ಅನಿವಾಸಿ ಕನ್ನಡಿಗರ ಬಹುದಿನಗಳ ಬೇಡಿಕೆಯಾದ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಕುರಿತು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಗುರುವಾರ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಅನಿವಾಸಿ ಭಾರತೀಯರ (ಎನ್‌ಆರ್‌ಐ) ನಿಯೋಗವು, ತಮ್ಮ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದೆ.
ಕರ್ನಾಟಕ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ ಹಾಗೂ ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರ ನೇತೃತ್ವದಲ್ಲಿ ಆಗಮಿಸಿದ ನಿಯೋಗದಲ್ಲಿ, ಮಧ್ಯಪ್ರಾಚ್ಯ, ಯುರೋಪ್, ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ ಪ್ರಮುಖ ಅನಿವಾಸಿ ಕನ್ನಡಿಗರು ಇದ್ದರು. ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯವೊಂದನ್ನು ರಚಿಸಬೇಕು ಎಂಬುದು ನಿಯೋಗದ ಪ್ರಮುಖ ಬೇಡಿಕೆಯಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ನಿಯೋಗದ ಸದಸ್ಯ ಹಾಗೂ ಮಧ್ಯಪ್ರಾಚ್ಯದ ಖ್ಯಾತ ಉದ್ಯಮಿ ಡಾ. ರೊನಾಲ್ಡ್ ಕೊಲಾಕೊ ಅವರು, 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಭರವಸೆ ನೀಡಿತ್ತು ಎಂಬುದನ್ನು ಮುಖ್ಯಮಂತ್ರಿಗಳಿಗೆ ನೆನಪಿಸಿಕೊಟ್ಟರು. “ಅನಿವಾಸಿ ಕನ್ನಡಿಗರು ತಾಯ್ನಾಡಿನಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಆದರೆ, ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಹಲವು ಇಲಾಖೆಗಳನ್ನು ಸುತ್ತಬೇಕಾದ ಪರಿಸ್ಥಿತಿ ಇದೆ. ಪ್ರತ್ಯೇಕ ಸಚಿವಾಲಯ ಹಾಗೂ ಏಕಗವಾಕ್ಷಿ ಪದ್ಧತಿ (Single Window System) ಜಾರಿಗೆ ಬಂದರೆ ಹೂಡಿಕೆ ಪ್ರಕ್ರಿಯೆ ಸರಳವಾಗಲಿದೆ ಮತ್ತು ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ,” ಎಂದು ಅವರು ವಿವರಿಸಿದರು.
ಸಿಎಂ, ಡಿಸಿಎಂರ ಭರವಸೆ:
ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈ ಕುರಿತು ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಿವಾಸಿ ಕನ್ನಡಿಗರ ಬೇಡಿಕೆಗೆ ಸ್ಪಷ್ಟ ಭರವಸೆ ನೀಡಿದ್ದು, “2026ರ ಮಾರ್ಚ್ ಅಂತ್ಯದೊಳಗೆ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಮಸ್ಯೆಗಳು ಮತ್ತು ಕಾಳಜಿಗಳನ್ನು ಬಗೆಹರಿಸಲು ನಾವು ಸದಾ ಸಿದ್ಧರಿದ್ದೇವೆ,” ಎಂದು ತಿಳಿಸಿದರು.
ಇದನ್ನೂ ಓದಿ | ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಿಎಂ ಒಲವು
ಸುಮಾರು 34 ದೇಶಗಳನ್ನು ಪ್ರತಿನಿಧಿಸುವ 42 ಸದಸ್ಯರಿದ್ದ ಈ ನಿಯೋಗವು, ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರನ್ನು ಸಹ ಭೇಟಿ ಮಾಡಿ ಮನವಿ ಸಲ್ಲಿಸಿತು.
ವಿಶ್ವದಾದ್ಯಂತ ಸುಮಾರು 18 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದು, ಅವರೆಲ್ಲರ ಧ್ವನಿಯಾಗಿ ಈ ನಿಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾದರೆ ವಿದೇಶದಲ್ಲಿರುವ ಕನ್ನಡಿಗರ ರಕ್ಷಣೆ, ಕಲ್ಯಾಣ ಮತ್ತು ರಾಜ್ಯಕ್ಕೆ ಹೂಡಿಕೆ ತರುವ ನಿಟ್ಟಿನಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಲಿದೆ ಎಂದು ಡಾ. ಆರತಿ ಕೃಷ್ಣ ಅಭಿಪ್ರಾಯಪಟ್ಟರು.







