ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ನಂತರ ಜೆಡಿ(ಯು) ಮುಖಂಡ ನಿತೀಶ್ ಕುಮಾರ್ ಅವರು ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿನ್ನೆ (ನವೆಂಬರ್ 20) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿತೀಶ್ ನೇತೃತ್ವದ ಒಟ್ಟು 27 ಸದಸ್ಯ ಬಲದ ಈ ಆರಂಭಿಕ ಸಂಪುಟದಲ್ಲಿ ಸಂಪುಟದಲ್ಲಿ ಬಿಜೆಪಿಗೆ ಪ್ರಾಬಲ್ಯ ಪಡೆದಿದ್ದು 14 ಸ್ಥಾನ ಜೆಡಿ(ಯು)ಗೆ ಕೇವಲ 8 ಸ್ಥಾನ ನೀಡಲಾಗಿದೆ.
ನಿನ್ನೆ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ಎನ್ಡಿಎ ಆಡಳಿತದ ಮುಖ್ಯಮಂತ್ರಿಗಳು ಆಗಮಿಸಿ ಸಮಾರಂಭಕ್ಕೆ ಕಳೆ ತಂದಿದ್ದರು.
ನಿತೀಶ್ ಕುಮಾರ್ ಜೊತೆಗೆ ಇಬ್ಬರು ಉಪ ಮುಖ್ಯಮಂತ್ರಿಗಳು ಮತ್ತು 25 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟು 27 ಸದಸ್ಯ ಬಲದ ಈ ಆರಂಭಿಕ ಸಂಪುಟದಲ್ಲಿ ಬಿಜೆಪಿಗೆ 14, ಜೆಡಿ(ಯು)ಗೆ 8 (ಮುಖ್ಯಮಂತ್ರಿ ಸೇರಿ), ಎಲ್ಜೆಪಿ(ರಾಮವಿಲಾಸ್)ಗೆ 2, ಹಿಂದುಸ್ತಾನಿ ಅವಾಮ್ ಮೋರ್ಚಾ (ಎಚ್ಎಂ)ಗೆ 1 ಹಾಗೂ ರಾಷ್ಟ್ರೀಯ ಲೋಕ್ ಮೋರ್ಚಾ (ಆರ್ಎಲ್ಎಂ)ಗೆ 1 ಸ್ಥಾನ ದೊರಕಿದೆ. ಬಿಹಾರದಲ್ಲಿ ಗರಿಷ್ಠ 36 ಸದಸ್ಯ ಬಲದ ಸಂಪುಟ ರಚಿಸಬಹುದು ಎಂಬ ಕಾರಣದಿಂದ ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ನಿರೀಕ್ಷಿಸಲಾಗಿದೆ.
ಬಿಜೆಪಿಯಿಂದ ಸಾಮ್ರಾಟ್ ಚೌಧರಿ (ಓಬಿಸಿ) ಹಾಗೂ ವಿಜಯ್ ಕುಮಾರ್ ಸಿನ್ಹಾ (ಭೂಮಿಹಾರ್) ಉಪ ಮುಖ್ಯಮಂತ್ರಿಗಳಾಗಿ ಮುಂದುವರಿದಿದ್ದಾರೆ. ಸಂಪುಟದಲ್ಲಿ ಮೂವರು ಮಹಿಳೆಯರು (ಜೆಡಿ(ಯು)ನ ಲೇಶಿ ಸಿಂಗ್, ಬಿಜೆಪಿಯ ಶ್ರೇಯಸಿ ಸಿಂಗ್ ಸೇರಿದಂತೆ) ಮತ್ತು ಒಬ್ಬ ಮುಸ್ಲಿಂ ಪ್ರತಿನಿಧಿ ಜೆಡಿ(ಯು)ನ ಮೊಹಮ್ಮದ್ ಝಾಮಾ ಖಾನ್ ಸ್ಥಾನ ಪಡೆದಿದ್ದಾರೆ.
ಮೊದಲ ಬಾರಿಗೆ ಶಾಸಕರಾದ ಸುಮಾರು 10 ಜನರಿಗೆ ಸಚಿವ ಸ್ಥಾನ ದೊರಕಿದ್ದು, ಇದರಲ್ಲಿ ಬಿಜೆಪಿಯ ಹಲವು ಹೊಸ ಮುಖಗಳಿವೆ. ಆದರೆ ಜೆಡಿ(ಯು)ನಲ್ಲಿ ನಿತೀಶ್ ಅವರ ಅತ್ಯಂತ ನಿಕಟವರ್ತಿಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಜೆಡಿ(ಯು)ನ ಬಲವಾದ ಕುಶ್ವಾಹ ಸಮುದಾಯಕ್ಕೆ ಪಕ್ಷದ ಕೋಟಾದಲ್ಲಿ ಒಬ್ಬರಿಗೂ ಸ್ಥಾನ ಸಿಗದಿರುವುದು ಪಕ್ಷದೊಳಗೆ ಅಸಮಾಧಾನ ಮೂಡಿಸಿದೆ.
ಜಾತಿ ಸಮೀಕರಣದ ದೃಷ್ಟಿಯಿಂದ ನೋಡಿದರೆ ರಾಜಪೂತ ಸಮುದಾಯಕ್ಕೆ ಅತಿ ಹೆಚ್ಚು ಪ್ರಾತಿನಿಧ್ಯ (33 ಶಾಸಕರಿದ್ದಾರೆ), ಮೇಲ್ವರ್ಗದಿಂದ 8, ಅತ್ಯಂತ ಹಿಂದುಳಿದ ವರ್ಗದಿಂದ 6, ದಲಿತರಿಂದ 5 ಸ್ಥಾನಗಳಿವೆ.
ಇದನ್ನೂ ಓದಿ | ದಾಖಲೆಯ 10ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್
ಚಿಕ್ಕ ಮೈತ್ರಿಕೂಟಗಳಲ್ಲಿಯೂ ವಂಶವಾದ ಕಂಡುಬಂದಿದೆ. ಆರ್ಎಲ್ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರ ಪುತ್ರ ದೀಪಕ್ ಪ್ರಕಾಶ್ (ಯಾವ ಸದನದ ಸದಸ್ಯರೂ ಅಲ್ಲ) ಸಚಿವರಾಗಿದ್ದಾರೆ. ಎಚ್ಎಂ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಮುಂದುವರಿದಿದ್ದಾರೆ.
ನಿತೀಶ್ ಕುಮಾರ್ ಅವರು “ಬಿಹಾರವನ್ನು ಮತ್ತಷ್ಟು ಅಭಿವೃದ್ಧಿ ಹಾದಿಗೆ ಕೊಂಡೊಯ್ಯುವೆ” ಎಂದು ಭರವಸೆ ನೀಡಿದ್ದಾರೆ. ಎನ್ಡಿಎ ಚುನಾವಣಾ ಭರವಸೆಗಳಾದ ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ, ರಸ್ತೆ-ರೈಲು ಅಭಿವೃದ್ಧಿ ಈ ಸರಕಾರದ ಮುಖ್ಯ ಗಮನವಾಗಲಿವೆ ಎಂದು ತಿಳಿಸಿದ್ದಾರೆ.






