ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಸ್ಥಾಪಿಸಲಾಗಿದ್ದ ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ’ಗಳನ್ನು (PMBJK) ಮುಚ್ಚುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ಮಹತ್ವದ ತೀರ್ಪನ್ನು ನೀಡುವ ಮೂಲಕ ನ್ಯಾಯಾಲಯವು, “ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ,” ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದೆ.
ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳ ಪರವಾನಗಿಯನ್ನು ರದ್ದುಗೊಳಿಸಿ, ಆ ಜಾಗಗಳನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರವು ಮೇ 14 ಮತ್ತು ಆಗಸ್ಟ್ 2 ರಂದು ಪ್ರತ್ಯೇಕ ಆದೇಶಗಳನ್ನು ಹೊರಡಿಸಿತ್ತು. ಈ ಕೇಂದ್ರಗಳ ಬದಲಿಗೆ ರಾಜ್ಯ ಸರ್ಕಾರದ ಸ್ವಂತ ಬ್ರಾಂಡ್‌ನಡಿ ಜೆನೆರಿಕ್ ಔಷಧಿ ಮಳಿಗೆಗಳನ್ನು ತೆರೆಯಲು ಅಥವಾ ಬೇರೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿತ್ತು ಎನ್ನಲಾಗಿದೆ. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಜನೌಷಧಿ ಕೇಂದ್ರಗಳ ಮಾಲೀಕರು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಕೇಂದ್ರ ಸರ್ಕಾರದ ಯೋಜನೆಯಡಿ ಸ್ಥಾಪಿತವಾಗಿರುವ ಈ ಕೇಂದ್ರಗಳು ಬಡವರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿವೆ. ಕೇವಲ ರಾಜಕೀಯ ಕಾರಣಗಳಿಗಾಗಿ ಅಥವಾ ಕೇಂದ್ರದ ಯೋಜನೆ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರವು ಇವುಗಳನ್ನು ಮುಚ್ಚಲು ನಿರ್ಧರಿಸುವುದು ಜನವಿರೋಧಿ ನಡೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
“ಬಡ ರೋಗಿಗಳು ದುಬಾರಿ ಔಷಧಿಗಳನ್ನು ಕೊಳ್ಳಲಾಗದೆ ಪರದಾಡುತ್ತಿರುವಾಗ, ಅವರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿ ಸಿಗುವ ವ್ಯವಸ್ಥೆಯನ್ನು ಹಾಳು ಮಾಡಬಾರದು. ಸಾರ್ವಜನಿಕ ಹಿತಾಸಕ್ತಿ ಮತ್ತು ಆರೋಗ್ಯದ ವಿಷಯದಲ್ಲಿ ರಾಜಕೀಯ ದ್ವೇಷ ಅಥವಾ ಪೈಪೋಟಿ ಇರಬಾರದು,” ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | ಬೆಳಗಾವಿ ಚಳಿಗಾಲ ಅಧಿವೇಶನ ವಿಸ್ತರಣೆಗೆ ಆಗ್ರಹಿಸಿದ ಆರ್. ಅಶೋಕ್
ಜನೌಷಧಿ ಕೇಂದ್ರಗಳ ಮಹತ್ವ
ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರಗಳಲ್ಲಿ, ಮಾರುಕಟ್ಟೆ ದರಕ್ಕಿಂತ ಶೇ. 50 ರಿಂದ ಶೇ. 90 ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಿವೆ. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು, ಮಧುಮೇಹಿ ಮತ್ತು ಹೃದ್ರೋಗಿಗಳು ಈ ಕೇಂದ್ರಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶದಿಂದಾಗಿ ಲಕ್ಷಾಂತರ ರೋಗಿಗಳು ಆತಂಕಕ್ಕೆ ಒಳಗಾಗಿದ್ದರು. ಹೈಕೋರ್ಟ್‌ನ ಈ ತೀರ್ಪು ಈಗ ಅವರಿಗೆ ದೊಡ್ಡ ನಿರಾಳತೆಯನ್ನು ತಂದಿದೆ.







