ಕಾಂಗ್ರೆಸ್‌ನಲ್ಲಿ ಭೋಜನ ಕೂಟಗಳ ಅಬ್ಬರ: ಶಾಸಕರ ಮನ ಗೆಲ್ಲಲು ಡಿಕೆಶಿ ‘ಡಿನ್ನರ್’ ಅಸ್ತ್ರ?

ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದ ಕಾವು ಒಂದೆಡೆಯಾದರೆ, ತೆರೆಮರೆಯಲ್ಲಿ ನಡೆಯುತ್ತಿರುವ 'ಭೋಜನ ರಾಜಕೀಯ'ದ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. 
dks denies dinner politics

ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದ ಕಾವು ಒಂದೆಡೆಯಾದರೆ, ತೆರೆಮರೆಯಲ್ಲಿ ನಡೆಯುತ್ತಿರುವ ‘ಭೋಜನ ರಾಜಕೀಯ’ದ (Dinner Politics) ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. 

ನಾಯಕತ್ವ ಬದಲಾವಣೆ, ಒಳ ಮೀಸಲಾತಿ ಮತ್ತು ಜಾತಿಗಣತಿ ಚರ್ಚೆಗಳ ನಡುವೆ, ಶಾಸಕರು ಮತ್ತು ನಾಯಕರ ನಡುವಿನ ರಾತ್ರಿ ಊಟದ ಕೂಟಗಳು ಅಧಿಕಾರ ಬದಲಾವಣೆಯ ತಂತ್ರಗಾರಿಕೆ ಎಂದೇ ಬಿಂಬಿತವಾಗುತ್ತಿವೆ. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದು, “ಇದು ರಾಜಕೀಯದ ಊಟವಲ್ಲ, ಪ್ರೀತಿಯ ಕರೆಯೋಲೆ,” ಎಂದು ಸ್ಪಷ್ಟಪಡಿಸಿದ್ದಾರೆ.

“ಪ್ರೀತಿಯಿಂದ ಕರೆದರೆ ಬೇಡ ಎನ್ನಲಾಗುತ್ತಾ?”:

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ಮತ್ತು ಆಪ್ತ ಶಾಸಕರ ನಡುವಿನ ಭೋಜನ ಕೂಟಗಳ ಬಗ್ಗೆ ಹಬ್ಬಿರುವ ವದಂತಿಗಳನ್ನು ತಳ್ಳಿಹಾಕಿದರು. “ನಮ್ಮಲ್ಲಿ ಯಾವುದೇ ಔತಣಕೂಟ ಅಥವಾ ಸೀಕ್ರೆಟ್ ಮೀಟಿಂಗ್‌ಗಳು ನಡೆಯುತ್ತಿಲ್ಲ. ಕಾಂಗ್ರೆಸ್ ಒಂದು ಕುಟುಂಬವಿದ್ದಂತೆ. ಇಲ್ಲಿರುವ ಪ್ರತಿಯೊಬ್ಬರೂ ನಮ್ಮವರು. ನಮ್ಮ ಕ್ಷೇತ್ರದವರು, ಸ್ಥಳೀಯ ಮುಖಂಡರು ಅತ್ಯಂತ ಪ್ರೀತಿಯಿಂದ ಊಟಕ್ಕೆ ಕರೆಯುತ್ತಾರೆ. ಅಭಿಮಾನದಿಂದ ಊಟ ತಂದು ಕೊಡುತ್ತಾರೆ. ಹೀಗೆ ಪ್ರೀತಿಯಿಂದ ಕರೆದಾಗ, ಅವರು ಬಡಿಸುವ ಊಟವನ್ನು ಬೇಡ ಎಂದು ಹೇಳಲು ಮನಸ್ಸು ಬರುವುದಿಲ್ಲ,” ಎಂದು ಭಾವುಕವಾಗಿ ನುಡಿದರು.

ಗುರುವಾರ ರಾತ್ರಿ ಬೆಳಗಾವಿ ಹೊರವಲಯದಲ್ಲಿ ನಡೆದ ಶಾಸಕರೊಂದಿಗಿನ ಭೋಜನ ಕೂಟದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅದೊಂದು ಪೂರ್ವಯೋಜಿತ ರಾಜಕೀಯ ಸಭೆಯಲ್ಲ ಎಂಬುದನ್ನು ವಿವರಿಸಿದರು. “ನನ್ನ ಕನಕಪುರ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನಿಗೆ ನಾನು ಇಲ್ಲಿಗೆ ಬಂದಿರುವುದು ತಿಳಿದು, ‘ಸಾಹೇಬ್ರೆ, ನಮ್ಮ ಮನೆಯಿಂದ ಮುದ್ದೆ ಮತ್ತು ಉಪ್ಪಸಾರು ಮಾಡಿಸಿ ತರುತ್ತೇನೆ ಅಥವಾ ಊಟಕ್ಕೆ ಬನ್ನಿ’ ಎಂದು ಪ್ರೀತಿಯಿಂದ ಆಹ್ವಾನಿಸಿದ. ತವರು ನೆಲದ ಊಟ ಮತ್ತು ಅಭಿಮಾನದ ಕರೆಯನ್ನು ತಿರಸ್ಕರಿಸಲು ಆಗುತ್ತದೆಯೇ? ಹಾಗಾಗಿ ಒಂದೊಂದು ದಿನ ಒಂದೊಂದು ಕಡೆ ಪ್ರೀತಿಯ ಊಟಕ್ಕೆ ಹೋಗುತ್ತೇವೆ, ಅಷ್ಟೇ,” ಎಂದು ಡಿಕೆಶಿ ಸಮಜಾಯಿಷಿ ನೀಡಿದರು.

ಇದನ್ನೂ ಓದಿ | ಉ.ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕೆ ಬೇಡಿಕೆ:  ಶಾಸಕ ರಾಜು ಕಾಗೆ

ಡಿಕೆಶಿ ಇದನ್ನು ಕೇವಲ ‘ಸ್ನೇಹದ ಊಟ’ ಎಂದು ಕರೆದರೂ, ರಾಜಕೀಯ ಪಡಸಾಲೆಯಲ್ಲಿ ಇದು ಬೇರೆಯದೇ ಸಂದೇಶ ರವಾನಿಸುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ನಡುವಿನ ಶೀತಲ ಸಮರ, ಅಹಿಂದ ಸಮಾವೇಶಗಳು ಮತ್ತು ಪರ್ಯಾಯ ನಾಯಕತ್ವದ ಚರ್ಚೆಗಳು ನಡೆಯುತ್ತಿರುವಾಗ, ಶಾಸಕರನ್ನು ಒಗ್ಗೂಡಿಸಿಟ್ಟುಕೊಳ್ಳುವ ತಂತ್ರವಾಗಿ ಈ ಭೋಜನ ಕೂಟಗಳನ್ನು ನೋಡಲಾಗುತ್ತಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಶಾಸಕರು ಒಟ್ಟಿಗೆ ಸೇರುವುದು ಸಹಜವಾದರೂ, ಪ್ರಸ್ತುತ ರಾಜಕೀಯ ಅಸ್ಥಿರತೆಯ ಸನ್ನಿವೇಶದಲ್ಲಿ ಪ್ರತಿಯೊಂದು ನಡೆಯನ್ನೂ ಭೂತಗನ್ನಡಿಯಿಂದ ನೋಡಲಾಗುತ್ತಿದೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »