ಮಂಡ್ಯ: ಮಂಡ್ಯದ ಮಳವಳ್ಳಿ ಸೇರಿದಂತೆ ಕಾವೇರಿ ನದಿ ಪ್ರದೇಶದ ಹಲವಾರು ಭಾಗಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗಿದ್ದು, ಕೂಡಲೇ ಸರ್ಕಾರ ಕೆಆರ್ಎಸ್ನಿಂದ ನೀರು ಹರಿಸಬೇಕು. ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ನಡೆಸಬೇಕು. ಮೂರು ದಿನಗಳಲ್ಲಿ ನೀರು ಹರಿಸದೇ ಇದ್ದಲ್ಲಿ ಕೆಆರ್ಎಸ್ಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು.
ಮಳವಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿಲ್ಲದೆ ಒಣಗಿದ ಕಬ್ಬು ಹೊಲಗಳಿಗೆ ಭೇಟಿ ನೀಡಿದ ಅವರು ರೈತರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನೀರಿನ ಹಂಚಿಕೆ ಕುರಿತು ಸರ್ಕಾರ ಸರ್ವ ಪಕ್ಷದ ಸಭೆ ನಡೆಸಬೇಕು. ಈಗಾಗಲೇ ತಮಿಳುನಾಡು ಖ್ಯಾತೆ ತೆಗೆದಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರ ನಿಲುವು ತೆಗೆದುಕೊಳ್ಳಬೇಕಿದೆ. ತಮಿಳುನಾಡು ಸರ್ಕಾರ ತನ್ನ ನೀರಿಗಾಗಿ ಕೋರ್ಟ್ಗೆ ಹೋಗುತ್ತದೆ. ನಾವು ಇದರ ವಿರುದ್ಧ ಹೇಗೆ ಹೋರಾಟ ಮಾಡಬೇಕೆಂದು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕಿದೆ. ಕಾಂಗ್ರೆಸ್ಗೆ ಮಂತ್ರಿ ಮಂಡಲ ವಿಸ್ತರಣೆ ಮಾಡಿ ಹೈಕಮಾಂಡ್ಗೆ ದುಡ್ಡು ಕಳುಹಿಸಬೇಕಿದೆ. ರೈತರ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಮೊದಲು ಬರದ ಕುರಿತು ಚರ್ಚೆ ಮಾಡಬೇಕು ಅಥವಾ ವಿಶೇಷ ಅಧಿವೇಶನ ಕರೆಯಬೇಕು. ಎಲ್ಲ ಕ್ಷೇತ್ರಗಳ ಶಾಸಕರ ಸಮಸ್ಯೆಗಳನ್ನು ಆಲಿಸಬೇಕು. ಮೂರು ದಿನಗಳಲ್ಲಿ ನೀರು ಹರಿಸದೇ ಇದ್ದರೆ ಬಿಜೆಪಿಯಿಂದಲೇ ಕೆಆರ್ಎಸ್ಗೆ ಮುತ್ತಿಗೆ ಹಾಕಿ ನೀರು ಹರಿಸಲಾಗುವುದು ಎಂದರು.
ಕೆಆರ್ಎಸ್ನಲ್ಲಿ ಹಿಂದೆ 86 ಅಡಿ ನೀರಿದ್ದಾಗಲೂ ಇರುವ ಬೆಳೆಗೆ ನೀರು ಹರಿಸಲಾಗಿತ್ತು. ಅದೇ ರೀತಿ ಈಗ ಒಂದು ಬಾರಿ ನೀರು ನೀಡಿದರೆ ಕಬ್ಬು ಬೆಳೆಯಲು ಅನುಕೂಲವಾಗುತ್ತದೆ. ತಮಿಳುನಾಡು ಜೊತೆಗಿನ ಹೊಂದಾಣಿಕೆಯಿಂದ ರೈತರಿಗೆ ಸಮಸ್ಯೆಯಾಗಿದೆ. ಹೊಸ ಬೆಳೆಗೆ ನೀಡದಿದ್ದರೂ, ಇರುವ ಬೆಳೆಗಾದರೂ ನೀರು ನೀಡಬೇಕು. ಹಾಗೆಯೇ ಪರಿಹಾರವನ್ನು ಕಡ್ಡಾಯವಾಗಿ ಕೊಡಲೇಬೇಕು. ಬರ ಘೋಷಣೆಯಾದರೆ ಮಾತ್ರ ಮೇವು, ನೀರು ಎಲ್ಲಕ್ಕೂ ಅನುದಾನ ನೀಡಲು ಸಾಧ್ಯವಾಗುತ್ತದೆ ಎಂದರು.
ಶ್ರೀರಂಗಪಟ್ಟಣ ದಿಂದ ಮಳವಳ್ಳಿ ತನಕ ಎಲ್ಲರೂ ಮಂತ್ರಿ ಸ್ಥಾನದ ಹಿಂದೆ ಬಿದ್ದಿದ್ದಾರೆ. ರೈತರ ಕಷ್ಟ ಕೇಳಲು ಯಾರೂ ಇಲ್ಲ. ಇಲ್ಲಿನ ಶಾಸಕರು ಮಂತ್ರಿಗಿರಿಗೆ ಟಿವಿಯಲ್ಲಿ ಬ್ರೇಕಿಂಗ್ ಸುದ್ದಿ ಹಿಂದೆ ಹೋಗಿದ್ದಾರೆ. ಸರ್ಕಾರ ಬೆಳಗ್ಗೆ ನೀರು ಬಿಡಬೇಕು, ಸರ್ವ ಪಕ್ಷದ ಸಭೆ ಮಾಡಬೇಕು ಹಾಗೂ ಬರಗಾಲ ಘೋಷಣೆ ಮಾಡಬೇಕು. ಕೇವಲ ಕಾಂಗ್ರೆಸ್ ಶಾಸಕರ ಜೊತೆ ಚರ್ಚೆ ನಡೆಸುವುದರಿಂದ ಉಪಯೋಗವಿಲ್ಲ. ಎಲ್ಲ ಪಕ್ಷಗಳ ಶಾಸಕರೊಂದಿಗೆ ಮಾತನಾಡಬೇಕು ಎಂದು ಹೇಳಿದರು.
ಬಿಡದಿಯಲ್ಲಿ ರಿಯಲ್ ಎಸ್ಟೇಟ್: ಬಿಡದಿಯಲ್ಲಿ 10-12 ಲಕ್ಷ ತೆಂಗು, ಐದಾರು ಲಕ್ಷ ಮಾವಿನ ಮರಗಳಿವೆ. ಆ ಮಟ್ಟಿಗೆ ಅಲ್ಲಿ ಫಲವತ್ತಾದ ಭೂಮಿ ಇದ್ದರೂ ಸ್ವಾಧೀನ ಮಾಡಿ ರಿಯಲ್ ಎಸ್ಟೇಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ. ರೈತರ ಮನ ಒಲಿಸದೆ ಅವರನ್ನು ಖರೀದಿಸಲು ಮುಂದಾಗಿರುವುದರಿಂದ ರೈತರು ಸಿಟ್ಟಿಗೆದ್ದಿದ್ದಾರೆ. ಮೂರು ಬಾರಿ ಅಲ್ಲಿಗೆ ಭೇಟಿ ನೀಡಿದ್ದು, ಮತ್ತೊಮ್ಮೆ ಭೇಟಿ ನೀಡಿ ಹೋರಾಟ ಮಾಡಲಿದ್ದೇನೆ. ಆನೇಕಲ್ ಸೇರಿದಂತೆ ಬೇರೆ ಬೇರೆ ಕಡೆ 50,000 ಎಕರೆ ಭೂಸ್ವಾಧೀನ ನಡೆಯುತ್ತಿದೆ. ಸರ್ಕಾರ ದೌರ್ಜನ್ಯ ಮಾಡಲು ಮುಂದಾದರೆ ರೈತರು ತಿರುಗಿಬೀಳುತ್ತಾರೆ. ಮಾಡೇ ಮಾಡುತ್ತೇನೆ ಎಂದು ಸಿಎಂ ಹೇಳಿದರೆ, ರೈತರು ಕೂಡ ಬನ್ನಿ ನೋಡೋಣ ಎಂದು ತಿರುಗಿನಿಂತಿದ್ದಾರೆ ಎಂದರು. ಕಸ, ಸುರಂಗ ರಸ್ತೆ ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಟೆಂಡರ್ ಕರೆದು ಹಣ ವಸೂಲಿ ಮಾಡಲಾಗುತ್ತಿದೆ. ಇವರ ಯಾವುದೇ ಯೋಜನೆ ಪೂರ್ತಿಯಾಗಲು ಸಮಯವಿಲ್ಲ. ಯೋಜನೆ ಜಾರಿಯಾಗುವಾಗ ಚುನಾವಣೆ ಬಂದಿರುತ್ತದೆ. ಕೇವಲ ಕಮಿಶನ್ ಹೊಡೆಯುವುದು ಮಾತ್ರ ಈ ಯೋಜನೆಗಳ ಗುರಿ ಎಂದರು.






