ಔಷಧಿ ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಎಫ್‌ಎಸ್‌ಡಿಎ 133 ಔಷಧಿಗಳ ಪರವಾನಗಿಯನ್ನು ಅಮಾನತುಗೊಳಿಸಿ, 20 ಔಷಧಿಗಳ ಪರವಾನಗಿಯನ್ನು ರದ್ದುಗೊಳಿಸಿದೆ.
ಇಲಾಖೆಯ ಅಧಿಕಾರಿಗಳು ಕಳೆದತಿಂಗಳು ಸುಮಾರು 2,544 ಔಷಧಿಗಳ ಪರಿಶೀಲನೆ ನಡೆಸಿದ್ದರು. ಈ ಪರಿಶೀಲನೆಯ ನಂತರ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲಾಖೆಯ ಪ್ರಕಾರ, ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿನ ಔಷಧ ಪರೀಕ್ಷಾ ಪ್ರಯೋಗಾಲಯಗಳು ಜೂನ್ನಲ್ಲಿ 1,333 ಮಾದರಿಗಳನ್ನು ವಿಶ್ಲೇಷಿಸಿವೆ. ಅವುಗಳಲ್ಲಿ 1,292 ಮಾದರಿಗಳನ್ನು ʼಪ್ರಮಾಣಿತ ಗುಣಮಟ್ಟʼ ಮತ್ತು 41ನ್ನು ʼಪ್ರಮಾಣಿತ ಗುಣಮಟ್ಟವಲ್ಲʼ ಎಂದು ಘೋಷಿಸಲಾಗಿದೆ.
ಏಪ್ರಿಲ್ನಿಂದ ಜೂನ್ವರೆಗೆ, 1940ರ ಔಷಧಿ ಮತ್ತು ಸೌಂದರ್ಯವರ್ಧಕ ಕಾಯ್ದೆ ಮತ್ತು ಅದರ ಅಡಿಯಲ್ಲಿರುವ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ನ್ಯಾಯಾಲಯಗಳಲ್ಲಿ ಒಟ್ಟು 81ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
40 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ʼಪ್ರಮಾಣಿತ ಗುಣಮಟ್ಟವಲ್ಲದʼ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಮತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ಖಚಿತಪಡಿಸಿದೆ. ರಾಜ್ಯದಾದ್ಯಂತ ರಕ್ತದಾನ ಕೇಂದ್ರಗಳಲ್ಲಿ ವಿಶೇಷ ಅಭಿಯಾನವನ್ನು ನಡೆಸಿ, ಒಟ್ಟು 122 ಕೇಂದ್ರಗಳನ್ನು ಪರಿಶೀಲಿಸಿದೆ.
ಈ ವೇಳೆ ಗಮನಕ್ಕೆಬಂದ ವಿವಿಧ ಉಲ್ಲಂಘನೆಗಳ ಆಧಾರದ ಮೇಲೆ, 44 ರಕ್ತದಾನ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಮತ್ತು 80 ರಕ್ತದಾನ ಕೇಂದ್ರಗಳಿಗೆ ಅನುಸರಣಾ ಪತ್ರಗಳನ್ನು ನೀಡಲಾಗಿದೆ, ಎಂದು ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ಅಲ್ಲದೇ ಹೇಳಿಕೆಯ ಪ್ರಕಾರ, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಪ್ರಕಾರ, ಜೂನ್ನಲ್ಲಿ ರಾಜ್ಯಾದ್ಯಂತ 1,557 ಬೀದಿ ಆಹಾರ ಮಾರಾಟಗಾರರನ್ನು ಒಳಗೊಂಡಂತೆ ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯದ ಅಂಶಗಳನ್ನು ಪರಿಶೀಲಿಸಲಾಗಿದೆ ಮತ್ತು ನಿಯಮ ಉಲ್ಲಂಘನೆ ಮಾಡಿದ 406 ಅಂಗಡಿಗಳಿಗೆ ನೋಟಿಸ್ಗಳನ್ನು ನೀಡಲಾಗಿದ್ದು, ಒಟ್ಟು 44,500 ರೂ.ಗಳ ದಂಡವನ್ನು ಸ್ಥಳದಲ್ಲೇ ವಿಧಿಸಲಾಗಿದೆ ಎಂದು ಹೇಳಿದೆ.






