ರಾಜಸ್ಥಾನದ ಝಲಾವರ್ ಜಿಲ್ಲೆಯ ಮನೋಹರ್ ಥಾನಾ ಬ್ಲಾಕ್‌ನ ಪಿಪ್ಲೋಡಿ ಗ್ರಾಮದ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು ಕನಿಷ್ಠ ನಾಲ್ಕು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 60-70 ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಶುಕ್ರವಾರ ಬೆಳಿಗ್ಗೆ 8:30 ರ ಸುಮಾರಿಗೆ ಸಂಭವಿಸಿದ್ದು, ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.
ಘಟನೆಯ ಕುರಿತು ಮಾಹಿತಿ ನೀಡಿದ ಝಲಾವರ್ ಎಸ್‌ಪಿ ಅಮಿತ್ ಕುಮಾರ್, “ಶಾಲೆಯ ಒಂದು ತಳ ಮಹಡಿಯ ಕಟ್ಟಡವು ಹಳೆಯದಾಗಿದ್ದು, ಈ ಹಿಂದೆಯೇ ದುರಸ್ಥಿಗಾಗಿ ದೂರುಗಳು ಬಂದಿದ್ದವು. ಘಟನೆಯ ಸಮಯದಲ್ಲಿ ಸುಮಾರು 40-60 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಟ್ಟಡದೊಳಗೆ ಇದ್ದರು. ನಾಲ್ಕು ವಿದ್ಯಾರ್ಥಿಗಳು ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ, ಇವರಲ್ಲಿ 3-4 ಜನರ ಸ್ಥಿತಿ ಗಂಭೀರವಾಗಿದೆ” ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಮನೋಹರ್ ಥಾನಾ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕೊಂಡೊಯ್ಯಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಝಲಾವರ್‌ನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF), ಝಲಾವರ್ ಜಿಲ್ಲಾಡಳಿತ, ಪೊಲೀಸ್ ತಂಡ ಮತ್ತು ಸ್ಥಳೀಯ ಗ್ರಾಮಸ್ಥರು ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. JCB ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದ್ದು, ಸ್ಥಳೀಯರು ಕೈಯಿಂದಲೇ ಇಟ್ಟಿಗೆಗಳನ್ನು ತೆಗೆದು ಸಿಲುಕಿರುವವರನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಝಲಾವರ್ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅಮಿತ್ ಕುಮಾರ್ ಬುದಾನಿಯಾ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ | ಮತ್ತೊಂದು ವಿಮಾನ ದುರಂತ: ರಷ್ಯಾದಲ್ಲಿ 50 ಮಂದಿ ಸಾವು ?
ಸ್ಥಳೀಯರ ಪ್ರಕಾರ, ಶಾಲೆಯ ಕಟ್ಟಡವು ದಶಕಗಳಷ್ಟು ಹಳೆಯದಾಗಿದ್ದು, ದೀರ್ಘಕಾಲದಿಂದ ದುರಸ್ಥಿಯ ಕೊರತೆಯಿಂದಾಗಿ ಕುಸಿತದ ಸ್ಥಿತಿಯಲ್ಲಿತ್ತು. ಈ ಕುರಿತು ಹಲವಾರು ಬಾರಿ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆಯಿಂದಾಗಿ ಗ್ರಾಮೀಣ ಭಾರತದಲ್ಲಿ ಶಾಲಾ ಕಟ್ಟಡಗಳ ಸುರಕ್ಷತೆ ಮತ್ತು ನಿರ್ವಹಣೆಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.
ಕಳೆದ ಕೆಲವು ದಿನಗಳಿಂದ ಝಲಾವರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇದು ಕಟ್ಟಡದ ಕುಸಿತಕ್ಕೆ ಒಂದು ಕಾರಣವಿರಬಹುದು ಎಂದು ಶಂಕಿಸಲಾಗಿದೆ.







