ಸಾಲಬಾಧೆಯಿಂದ ರೈತ ದಂಪತಿ ಆತ್ಮಹತ್ಯೆ
ಮಂಡ್ಯ: ತಾಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ಸಾಲದ ಬಾಧೆಗೆ ಹೆದರಿ ರೈತ ದಂಪತಿಯಾದ ಪುಟ್ಟಸ್ವಾಮಿ ಹಾಗೂ ನಾಗಮ್ಮ ಎಂಬುವವರು ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯನವರು ಮೃತರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಹಾಗೂ ಮೃತರ ವೃದ್ಧ ತಾಯಿಯವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರೈತ ಕುಟುಂಬವೊಂದು ಸಾಲದ ಸಮಸ್ಯೆಯಿಂದಾಗಿ ಇಂತಹ ದುಡುಕಿನ ನಿರ್ಧಾರ ಕೈಗೊಂಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಅಗಲಿದ ಪವಿತ್ರ ಆತ್ಮಗಳಿಗೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದರು.
ರೈತ ಬಾಂಧವರಲ್ಲಿ ವಿನಂತಿ: ಇದೇ ವೇಳೆ ರೈತ ಸಮುದಾಯಕ್ಕೆ ಧೈರ್ಯ ತುಂಬಿದ ಅವರು, ಕಷ್ಟಗಳು ಬಂದಾಗ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ದುಡುಕಿ ಆತ್ಮಹತ್ಯೆಯಂತಹ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸೋಣ, ನಾವು ನಿಮ್ಮೊಂದಿಗಿದ್ದೇವೆ ಎಂದು ಅಭಯ ನೀಡಿದರು.






