದು ಒಂದು ದೀರ್ಘ ಸಮಯವೇ ಹೌದು. ಪಕ್ಕದ ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ಪಕ್ಷ ಸ್ಥಾಪಿಸಿದ ಕೇವಲ 8 ವರ್ಷಗಳಲ್ಲಿ ವೈಎಸ್ಆರ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಹೊಸದಾಗಿ ಅಸ್ತಿತ್ವಕ್ಕೆ ಬಂದ ತೆಲಂಗಾಣ ರಾಷ್ಟ್ರ ಸಮಿತಿ 20 ವರ್ಷಗಳಲ್ಲಿ ಎರಡು ಬಾರಿ ಸ್ವತಂತ್ರವಾಗಿ ಸರ್ಕಾರ ರಚಿಸಿತು. ಇಂದಿಗೂ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರಮ್ಯವಿದೆ. ಆದರೆ ದೇಶಕ್ಕೆ ಪ್ರಧಾನಿಯೊಬ್ಬರನ್ನು ನೀಡಿದ ಇತಿಹಾಸ ಹೊಂದಿದ್ದರೂ ಜೆಡಿಎಸ್ ತನ್ನ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದೇಕೆ ಎಂಬ ಪ್ರಶ್ನೆಗೆ ಪಕ್ಷದಿಂದ ಗಂಭೀರ ಪರಾಮರ್ಶೆ ನಡೆದಿಲ್ಲ.
ಪಕ್ಷ ತಾನು ಎದುರಿಸಿದ ಎರಡನೇ ಚುನಾವಣೆಯಲ್ಲೇ (2004) ಶೇ. 20.77 ರಷ್ಟು ಮತ ಪಡೆದು 58 ಕ್ಷೇತ್ರಗಳಲ್ಲಿ ಗೆಲುವು ಸಾದಿಸಿತ್ತು. ಇಷ್ಟು ವರ್ಷಗಳಾದ ಮೇಲೂ ಅದು ತನ್ನ ಹಳೆಯ ದಾಖಲೆಯಿಂದ ಮೇಲೇರಲಾಗಿಲ್ಲ. 2023ರ ಚುನಾವಣೆಯಲ್ಲಿ ಕೇವಲ 13.29% ಮತ ಮತ್ತು 19 ಸ್ಥಾನಗಳಿಗೆ ಕುಸಿದಿರುವುದು ಪ್ರಾದೇಶಿಕ ಪಕ್ಷ ಜೆಡಿಎಸ್ ಕೊನೆಯ ದಿನಗಳನ್ನು ಎಣಿಸುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ.
ಜೆಡಿಎಸ್‌ನ ರಾಜಕೀಯವಾಗಿ ಐದು ಜಿಲ್ಲೆಗಳಲ್ಲಿ ಭಾರಿ ಪ್ರಭಾವ ಹೊಂದಿದ್ದು, ಮೂರು ಜಿಲ್ಲೆಗಳಲ್ಲಿ ಮಧ್ಯಮ ಮಟ್ಟದ ಬಲ ಮತ್ತು ಸುಮಾರು ಹನ್ನೆರಡು ಜಿಲ್ಲೆಗಳಲ್ಲಿ ಗೆಲುವಿನ ಮುನ್ನಡಿ ಬರೆಯುವ ಮೂಲಕ ಒಟ್ಟು ಸುಮಾರು ಇಪ್ಪತ್ತು ಜಿಲ್ಲೆಗಳಲ್ಲಿ ಅಸ್ತಿತ್ವ ಆರಂಭಿಸಿತ್ತು. ಆದರೆ, ಆ ಬಳಿಕದ ಇಪ್ಪತ್ತು ವರ್ಷಗಳಲ್ಲಿ ಅದರ ಶಕ್ತಿ ನಿಧಾನವಾಗಿ ಕುಸಿಯುತ್ತಲೇ ಸಾಗಿದೆ. ಪಕ್ಷವು ‘ತಾನು ಬಿಟ್ಟುಕೊಡುವುದರಿಂದ ಹೆಚ್ಚು ಪಡೆಯಬಹುದು’ ಎಂಬ ಸರಳ ರಾಜಕೀಯ ಸತ್ಯದಿಂದ ದೂರ ಸಾಗುತ್ತಿದ್ದಂತೆ, ಅದರ ಶಕ್ತಿಯೂ ಕ್ಷೀಣಿಸುತ್ತಾ ಸಾಗಿದೆ. ಅತಿಯಾದ ಅಧಿಕಾರ ಮೋಹವೇ ಅದನ್ನು ಅಧಿಕಾರದಿಂದ ದೂರ ಸಾಗುವಂತೆ ಮಾಡಿದೆ. ಇದು ಪ್ರಾದೇಶಿಕ ಪಕ್ಷದ ವಿಸ್ತರಣೆ ಮತ್ತು ಸ್ಥಿರತೆಗೆ ಅಗತ್ಯವಾದ ತ್ಯಾಗದ ಮನೋಭಾವದ ಕೊರತೆಯನ್ನು ಸೂಚಿಸುತ್ತದೆ.
ಹಳೆ ಮೈಸೂರಿಗೆ ಸೀಮಿತಗೊಂಡ ಬೇರುಗಳು
ಪಕ್ಷದಲ್ಲಿನ ಪ್ರಮುಖ ವೈಫಲ್ಯಗಳಲ್ಲಿ ಒಂದು ಅದರ ಪ್ರಾದೇಶಿಕ ಅಸಮತಲ ದೃಷ್ಟಿ. ಕರ್ನಾಟಕದೊಳಗೆ ಇರುವ ಉತ್ತರ ಕರ್ನಾಟಕ (ಕಲ್ಯಾಣ ಮತ್ತು ಕಿತ್ತೂರು), ಕರಾವಳಿ, ಮಲೆನಾಡು ಪ್ರದೇಶಗಳನ್ನು ಅದು ಸರಿಯಾಗಿ ಗುರುತಿ ಬಳಸಿಕೊಳ್ಳುವಲ್ಲಿ ಸೋಲುತ್ತಲೇ ಇದೆ. ಒಕ್ಕಲಿಗ ನಾಯಕರಾದ ದೇವೇಗೌಡರ ಕುಟುಂಬವು ತಮ್ಮ ಜನವರ್ಗಗಳಿರುವ ಜಿಲ್ಲೆಗಳ ಹೊರಗಿನ ಇತರ ಸಮುದಾಯಗಳ ಕಡೆಗೆ ಗಂಭೀರವಾಗಿ ಗಮನ ಹರಿಸಲಿಲ್ಲ ಎಂಬ ಪ್ರಶ್ನೆ ದೊಡ್ಡದಾಗುತ್ತಿದೆ. ಉತ್ತರ ಕರ್ನಾಟಕವೊಂದರಲ್ಲೇ 99 ವಿಧಾನಸಭಾ ಸ್ಥಾನಗಳಿವೆ. ಲಿಂಗಾಯತರು ಮತ್ತು ಇತರ ಹಿಂದುಳಿದ ಜನಸಂಖ್ಯೆಯೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಜೆಡಿಎಸ್ ಇತರ ಸಮುದಾಯಗಳ ನಾಯಕರನ್ನು ಬೆಳೆಸಲಿಲ್ಲ. ಅಗತ್ಯ ಪ್ರೋತ್ಸಾಹ, ಬೆಂಬಲ ಮತ್ತು ಅವಕಾಶ ನೀಡಲು ವಿಫಲವಾಗಿದೆ. ಈ ಕಾರಣದಿಂದ ಜೆಡಿಎಸ್ ಹಳೆ ಮೈಸೂರು ಭಾಗದ ಪಕ್ಷ ಎಂಬ ಹಣೆಪಟ್ಟಿಯಿಂದ ಇನ್ನೂ ಹೊರಬರಲಾಗಿಲ್ಲ.
ಹೆಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಜಾರಿಗೊಳಿಸಿದ ರೈತರ ಸಾಲಮನ್ನಾದಂತಹ ಯೋಜನೆಗಳು ರೈತ ಸಮುದಾಯದ ನೆರವಿಗೆ ಬಂದಿವೆ. ಇದು ಪಕ್ಷದ ಪ್ರಮುಖ ಸಕಾರಾತ್ಮಕ ಅಂಶ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ 75 ವರ್ಷಗಳ ಆಡಳಿತದಲ್ಲಿನ ಮಿತಿ ಮೀರಿದ ಭ್ರಷ್ಟಾಚಾರ, ಹೈಕಮಾಂಡ್ ಸಂಸ್ಕೃತಿ, ನಕಲಿ ರಾಷ್ಟ್ರಿಯತೆ, ಹಿಂದಿ ಹೇರಿಕೆ, ಕೋಮು ಮತ್ತು ಧರ್ಮ ಕೇಂದ್ರಿತ ಪ್ರಚೋದನೆ, ಕೇಂದ್ರೀಯ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ವಂಚನೆ, ತೆರಿಗೆಯಲ್ಲಿ ಉತ್ತರದ ರಾಜ್ಯಗಳಿಗೆ ಬಹುಪಾಲು ಮೀಸಲು, ರಾಜ್ಯಕ್ಕೆ ಕಡಿತ ಇತ್ಯಾದಿ ಹತ್ತು ಹಲವು ವಿಷಯಗಳು ಅದರ ಎದುರು ಇದ್ದವು.
ಕನ್ನಡಿಗರು ಈ ರಾಷ್ಟ್ರೀಯ ಪಕ್ಷಗಳಿಂದ ಶತಮಾನದಿಂದ ಬಸವಳಿದು ಹೋಗಿದ್ದಾರೆ. ಈ ಹೋರಾಟ ಜೆಡಿಎಸ್‌ಗೂ ಸಾಕಷ್ಟು ಶಕ್ತಿ ತುಂಬುತಿತ್ತು. ಬಿಜೆಪಿ, ಕಾಂಗ್ರೆಸ್‌ಗಳ ದುರಾಡಳಿತ ಪ್ರಶ್ನಿಸಲು ಇದ್ದ ಸ್ಥಾನ ಅದನ್ನು ತುಂಬುವಲ್ಲಿ ಜೆಡಿಎಸ್ ಬಹುತೇಕ ವಿಫಲವಾಗಿತು. ಕೈಗೆ ಬಂದ ಅವಕಾಶವನ್ನು ಕೈ ಚೆಲ್ಲುತ್ತಾ ಸಾಗಿತು. ಅವುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳಲು ಸೀಮಿತವಾಗಿ ಪ್ರಾದೇಶಿಕ ಹಿತಾಸಕ್ತಿಗಳನ್ನು ಬಹುತೇಕ ಕಡೆಗಣಿಸಿತು ಎಂಬ ಗಂಭೀರ ಆರೋಪಗಳು ಅದರ ಎದುರು ಇವೆ.
ಇನ್ನೊಂದೆಡೆ ದಲಿತ ಮತ್ತು ದಮನಿತರು, ಕಾರ್ಮಿಕರು, ಮಹಿಳೆಯರು, ಮಧ್ಯಮ ವರ್ಗದಂತಹ ಇತರ ಪ್ರಮುಖ ಸಾಮಾಜಿಕ ಸ್ತರಗಳತ್ತ ಅದು ಗಂಭೀರವಾಗಿ ಗಮನಕೊಟ್ಟಿಲ್ಲ ಎಂಬ ಆರೋಪಗಳೂ ಇವೆ. ಭಾಷೆ ಮತ್ತು ಕನ್ನಡ ಅಸ್ಮಿತೆಯ ವಿಚಾರದಲ್ಲಿ ತಮಿಳುನಾಡಿನ ದ್ರಾವಿಡ ಪಕ್ಷಗಳಂತಹ ಆತ್ಯಂತಿಕ ಒಲವು ಮತ್ತು ಬದ್ಧತೆಯನ್ನು ತೋರಿಸಲಿಲ್ಲ. ಕರ್ನಾಟಕದ ಜನರಲ್ಲಿ ತಮಿಳುನಾಡಿನಂತಹ ಭಾಷೆ, ನೆಲ-ಜಲ ಒಲವಿನ ಕೊರತೆ ಇದೆ ಎಂಬ ಮಾತುಗಳಿದ್ದರೂ, ಜೆಡಿಎಸ್ ಈ ವಿಷಯವನ್ನು ಬಳಸಿಕೊಂಡು ಬಲಿಷ್ಠ ಪ್ರಾದೇಶಿಕ ಅಸ್ಮಿತೆಯನ್ನು ಕಟ್ಟುವಲ್ಲಿ ವಿಫಲವಾಗಿದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಕುಟುಂಬ ರಾಜಕೀಯವನ್ನು ಜನ ದಶಕಗಳಿಂದ ಆರಿಸಿ ರೂಢಿಯಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಇದು ಅಭ್ಯಾಸವಾಗಿಲ್ಲದಿರುವುದು ಕನ್ನಡರ ಜಾಗೃತ ಪ್ರಜ್ಞೆ.

ಅವಕಾಶವಾದಿ ಮೈತ್ರಿಯಿಂದ ವಿಶ್ವಾಸದ ಕುಸಿತ
ಜೆಡಿಎಸ್ ಪಕ್ಷದ ವಿಶ್ವಾಸಾರ್ಹತೆಯ ಕುಸಿತಕ್ಕೆ ಅದರ ಅವಕಾಶವಾದಿ ಮೈತ್ರಿ ರಾಜಕಾರಣವು ನೇರ ಕಾರಣವಾಗಿದೆ. ದೇವೇಗೌಡರು ಪ್ರಧಾನಿಯಾಗಲು ಯುನೈಟೆಡ್ ಫ್ರಂಟ್ ಮತ್ತು ಸೆಕ್ಯುಲರ್ ಪಕ್ಷಗಳ ಬೆಂಬಲ ನಿರ್ಣಾಯಕವಾಗಿತ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲದಿಂದ. ದೇವೇಗೌಡರು ಇತ್ತೀಚೆಗೆ ರಾಜ್ಯಸಭೆಗೆ ಹೋದದ್ದೂ ಕಾಂಗ್ರೆಸ್ ಬೆಂಬಲದಿಂದ. ಆದರೂ, ಜೆಡಿಎಸ್ ರಾಜಕೀಯದಲ್ಲಿ ಅತಿ ಹೆಚ್ಚು ಬಾರ್ಗಿನ್ ಮಾಡುತ್ತಾ, ಅಧಿಕಾರದ ಪರವಾಗಿ ಪದೇ ಪದೇ ನಿಲುವು ಬದಲಿಸುತ್ತಾ ವಿಶ್ವಾಸವನ್ನು ಕೆಡಿಸಿಕೊಂಡಿದೆ ಎಂಬ ರಾಜಕೀಯ ವಿಮರ್ಶಕರ ಮಾತಿನಲ್ಲಿ ಉರುಳಿದೆ.
ಧರ್ಮಸಿಂಗ್ ಸರ್ಕಾರವಿದ್ದಾಗ ಕುಮಾರಸ್ವಾಮಿಯವರೇ ಬಂಡಾಯವೆದ್ದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಲು ಕಾರಣರಾಗಿದ್ದು, ಇದು ಪಕ್ಷದ ಮೊದಲ ವಿಶ್ವಾಸ ದ್ರೋಹದ ನಡೆ. ಬಿಜೆಪಿ ಜತೆ ಸರ್ಕಾರ ರಚಿಸಿದಾಗ ಮುಸ್ಲಿಮರ ಶಾಶ್ವತ ನಂಬಿಕೆ ಕಳೆದುಕೊಂಡಿತು. 20-20 ಸರ್ಕಾರದಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೆ ಒಂದು ತಪ್ಪಿನ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಹೋಗಿ ಮತ್ತೊಂದು ಐತಿಹಾಸಿಕ ತಪ್ಪೆಸಗಿತು. ಈ ಎಲ್ಲಾ ಮೈತ್ರಿ ಸರ್ಕಾರಗಳಲ್ಲೂ ಜೆಡಿಎಸ್ ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸಿದ್ದು ಕುಟುಂಬ ಹಿತಾಸಕ್ತಿಯನ್ನು ಸ್ಪಷ್ಟವಾಗಿ ಹೊರಹಾಕಿತು.
ಕುಟುಂಬ ರಾಜಕಾರಣ ಜೆಡಿಎಸ್‌ಗೆ ಹೊಡೆತವೇ?
ಪರಿವಾರ ರಾಜಕಾರಣವು ಜೆಡಿಎಸ್‌ಗೆ ದೊಡ್ಡ ಮಟ್ಟದ ಹೊಡೆತ ನೀಡಿದೆ ಎಂಬುದನ್ನು ಅಲ್ಲಗಳೆಯಲಾಗದು. ದೇವೇಗೌಡರು ಪಕ್ಷ ನಾಶವಾಗುವ ಆತಂಕದಿಂದ ಅದರ ಸೂತ್ರವನ್ನು ಕುಟುಂಬದ ಕೈಯಲ್ಲೇ ಇಟ್ಟುಕೊಂಡಿರಬಹುದು. ಆದರೆ, ಅಧಿಕಾರದ ಸೂತ್ರವನ್ನೂ ಕುಟುಂಬದ ಕೈಯಲ್ಲೇ ಇಟ್ಟುಕೊಳ್ಳುವ ಅವರ ನಡೆ ಕುಟುಂಬ ಹಿತಾಸಕ್ತಿಯನ್ನು ಬಯಲು ಮಾಡಿದೆ. ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡ, ಎಚ್.ಡಿ. ರೇವಣ್ಣ, ಅವರ ಮಕ್ಕಳು ಹೀಗೆ ಕುಟುಂಬದ ಎಲ್ಲರೂ ಒಂದಲ್ಲ ಒಂದು ಹುದ್ದೆಯನ್ನು ಹೊಂದಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ತನ್ನ ಕುಟುಂಬಸ್ಥರನ್ನು ಪಕ್ಷ ಮತ್ತು ಸರ್ಕಾರದ ಹತ್ತಿರಕ್ಕೂ ಬಿಟ್ಟುಕೊಳ್ಳದೆ ಇಪ್ಪತ್ತು ವರ್ಷ ಸತತವಾಗಿ ಅಧಿಕಾರ ಮಾಡಿದೆ. ಆದರೆ ಜೆಡಿಎಸ್ ಸಂಪೂರ್ಣವಾಗಿ ಕುಟುಂಬದ ಹಿಡಿತದಲ್ಲೇ ಇರುವುದರಿಂದ ಯುವಕರು ಮತ್ತು ಹೊರಗಿನ ನಾಯಕರು ಪಕ್ಷದಿಂದ ದೂರ ಉಳಿಯಲು ಕಾರಣವಾಗಿದೆ.
ಒಂದು ಹಂತಕ್ಕೆ ಬೆಳೆದ ಪಕ್ಷದ ನಾಯಕರನ್ನು, ಶಾಸಕರನ್ನು ಗೌರವದಿಂದ ನಡೆಸಿಕೊಳ್ಳುವ, ಅವರ ವಿಶ್ವಾಸ ಮತ್ತು ಬೆಳವಣಿಗೆಯನ್ನು ಕುಮಾರಸ್ವಾಮಿ ಮತ್ತು ದೇವೇಗೌಡರು ಗೌರವಿಸಲಿಲ್ಲ ಎಂಬ ಆರೋಪವೂ ಬಲವಾಗಿದೆ. ಕಳೆದ ಹತ್ತು ವರ್ಷಗಳಲ್ಲೇ ಎರಡು ಡಜನ್ಗೂ ಹೆಚ್ಚು ಪ್ರಭಾವಿ ನಾಯಕರು (ಹಳೆ ಮೈಸೂರು, ಉತ್ತರ ಕರ್ನಾಟಕ, ಮಲೆನಾಡು ಭಾಗದ) ಜೆಡಿಎಸ್ ತೊರೆದು ಇತರ ಪಕ್ಷಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡಿದ್ದಾರೆ.
ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಿದ್ದ ಹಳೆ ಮೈಸೂರು ಭಾಗದ ಪ್ರಭಾವಿ ನಾಯಕ ಜಿ.ಟಿ. ದೇವೇಗೌಡರು ಈ ಸಾಲಿಗೆ ಸೇರಲು ಸರತಿಯಲ್ಲಿ ನಿಂತಿರುವುದು ಪಕ್ಷ ತೊರೆಯುವ ಪ್ರಕ್ರಿಯೆ ನಿಂತಿಲ್ಲ ಎಂದು ತಿಳಿಯುತ್ತಿದೆ. ಹಲವು ನಾಯಕರು ಇದ್ದೂ ಇಲ್ಲದಂತೆ ಸುಮ್ಮನಾಗಿದ್ದಾರೆ. ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ರಾಜ್ಯಾಧ್ಯಕ್ಷ ಮಗ ಹೆಚ್ಡಿ ಕುಮಾರಸ್ವಾಮಿಯವರು, ಯುವ ಅಧ್ಯಕ್ಷ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ – ಈ ಮೂರು ಪ್ರಮುಖ ಸ್ಥಾನಗಳು ಒಂದು ಕುಟುಂಬದ ಕೈಯಲ್ಲಿರುವುದು ಯುವ ಸಮುದಾಯವನ್ನು ಮತ್ತು ಹೊಸ ನಾಯಕತ್ವವನ್ನು ಪಕ್ಷಕ್ಕೆ ಸೆಳೆಯುವ ಬದಲು ನಿರಾಶೆ ಮೂಡಿಸುತ್ತಿದೆ.
ದೇವೇಗೌಡರು ಪ್ರಧಾನಿಯಾದರೂ ಉಳಿಸಿಕೊಳ್ಳದ ಪ್ರಭಾವ

ಜೆಡಿಎಸ್ ಪ್ರಜಾ ಸೋಷಿಯಲಿಸ್ಟ್ ಪಕ್ಷ, ಜನತಾ ಪಕ್ಷ ಮತ್ತು ಜನತಾ ದಳದ ಗತ ವೈಭವವನ್ನು ಮರಳಿ ಪಡೆಯಲಾಗಿಲ್ಲ. ದೇವೇಗೌಡರು ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯಾಗಿದ್ದು ಅಂದಿನ ಸಾಮೂಹಿಕ ಪ್ರಾದೇಶಿಕ ನಾಯಕತ್ವದ ಬಲದಿಂದ. ಆದರೆ ಜೆಡಿಎಸ್‌ನಲ್ಲಿ ಆ ಗತ ವೈಭವವನ್ನು ಅವರು ಗಳಿಸಲು ಈವರೆಗೂ ಸಾಧ್ಯವಾಗಿಲ್ಲ. ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಜತೆ ಸರ್ಕಾರ ರಚಿಸಿದಾಗ ಕುಟುಂಬದ ಹೊರಗಿನ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರ ಕೈಗೊಂಡಿದ್ದರೆ, ಜೆಡಿಎಸ್ ಇಂದು ನಿಂತ ನೀರಾಗುವ ಸ್ಥಿತಿ ಬರುತ್ತಿರಲಿಲ್ಲ ಮತ್ತು ಕುಟುಂಬ ಪಕ್ಷ ಎಂಬ ಕುಖ್ಯಾತಿಯಿಂದಲೂ ದೂರವಿರುತ್ತಿತ್ತು.
ಜೆಡಿಎಸ್ ಎಂದರೆ ಒಕ್ಕಲಿಗರ ಪಕ್ಷ ಎಂಬ ಪ್ರಖ್ಯಾತಿಯೇ ಅದನ್ನು ಉಳಿದ ಸಮುದಾಯಗಳ ಮುಂದೆ ಕುಖ್ಯಾತವಾಗಿಸಿದೆ. ಪಕ್ಷದಲ್ಲಿ ಹೆಚ್ಚಿನ ಮಂದಿ ಒಕ್ಕಲಿಗರಿಗೇ ಅಧಿಕಾರ ಮತ್ತು ಸ್ಥಾನಮಾನ ನೀಡಿದ್ದು ಇದಕ್ಕೆ ಕಾರಣ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ, ನಾಯಕ, ಕುರುಬ ನಾಯಕರನ್ನು ಬೆಳೆಸಲು ಅಗತ್ಯವಾಗಿ ಒಂದಷ್ಟು ಸ್ಥಾನಮಾನಗಳನ್ನು ಅದು ತ್ಯಾಗ ಮಾಡಬೇಕಿತ್ತು. ಆದರೆ ಈ ಹೆಚ್ಚಿನ ಅವಕಾಶಗಳು ಹಳೆ ಮೈಸೂರು ಭಾಗದ ನಾಯಕರ ಪಾಲಾಗುತ್ತಿದ್ದವು. ಈ ಅಂಶ ಜೆಡಿಎಸ್ನನ್ನು ಒಕ್ಕಲಿಗರು ಮತ್ತು ಹಳೆ ಮೈಸೂರು ಎಂಬ ಹಣೆಪಟ್ಟಿಗೆ ಸೀಮಿತಗೊಳಿಸಿತು. ಕನ್ನಡಿಗರಲ್ಲಿ ಭಾಷೆ, ನೆಲ-ಜಲ ಒಲವಿನ ಕೊರತೆ ಇದೆ ಎಂಬ ಮಾತುಗಳಿದ್ದರೂ, ಜೆಡಿಎಸ್ ಇದನ್ನು ಬಂಡವಾಳ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಕರ್ನಾಟಕದ ವಿವಿಧ ಪ್ರಾದೇಶಿಕತೆಗಳ ಪ್ರತಿನಿಧೀಕರಣದ ನಿರ್ಲಕ್ಷ್ಯ ಜೆಡಿಎಸ್ ವಿಸ್ತರಣೆಗೆ ದೊಡ್ಡ ಅಡ್ಡಿಯಾಗಿದೆ. ಕರಾವಳಿ, ಮಲೆನಾಡುಗಳನ್ನು ಅದು ಸರಿಯಾಗಿ ಗುರುತಿಸುವುದಿರಲಿ 99 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಕರ್ನಾಟಕವನ್ನುಅದು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಟೀಕೆಗಳಿವೆ. ಅವುಗಳನ್ನು ಜೆಡಿಎಸ್ ಪ್ರತಿನಿಧಿಸದೆ ಇದ್ದಿದ್ದು ಮತ್ತು ಉತ್ತರ ಕರ್ನಾಟಕದಲ್ಲಿ ಉತ್ತಮ ನಾಯಕರನ್ನು ಬೆಳೆಸದೆ ಇದ್ದಿದ್ದು ದೊಡ್ಡ ಕೊರತೆಯಾಗಿದೆ. ಇದು ಹಳೆ ಮೈಸೂರು ಭಾಗದ ಪಕ್ಷ ಎಂದು ಬಿಂಬಿತವಾಯಿತು. ಈ ಅಂಶ ಜೆಡಿಎಸ್ನ ಶಕ್ತಿಯನ್ನು ಸಾಕಷ್ಟು ಕುಸಿಯುವಂತೆ ಮಾಡಿದೆ. ಉತ್ತರ ಕರ್ನಾಟಕ ನೆಲೆ ವಿಸ್ತರಿಸಲು, ದಕ್ಷಿಣ ಕರ್ನಾಟಕದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಲು ವಿವಿಧ ಸಮುದಾಯಗಳ ನಾಯಕರನ್ನು ಅದು ಬೆಳೆಸಲಿಲ್ಲ. ಇದು ಅದರ ಮೇಜರ್ ಸೆಟ್ ಬ್ಯಾಕ್.
ಜೆಡಿಎಸ್ ಕರ್ನಾಟಕದ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಉದಾಹರಣೆಗೆ ಕಳಸಾ ಬಂಡೂರಿ, ಮಹಾದಾಯಿ ಯೋಜನೆಗಳು, ಕಬ್ಬು ಬೆಳೆಗಾರರು, ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು, ಕರಾವಳಿಯಲ್ಲಿ ಕಾಫಿ ಬೆಳೆಗಾರರ ನಿರ್ಲಕ್ಷ್ಯ, ಯಕ್ಷಗಾನ, ಬಯಲಾಟ, ಕಂಬಳ, ಉತ್ತರ ಕರ್ನಾಟಕದ ಸಾಹಿತ್ಯ ಮತ್ತು ಸಾಹಿತಿಗಳ ವೈಶಿಷ್ಟ್ಯತೆ ಒಳಗೊಳ್ಳದೆ ಇದ್ದ ಅಂಶಗಳೂ ಅದು ಅವಕಾಶಗಳನ್ನು ಕಳೆದುಕೊಳ್ಳಲು ಕಾರಣವಾಗಿರಬಹುದು. ದೇವೇಗೌಡರು ಪ್ರಧಾನಿಯಾಗಿ ರಾಷ್ಟ್ರಮಟ್ಟದಲ್ಲಿ ಮಾಡಿದ ಕೆಲಸಗಳು ಮತ್ತು ಅವರ ವರ್ಚಸ್ಸನ್ನು ತನ್ನ ಬೆಳವಣಿಗೆಯ ಶಕ್ತಿಯಾಗಿ ಬಳಸಿಕೊಳ್ಳುವಲ್ಲಿ ಪಕ್ಷ ವಿಫಲವಾಗಿದೆ.

ಬಿಜೆಪಿ ಮೈತ್ರಿ: ಆತ್ಮಹತ್ಯೆಯೇ?
ಜೆಡಿಎಸ್‌ನ ಇತ್ತೀಚಿನ ನಡೆಯಾದ ಬಿಜೆಪಿ ಜೊತೆಗಿನ ಮೈತ್ರಿ (ಎನ್‌ಡಿಎ) ಪಕ್ಷದ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇಷ್ಟು ದಿನ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲ ಶಕ್ತಿಯಾಗಿದ್ದರಿಂದ, ಬಿಜೆಪಿಗೆ ಸ್ವಂತ ಸರ್ಕಾರ ರಚಿಸಲು ಬಹುಮತ ಬಾರದಿರಲು ಜೆಡಿಎಸ್‌ನ ಬಲವೂ ಒಂದು ಕಾರಣವಾಗಿತ್ತು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮತಗಳನ್ನು ಕಡಿತಗೊಳಿಸುವುದರಿಂದ ಕಾಂಗ್ರೆಸ್ಗೆ ಅನುಕೂಲವಾಗುತ್ತಿತ್ತು, ಮತ್ತು ಬಿಜೆಪಿ ಏಳಿಗೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ.
ಈಗ ಬಿಜೆಪಿ ಜತೆಗೇ ಮೈತ್ರಿ ಮಾಡಿಕೊಂಡಿರುವುದರಿಂದ, ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ತನ್ನ ಸಂಘಟನೆ ಮತ್ತು ಮತದಾರರ ನೆಲೆಯನ್ನು ವಿಸ್ತರಿಸಲು ಜೆಡಿಎಸ್ ಸ್ವತಃ ದಾರಿ ಮಾಡಿಕೊಟ್ಟಂತಾಗುತ್ತದೆ. ಭವಿಷ್ಯದಲ್ಲಿ ಆ ಭಾಗದಲ್ಲಿ ಬಿಜೆಪಿ ತಲೆ ಎತ್ತಿದರೆ, ಜೆಡಿಎಸ್ ತನ್ನ ಪಾರಂಪರಿಕ ಕ್ಷೇತ್ರ ಮತ್ತು ಒಕ್ಕಲಿಗ ಮತದಾರರನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಬಿಜೆಪಿ ಮೈತ್ರಿ ಮಾಡಿಕೊಂಡು ಜೆಡಿಎಸ್ ತಾನೇ ಹೆಚ್ಚು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಈ ಮೈತ್ರಿಯು ಮುಸ್ಲಿಮರು, ಹಿಂದುಳಿದವರು ಜೆಡಿಎಸ್‌ನ್ನು ಮತ್ತೆ ಅನುಮಾನದಿಂದ ನೋಡುವಂತೆ ಮಾಡಿದೆ.
ಒಟ್ಟಾರೆಯಾಗಿ, ಕರ್ನಾಟಕದ ಜಾತ್ಯತೀತ ಜನತಾದಳಕ್ಕೆ 25 ವರ್ಷಗಳಾದ ಈ ಸಂದರ್ಭವು ಆತ್ಮಾವಲೋಕನ ಮತ್ತು ಭವಿಷ್ಯದ ಕಾರ್ಯತಂತ್ರ ರೂಪಿಸುವ ಸಮಯವಾಗಿದೆ. ಒಂದು ಪ್ರಬಲ ಪ್ರಾದೇಶಿಕ ಶಕ್ತಿಯಾಗಿದ್ದರೂ, ದ್ವಂದ್ವ ರಾಜಕಾರಣ ಮತ್ತು ಕುಟುಂಬ ರಾಜಕಾರಣದ ಕಾರಣದಿಂದಾಗಿ ಪಕ್ಷವು ನಿರಂತರವಾಗಿ ಅಸ್ಥಿರತೆ ಮತ್ತು ಸೈದ್ಧಾಂತಿಕ ಗೊಂದಲದ ಸವಾಲುಗಳನ್ನು ಎದುರಿಸಿದೆ.
ಇದನ್ನೂ ಓದಿ | “ಇಂದಿನ ಸಿಎಂ ಅಂದು ನನ್ನ ಮಗನ ಸರ್ಕಾರ ಕೆಡವಿದ್ದರು”: ಎಚ್‌ಡಿಡಿ
ಜೆಡಿಎಸ್‌ಗೆ ಈಗ ಉಳಿದಿರುವ ಮುಖ್ಯ ಸವಾಲುಗಳೆಂದರೆ: ಸೈದ್ಧಾಂತಿಕ ಸ್ಪಷ್ಟತೆ, ಹಳೆ ಮೈಸೂರು ಭಾಗದ ಹೊರತಾಗಿ ರಾಜ್ಯದ ಇತರ ಭಾಗಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವುದು ಮತ್ತು ದೇವೇಗೌಡರ ಕುಟುಂಬದ ಹೊರತಾದ ಹೊಸ ನಾಯಕತ್ವವನ್ನು ಬೆಳೆಸುವುದು. ಪಕ್ಷವು ತನ್ನ ಅಸ್ತಿತ್ವ ಮತ್ತು ಸಿದ್ಧಾಂತವನ್ನು ಉಳಿಸಿಕೊಂಡು, ರಾಜ್ಯ ರಾಜಕೀಯದಲ್ಲಿ ಮೂರನೇ ಶಕ್ತಿಯಾಗಿ ಪ್ರಸ್ತುತವಾಗಬೇಕಾದರೆ, ಅದು ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಗಟ್ಟಿಗೊಳಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಮುನ್ನಡೆಯುವುದು ಅಗತ್ಯ. ಜೆಡಿಎಸ್‌ನ ಭವಿಷ್ಯವು ರಾಜ್ಯದ ಸಮಸ್ಯೆಗಳ ಪ್ರತಿನಿಧೀಕರಣ ಮತ್ತು ಪಕ್ಷದೊಳಗಿನ ನಾಯಕರಿಗೆ ಸಮಾನ ಅವಕಾಶ ನೀಡುವುದರ ಮೇಲೆ ಅವಲಂಬಿತವಾಗಿದೆ.







