ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದಲ್ಲಿ ನಡೆದ ಶವ ಹೂತಿಟ್ಟ ಆರೋಪ ಪ್ರಕರಣವನ್ನು ಬಿಜೆಪಿ ಮತ್ತು ಅದರ ಸಹಚರರ ಷಡ್ಯಂತ್ರ ಎಂದು ಸೋಮವಾರ ಆರೋಪಿಸಿದ್ದಾರೆ. ಧರ್ಮಸ್ಥಳದ ಮಾಜಿ ಸ್ವಚ್ಛತಾಕಾರ್ಮಿಕನೊಬ್ಬನು ನೂರಾರು ಶವಗಳನ್ನು ರಹಸ್ಯವಾಗಿ ಹೂತಿಟ್ಟಿದ್ದೇನೆ ಎಂದು ಆರೋಪಿಸಿದ್ದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಸಿದ್ದು, ಯಾವುದೇ ಕುರುಹುಗಳು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರು, ಈ ಆರೋಪಗಳು ಧರ್ಮಸ್ಥಳದ ಶತಮಾನಗಳ ಖ್ಯಾತಿಯನ್ನು ಕಳಂಕಗೊಳಿಸುವ ಉದ್ದೇಶದಿಂದ ನಡೆದ ದೊಡ್ಡ ಷಡ್ಯಂತ್ರ ಎಂದು ಹೇಳಿದ್ದರು. ಆದರೆ ಪ್ರತಿಪಕ್ಷ ಬಿಜೆಪಿ ನಾಯಕರು ಷಡ್ಯಂತ್ರದ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ಧರ್ಮಸ್ಥಳದ ವಿರುದ್ಧದ ಅಪಪ್ರಚಾರದ ಹಿಂದೆ ಬಿಜೆಪಿ ಮತ್ತು ಅದರ ಸಹಯೋಗಿಗಳ ಕೈವಾಡವಿದೆ. ಬಿಜೆಪಿಯ ಆಂತರಿಕ ಬಣಗಳ ನಡುವಿನ ಕಲಹವೇ ಇದಕ್ಕೆ ಕಾರಣ” ಎಂದು ಆರೋಪಿಸಿದ್ದಾರೆ. “ಇದು ಬಿಜೆಪಿಯ ಮೂಲ ಕಾರ್ಯಕರ್ತರೇ ಮಾಡಿದ ಷಡ್ಯಂತ್ರ. ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದವರೂ ಅವರೇ, ಈಗ ಅಸಮಾಧಾನ ತೋರುತ್ತಿದ್ದಾರೆ” ಎಂದು ಹೇಳಿದರು. ಧರ್ಮಸ್ಥಳ ಚಲೋ ಸಮಾವೇಶ ಹಮ್ಮಿಕೊಂಡ ಬಿಜೆಪಿಯನ್ನು ಟೀಕಿಸಿ, ಇದು ಕೇವಲ ನಾಟಕ ಎಂದು ಕರೆದರು.
ಇದನ್ನೂ ಓದಿ | ಧರ್ಮಸ್ಥಳ ಪ್ರಕರಣ: ಚಿನ್ನಯ್ಯನ ಆರೋಪ ಸುಳ್ಳು ಎಂದ ಎಫ್‌ಎಸ್‌ಎಲ್ ವರದಿ!
ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಧರ್ಮಯುದ್ಧ ಘೋಷಿಸಿದ್ದು, ಎನ್‌ಐಎ ತನಿಖೆಗೆ ಒತ್ತಾಯಿಸಿದ್ದಾರೆ. ಆದರೆ ಡಿಕೆಶಿ ಅವರು, ತನಿಖೆಯಲ್ಲಿ ಸತ್ಯ ಬಯಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.







