ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ
ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಪುಸ್ತಕದ ಜನಾರ್ಪಣೆ ಹಾಗೂ ಅವರ ಕಲಾಬದುಕಿನ ಅಪರೂಪದ ಛಾಯಾಚಿತ್ರಗಳ ಗ್ಯಾಲರಿ ಉದ್ಘಾಟನಾ ಸಮಾರಂಭ ಇದೇ ಏಪ್ರಿಲ್ 12ರಂದು ಭಾನುವಾರ ರಾಜಧಾನಿಯಲ್ಲಿ ಜರುಗಲಿದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ ಡಾ. ರಾಜ್‌ಕುಮಾರ್ ಅಧ್ಯಯನ ಪೀಠ’ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ‘ಪ್ರಸಾರಾಂಗ’ದ ಸಂಯುಕ್ತ ಆಶ್ರಯದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿವರಗಳು:
- ದಿನಾಂಕ: 12 ಏಪ್ರಿಲ್ 2026, ಭಾನುವಾರ
- ಸಮಯ: ಬೆಳಿಗ್ಗೆ 11:00 ಗಂಟೆಗೆ
- ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಕ್ಯಾಂಪಸ್, ಬೆಂಗಳೂರು.
ಗಣ್ಯರ ಉಪಸ್ಥಿತಿ:
ಪುಸ್ತಕವನ್ನು ಡಾ. ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಅವರು ಜನಾರ್ಪಣೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ರಮೇಶ್ ಅವರು ಛಾಯಾಚಿತ್ರಗಳ ಗ್ಯಾಲರಿಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಟಿ ಡಾ. ಜಯಮಾಲ ಹಾಗೂ ಚಲನಚಿತ್ರ ನಿರ್ದೇಶಕ ಭಾರ್ಗವ ಅವರು ಭಾಗವಹಿಸಲಿದ್ದಾರೆ. ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯ ಬದುಕಿನ ಹಾದಿಯನ್ನು ತಿಳಿಯಬಯಸುವ ಅಭಿಮಾನಿಗಳಿಗೆ ಮತ್ತು ಓದುಗರಿಗೆ ಈ ಪುಸ್ತಕ ಒಂದು ಅಮೂಲ್ಯ ಕಾಣಿಕೆಯಾಗಲಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಸಾಹಿತ್ಯಾಸಕ್ತರು ಭಾಗವಹಿಸುವಂತೆ ಡಾ. ಎ.ಎಸ್. ಪ್ರಭಾಕರ್ (ಸಂಚಾಲಕರು, ಡಾ. ರಾಜ್ ಅಧ್ಯಯನ ಪೀಠ) ಪ್ರಕಟಣೆಯಲ್ಲಿ ಕೋರಿದ್ದಾರೆ.











