ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 8ರಿಂದ 19ರವರೆಗೆ ನಡೆಯುತ್ತಿರುವ ಕರ್ನಾಟಕ ವಿಧಾನಮಂಡಲದ ಚಳಿಗಾಲ ಅಧಿವೇಶನಕ್ಕೆ ಒಂದು ವಾರ ವಿಸ್ತರಣೆ ನೀಡಬೇಕೆಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ. ಡಿಸೆಂಬರ್ 15ರಂದು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
ಅಧಿವೇಶನದಲ್ಲಿ ಎರಡು ದಿನಗಳು (ಡಿಸೆಂಬರ್ 8 ಮತ್ತು 15) ಶಾಸಕರ ನಿಧನಕ್ಕೆ ಸಂತಾಪ ಸೂಚಿಸಿ ಮುಂದೂಡಿಕೆಯಾಗಿದ್ದರಿಂದ ಸಮಯ ಮೊಟಕುಗೊಂಡಿದೆ ಎಂದು ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆಗಳು, ಕಾನೂನು ಸುವ್ಯವಸ್ಥೆಯ ಲೋಪ, ಬಜೆಟ್ ಹಂಚಿಕೆಯಲ್ಲಿ ವಿಫಲತೆ ಸೇರಿದಂತೆ ಹಲವು ಜ್ವಲಂತ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿರುವುದರಿಂದ ವಿಸ್ತರಣೆ ಅನಿವಾರ್ಯ ಎಂದು ಆಗ್ರಹಿಸಿದ್ದಾರೆ.
ಆರ್. ಅಶೋಕ್ ಅವರು ಪತ್ರದಲ್ಲಿ ತಿಳಿಸಿರುವಂತೆ, 2025-26ನೇ ಸಾಲಿನ ಬಜೆಟ್ನಲ್ಲಿ 47 ಸರ್ಕಾರಿ ಇಲಾಖೆಗಳಿಗೆ ಒಟ್ಟು 4.09 ಲಕ್ಷ ಕೋಟಿ ರೂ. ಹಂಚಿಕೆಯಾಗಿದ್ದು, ಇದುವರೆಗೆ ಕೇವಲ 2.06 ಲಕ್ಷ ಕೋಟಿ ರೂ. ಮಾತ್ರ ಖರ್ಚಾಗಿದೆ. ಆರ್ಥಿಕ ವರ್ಷದ 8.5 ತಿಂಗಳು ಕಳೆದರೂ ಇಲಾಖೆಗಳ ಕಾರ್ಯಕ್ಷಮತೆ ಕಡಿಮೆಯಿದ್ದು, ಇದರ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು ಎಂದು ಒತ್ತಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಉತ್ತರ ಕರ್ನಾಟಕದ ಸದಸ್ಯರು ಎತ್ತಿರುವ ಸಮಸ್ಯೆಗಳಿಗೆ ಉತ್ತರ ನೀಡಬೇಕಿದೆ. ಕಾಂಗ್ರೆಸ್ ಸರ್ಕಾರದ ಕಾರ್ಯನಿರ್ವಹಣೆಯನ್ನು ಪ್ರಶ್ನಿಸುತ್ತಾ, ಅನಗತ್ಯ ಹೇಳಿಕೆಗಳು ಮತ್ತು ರಾಜಕೀಯಕ್ಕೆ ಸಮಯ ವ್ಯಯವಾಗುತ್ತಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ | ಉ.ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕೆ ಬೇಡಿಕೆ: ಶಾಸಕ ರಾಜು ಕಾಗೆ
ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ, ರೈತರ ಸಮಸ್ಯೆಗಳು, ಕಾನೂನು ಸುವ್ಯವಸ್ಥೆಯ ದುರ್ಬಲತೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬಂದಿವೆ. ಬಿಜೆಪಿ ಈಗಾಗಲೇ ರೈತರ ಸಮಸ್ಯೆಗಳ ಬಗ್ಗೆ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ. ವಿಸ್ತರಣೆಯಾಗದಿದ್ದರೆ ಬಾಕಿ ವಿಷಯಗಳು ಚರ್ಚೆಯಿಲ್ಲದೇ ಉಳಿಯಲಿವೆ ಎಂದು ಆತಂಕ ವ್ಯಕ್ತವಾಗಿದೆ.







