ಆರ್‌ಎಸ್‌ಎಸ್ ನಿಷೇಧ: ಮಣಿಕಂಠ್‌ ರಾಠೋಡ್‌ನಿಂದ ಖರ್ಗೆಗೆ ಬೆದರಿಕೆ!

ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ವಿರುದ್ಧವಾಗಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದರಿಂದ, ರಾಜ್ಯದ ವಿವಿಧ ಭಾಗಗಳಿಂದ ಅವರಿಗೆ ಪರ ವಿರೋಧಗಳು ವ್ಯಕ್ತವಾಗಿವೆ.
priyank kharge rss

ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ವಿರುದ್ಧವಾಗಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದರಿಂದ, ರಾಜ್ಯದ ವಿವಿಧ ಭಾಗಗಳಿಂದ ಅವರಿಗೆ ಪರ ವಿರೋಧಗಳು ವ್ಯಕ್ತವಾಗಿವೆ. ಆದರೆ, ಈ ಹೋರಾಟದ ಮಧ್ಯೆ ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಅವರ ಬಹಿರಂಗ ಬೆದರಿಕೆಯು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. 

ಅಕ್ಟೋಬರ್ 4ರಂದು ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸರ್ಕಾರಿ ಆಸ್ತಿಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿದ್ದರು. ಇದು ತಮಿಳುನಾಡು ಸರ್ಕಾರದ ಮಾದರಿಯನ್ನು ಅನುಸರಿಸಿ, ಸರ್ಕಾರಿ ಶಾಲೆಗಳು, ಕಾಲೇಜುಗಳು, ಮುಜರಾಯಿ ದೇವಸ್ಥಾನಗಳು ಮತ್ತು ಇತರ ಸರ್ಕಾರಿ ಜಮೀನುಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿತ್ತು.

ಈ ಪತ್ರದ ನಂತರ, ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದವು. ಅಕ್ಟೋಬರ್ 14ರಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿ, “ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಸರ್ಕಾರಿ ಸಂಸ್ಥೆಗಳಲ್ಲಿ ನಿರ್ಬಂಧಿಸುವುದನ್ನು ಪ್ರಶ್ನಿಸಿದ್ದಕ್ಕೆ, ಕಳೆದ ಎರಡು ದಿನಗಳಿಂದ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಅಪರಿಚಿತರಿಂದ ಬೆದರಿಕೆ ಕರೆಗಳು ಬರುತ್ತಿವೆ” ಎಂದು ಬರೆದರು. ಅಲ್ಲದೆ, ಒಂದು ಬೆದರಿಕೆ ಕರೆಯ ವೀಡಿಯೊವನ್ನು ಹಂಚಿಕೊಂಡರು, ಅದರಲ್ಲಿ ಕರೆ ಮಾಡಿದ ವ್ಯಕ್ತಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅವಾಚ್ಯ ಪದಗಳೊಂದಿಗೆ ಬೆದರಿಕೆ ಹಾಕಿದ್ದನು. ಈ ಕರೆಗಳು ವಿದೇಶಗಳಿಂದ ಬಂದಿರುವಂತೆ ಕಂಡುಬಂದಿದ್ದು, ಪೊಲೀಸರು ಐಪಿ ವಿಳಾಸಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಿಲ್ಲ ಎಂದು ಹಿಂದಿನ ಘಟನೆಗಳಲ್ಲಿ ತಿಳಿದುಬಂದಿದೆ.

ಮಣಿಕಂಠ್‌ ರಾಥೋಡ್‌ನಿಂದ ಬೆದರಿಕೆಯ ಕರೆ!

ಈ ಮಧ್ಯೆ, ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಮಣಿಕಂಠ ರಾಠೋಡ್, “ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ವಿರುದ್ಧ ಮಾತನಾಡಿ ನಿಷೇಧ ಕೋರಿದ್ದಕ್ಕೆ ಕ್ಷಮೆ ಕೋರಬೇಕು. ಕ್ಷಮೆ ಕೋರದಿದ್ದರೆ, ಇಷ್ಟು ದಿನ ಫೋನ್‌ನಲ್ಲಿ ಬೈಯುತ್ತಿದ್ದೇವೆ, ಮುಂದೆ ನಿಮ್ಮ ಮನೆಗೆ ಬರುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದರು. ಇದು ಆರ್‌ಎಸ್‌ಎಸ್ ಸ್ವಯಂಸೇವಕರು ಖರ್ಗೆ ಅವರ ಮನೆಗೆ ದಾಳಿ ಮಾಡಬಹುದು ಎಂಬ ಅರ್ಥವನ್ನು ಸೂಚಿಸುತ್ತದೆ. 

ರಾಠೋಡ್ ಅವರು ಪ್ರಿಯಾಂಕ್‌ ಖರ್ಗೆ ವಿರುದ್ಧ ಚಿತ್ತಾಪುರ ಮತಕ್ಷೇತ್ರದಿಂದ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ಮತ್ತು ಹಿಂದೆಯೂ ಖರ್ಗೆ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಆರೋಪಗಳಿವೆ. 2023ರಲ್ಲಿ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದರು ಮತ್ತು 40ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳು ಅವರ ಮೇಲಿವೆ.

ಈ ಬೆದರಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಇದು ನನಗೆ ಹೊಸದಲ್ಲ. ಈ ವ್ಯಕ್ತಿಯ ಬೆದರಿಕೆ ಶೈಲಿಯೂ ಹೊಸದಲ್ಲ. ಇದಕ್ಕೆ ಬಿಜೆಪಿ ಪಕ್ಷವೇ ಉತ್ತರ ನೀಡಬೇಕು. ಇಂಥ ವ್ಯಕ್ತಿಗಳಿಗೆ ಟಿಕೆಟ್ ನೀಡಿದ ಪಕ್ಷವೇ ಜವಾಬ್ದಾರಿಯಾಗಿರಬೇಕು” ಎಂದು ಕಟುವಾಗಿ ಟೀಕಿಸಿದರು. ಅಲ್ಲದೆ, “ಆರ್‌ಎಸ್‌ಎಸ್ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನೂ ಬಿಡಲಿಲ್ಲ, ನನ್ನನ್ನು ಬಿಡುತ್ತಾರೆಯೇ? ನಾನು ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಗಳ ಮೇಲೆ ನಡೆಯುತ್ತೇನೆ” ಎಂದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖರ್ಗೆ ಅವರಿಗೆ ಬೆಂಬಲ ನೀಡಿ, “ಪ್ರಿಯಾಂಕ್ ಖರ್ಗೆ ನನಗೆ ಬೆದರಿಕೆಗಳ ಬಗ್ಗೆ ತಿಳಿಸಿದ್ದಾರೆ. ತಮಿಳುನಾಡು ಸರ್ಕಾರದ ಕ್ರಮಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಖರ್ಗೆ ಅವರ ಭದ್ರತೆಯನ್ನು ಹೆಚ್ಚಿಸಲಾಗುವುದು. ದುಷ್ಟ ಶಕ್ತಿಗಳು ಯಾವಾಗಲೂ ಹೀಗೆಯೇ ಇರುತ್ತವೆ, ನಾವು ಭಯಪಡುವುದಿಲ್ಲ” ಎಂದರು.

ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಅವರು ಖರ್ಗೆ ಅವರನ್ನು ಟೀಕಿಸಿ, “ಅವರು ಆರ್‌ಎಸ್‌ಎಸ್ ಭೀತಿಯಿಂದ ಖರ್ಗೆ ಬಳಲುತ್ತಿದ್ದಾರೆ” ಎಂದರು. ಆದರೆ, ಖರ್ಗೆ ಅವರು ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ | “ಆರ್‌ಎಸ್‌ಎಸ್‌ನ ಚಟುವಟಿಕೆ ಸಂವಿಧಾನದ ಮೌಲ್ಯಕ್ಕೆ ವಿರುದ್ಧ” : ಖರ್ಗೆ

ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ಸರ್ಕಾರಿ ಸ್ಥಳಗಳಲ್ಲಿ ನಡೆಯುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಅಕ್ಟೋಬರ್ 12ರಂದು ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಆರ್‌ಎಸ್‌ಎಸ್ ಕಾರ್ಯಕ್ರಮಗಳು ನಡೆದಿದ್ದವು, ಅದರಲ್ಲಿ ಅನೇಕ ಸರ್ಕಾರಿ ಶಾಲಾ ಮೈದಾನಗಳಲ್ಲಿಯೇ. ಖರ್ಗೆ ಅವರ ಪತ್ರವು ಈ ಚಟುವಟಿಕೆಗಳು ಯುವಕರಲ್ಲಿ ವಿಭಜನಾತ್ಮಕ ಚಿಂತನೆಗಳನ್ನು ಬಿತ್ತುತ್ತವೆ ಎಂದು ಆರೋಪಿಸಿತ್ತು.

Share:

ಮತ್ತಷ್ಟು ಸುದ್ದಿ

ಉಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಲಾರ್ ವಿದ್ಯುತ್ ಘಟಕ ಉದ್ಘಾಟನೆ

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಫೌಂಡೇಶನ್‌ ಮಹತ್ವದ ಕೊಡುಗೆ ಸೆಲ್ಕೋ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್‌ನ ಶ್ಲಾಘನೀಯ ಕಾರ್ಯ ಮಂಡ್ಯ:

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಮುಂದೆ ಓದಿ »

ಮೋದಿಯವರ 3.0 ಸರ್ಕಾರದ 2 ವರ್ಷಗಳ 10 ಪ್ರಮುಖ ಸಾಧನೆಗಳು ಮತ್ತು ವೈಫಲ್ಯಗಳೇನು?

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 12 ವರ್ಷಗಳನ್ನು ಪೂರೈಸಿದ್ದಾರೆ. ಸತತ 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 2 ವರ್ಷಗಳನ್ನು

ಮುಂದೆ ಓದಿ »

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ ಮೈಸೂರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ

ಮುಂದೆ ಓದಿ »