ಪಾಂಡವಪುರದಲ್ಲಿ ಜುಲೈ 27ರಂದು ದೇಸಿ ಅಕ್ಕಿ ಮೇಳ
ಮರೆಯಾಗುತ್ತಿರುವ ದೇಸಿ ತಳಿಗಳ ಮರುಪರಿಚಯ
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ
ಭತ್ತದ ನಾಡಿನ ಹೆಮ್ಮೆಯ ಪರಂಪರೆ ಪುನರ್ಮನನ!
ಪುಟ್ಟಣ್ಣಯ್ಯ ಫೌಂಡೇಶನ್, ಸಹಜ ಸಮೃದ್ಧ, ಸಹಜ ಸೀಡ್ಸ್, ಭತ್ತ ಉಳಿಸಿ ಆಂದೋಲನ, ಆಶಾ, ರಾಜ್ಯ ರೈತ ಸಂಘ, ನೇಗಿಲಯೋಗಿ ಸಂಘ, ಕನ್ನಡ ಸಾಹಿತ್ಯ ಪರಿಷತ್ (ಪಾಂಡವಪುರ) ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗ
ಮಂಡ್ಯ: ಒಂದು ಕಾಲದಲ್ಲಿ ನಮ್ಮ ಭತ್ತದ ಗದ್ದೆಗಳು ಸ್ಥಳೀಯ ಅಕ್ಕಿ ತಳಿಗಳಿಂದ ಕಂಗೊಳಿಸುತ್ತಿದ್ದವು. ಪ್ರತಿಯೊಂದು ತಳಿಯೂ ತನ್ನದೇ ಆದ ಇತಿಹಾಸ, ಪೌಷ್ಟಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿತ್ತು. ಸ್ಥಳೀಯ ವಾತಾವರಣಕ್ಕೆ ಸೂಕ್ತವಾಗಿದ್ದ ಈ ಭತ್ತದ ತಳಿಗಳು ಪ್ರತಿಯೊಬ್ಬರ ಅನ್ನದ ಬಟ್ಟಲನ್ನು ತುಂಬುತ್ತಿದ್ದವು. ಅನ್ನಕ್ಕೆ, ಪಾಯಸಕ್ಕೆ, ಇಡ್ಲಿ-ದೋಸೆಗೆ, ಕಜ್ಜಾಯ-ಅವಲಕ್ಕಿಗೆ ಹಾಗೂ ದೇವರ ನೈವೇದ್ಯಕ್ಕೆ ಹೀಗೆ ಪ್ರತ್ಯೇಕವಾದ ವೈವಿಧ್ಯಮಯ ತಳಿಗಳಿದ್ದವು. ಇವುಗಳಲ್ಲಿ ಲಘು ಪೋಷಕಾಂಶಗಳು, ನಾರಿನ ಅಂಶ ಹಾಗೂ ಆ್ಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿದ್ದು, ತಲೆಮಾರುಗಳಿಂದ ಜನರ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದವು.
ಆದರೆ, ಇಂದಿನ ದಿನಗಳಲ್ಲಿ ಪಾಲಿಶ್ ಮಾಡಿದ ಅಕ್ಕಿಯ ಅತಿಯಾದ ಬಳಕೆಯಿಂದಾಗಿ ಈ ಅಮೂಲ್ಯ ತಳಿಗಳು ಹೊಲಗಳಿಂದಲೂ, ನಮ್ಮ ಊಟದ ತಟ್ಟೆಯಿಂದಲೂ ಮರೆಯಾಗುತ್ತಿದ್ದು, ಗ್ರಾಹಕರು ಹಣ ಮತ್ತು ಆರೋಗ್ಯ ಎರಡನ್ನೂ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಸಿ ಅಕ್ಕಿಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ಸಾವಯವ ಭತ್ತ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಜುಲೈ 27ರ ಸೋಮವಾರದಂದು ಮಧ್ಯಾಹ್ನ 1:00ರಿಂದ ಸಂಜೆ 6.00ರವರೆಗೆ ಪಾಂಡವಪುರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ‘ದೇಸಿ ಅಕ್ಕಿ ಮೇಳ’ ಹಾಗೂ ಸಾವಯವ ಸಂತೆಯನ್ನು ಆಯೋಜಿಸಲಾಗಿದೆ.
‘ದೇಸಿ ಅಕ್ಕಿ ಮೇಳ’ದ ಮುಖ್ಯ ಉದ್ದೇಶ:
- ಗ್ರಾಹಕರಲ್ಲಿ ದೇಸಿ ಅಕ್ಕಿಯ ಮಹತ್ವ ಮತ್ತು ಆರೋಗ್ಯಕರ ಗುಣಗಳ ಬಗ್ಗೆ ಅರಿವು ಮೂಡಿಸುವುದು.
- ಕರ್ನಾಟಕದ ದೇಸಿ ಅಕ್ಕಿ ವೈವಿಧ್ಯವನ್ನು ಪರಿಚಯಿಸುವುದು.
- ಸಾವಯವ ಭತ್ತ ಬೆಳೆಗಾರರಿಗೆ ನೇರ ಮಾರುಕಟ್ಟೆ ಅವಕಾಶ ಕಲ್ಪಿಸುವುದು.
ಮೇಳದಲ್ಲಿ ಲಭ್ಯವಿರುವ ದೇಸಿ ಅಕ್ಕಿಯ ತಳಿಗಳು
- ಸ್ಥಳೀಯ ಮತ್ತು ಜನಪ್ರಿಯ ತಳಿಗಳು: ಮೇಲುಕೋಟೆಯ ಪುಟ್ಟಭತ್ತ, ಯಳಂದೂರಿನ ರತ್ನಚೂಡಿ, ಪಿರಿಯಾಪಟ್ಟಣದ ರಾಜಭೋಗ, ಹೊಳೆನರಸೀಪುರದ ರಾಜಮುಡಿ, ನಂಜನಗೂಡಿನ ಆನೆಕೊಂಬಿನ ಭತ್ತ, ಕನಕಪುರದ ಮುಂಡುಗ, ನಾಗರಹೊಳೆ ಕಾಡಿನ ಹಾಲು ದೊಡ್ಡಿ, ತುಮಕೂರಿನ ಹಾಲುಬ್ಬಲು, ಮಲೆನಾಡಿನ ಗಂಧಸಾಲೆ, ಜೀರಿಗೆ ಸಣ್ಣ, ಸಿದ್ಧ ಸಣ್ಣ, ಅಂಬೆಮೊಹರ್, ಸೇಲಂ ಸಣ್ಣ, ಹೆಚ್.ಎಂ.ಟಿ, ಕೆಂಪು ಸಣ್ಣ, ಬರ್ಮಾಬ್ಲಾಕ್, ಸಿಂಧೂರ ಮಧುಸಾಲೆ, ಅಂದನೂರು ಸಣ್ಣ, ದೊಡ್ಡ ಬೈರ ನೆಲ್ಲು, ಗೌರಿ ಸಣ್ಣ ಹಾಗೂ ಕೆಂಪು ಮುಂಡಗ.
- ಔಷಧೀಯ ಹಾಗೂ ವಿಶಿಷ್ಟ ತಳಿಗಳು: ಕರಿಗಜವಲಿ, ನವರ, ರಕ್ತಸಾಲಿ, ಕೆಂಪಕ್ಕಿ ಮತ್ತು ಕಪ್ಪು ಅಕ್ಕಿ.
ಈ ಬೃಹತ್ ಮೇಳದಲ್ಲಿ ದೇಶದಾದ್ಯಂತ ಸಂಗ್ರಹಿಸಿದ 200ಕ್ಕೂ ಹೆಚ್ಚಿನ ಭತ್ತದ ತಳಿಗಳ ಪ್ರದರ್ಶನವೂ ಇರಲಿದೆ. ಇದರ ಜೊತೆಗೆ ಎಂದಿನಂತೆ ತಾಜಾ ಸಾವಯವ ತರಕಾರಿ, ಸೊಪ್ಪು, ಹಣ್ಣು, ಬೆಲ್ಲ, ಗಾಣದ ಎಣ್ಣೆ ಮತ್ತು ವಿವಿಧ ಅಡುಗೆ ಪದಾರ್ಥಗಳು ಖರೀದಿಗೆ ಲಭ್ಯವಿರುತ್ತವೆ.
ಈ ಕಾರ್ಯಕ್ರಮವನ್ನು ಸಹಜ ಸಮೃದ್ಧ, ಸಹಜ ಸೀಡ್ಸ್, ಭತ್ತ ಉಳಿಸಿ ಆಂದೋಲನ, ಪುಟ್ಟಣ್ಣಯ್ಯ ಪ್ರತಿಷ್ಠಾನ, ಆಶಾ, ರಾಜ್ಯ ರೈತ ಸಂಘ, ನೇಗಿಲಯೋಗಿ ಸಂಘ, ಕನ್ನಡ ಸಾಹಿತ್ಯ ಪರಿಷತ್ (ಪಾಂಡವಪುರ) ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾವಯವ ರೈತರನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿಸಲಾಗಿದೆ.
ದಿನಾಂಕ: ಜುಲೈ 27, 2026
ಸಮಯ: ಮಧ್ಯಾಹ್ನ 1.00 ರಿಂದ ಸಂಜೆ 6.00 ರವರೆಗೆ
ಸ್ಥಳ: ತಾಲ್ಲೂಕು ಪಂಚಾಯಿತಿ ಆವರಣ, ಪಾಂಡವಪುರ, ಮಂಡ್ಯ






