ಸ್ವಯಂ ಉದ್ಯೋಗಕ್ಕೆ ಆಸರೆ
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನ
ಮಂಡ್ಯ: ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯ ಪಾಂಡವಪುರ ಕ್ಷೇತ್ರದ ಜನರ ಆರ್ಥಿಕ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪಾಂಡವಪುರದಲ್ಲಿ ‘ಪುಟ್ಟಣ್ಣಯ್ಯ ಫೌಂಡೇಶನ್’ ವತಿಯಿಂದ ಅರ್ಹ ಫಲಾನುಭವಿಗಳಿಗೆ ಕಬ್ಬಿನ ಹಾಲಿನ ಯಂತ್ರಗಳನ್ನು ವಿತರಿಸಲಾಯಿತು.
ಪಾಂಡವಪುರದ ಮಂಡ್ಯ ಸರ್ಕಲ್ ನಲ್ಲಿ ಗೋವಿಂದರಾಜು ಅವರಿಗೆ ಮತ್ತು ಪಾಂಡವಪುರ ರೈಲು ನಿಲ್ದಾಣದ ಬಳಿ ರತ್ನಮ್ಮ ಎಂಬ ಇಬ್ಬರು ಫಲಾನುಭವಿಗಳಿಗೆ ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ಕಬ್ಬಿನ ಹಾಲಿನ ಯಂತ್ರಗಳನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿತರಿಸಿ, ಅಂಗಡಿಗಳಿಗೆ ರಿಬ್ಬನ್ ಕಟ್ ಮಾಡುವ ಮತ್ತು ಕಬ್ಬನ್ನು ನುರಿಸಿ ಕಬ್ಬಿನ ಹಾಲು ತಯಾರಿಸುವ ಮೂಲಕ ಚಾಲನೆ ನೀಡಿದರು.
ಫೌಂಡೇಶನ್ ಕೆಲಸಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶ್ಲಾಘನೆ: ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು, “ಸ್ವಯಂ ಉದ್ಯೋಗಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ಅತ್ಯಂತ ಮಹತ್ವದ ಕೆಲಸಗಳು ನಡೆಯುತ್ತಿವೆ. ಜನರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿರುವ ಫೌಂಡೇಶನ್‌ನ ಈ ಶ್ರಮ ಅಭಿನಂದನೀಯ” ಎಂದರು.
ಕ್ಷೇತ್ರಾದ್ಯಂತ ಯೋಜನೆ ವಿಸ್ತರಣೆ: ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಭವಿಷ್ಯದಲ್ಲಿಯೂ ಸಹ ಮೇಲುಕೋಟೆ ಕ್ಷೇತ್ರದಾದ್ಯಂತ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ, ಹೆಚ್ಚಿನ ಜನರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭರವಸೆ ನೀಡಿದರು.
ಅಲ್ಲದೆ, ಫೌಂಡೇಶನ್‌ನ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸುತ್ತಿರುವ ಸಿಇಒ ರಣಜಿತ್ ಹಿರೇಮರಳಿ ಹಾಗೂ ಈ ಯೋಜನೆ ಯಶಸ್ವಿಯಾಗಲು ಶ್ರಮಿಸುತ್ತಿರುವ ಎಲ್ಲಾ ಪದಾಧಿಕಾರಿಗಳ ಕಾರ್ಯವೈಖರಿಯನ್ನು ಶಾಸಕರು ಶ್ಲಾಘಿಸಿ, ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಸಣ್ಣ ಪ್ರಮಾಣದ ಉದ್ಯಮಿಗಳು ಹಾಗೂ ನಿರುದ್ಯೋಗಿ ಯುವಜನತೆಗೆ ಆಸರೆಯಾಗುವ ನಿಟ್ಟಿನಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ಕೈಗೊಂಡಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ಉದ್ಯೋಗ ನೀಡುವುದಷ್ಟೇ ಅಲ್ಲದೆ, ಜನರು ಸ್ವಂತ ಕಾಲಿನ ಮೇಲೆ ನಿಂತು ಗೌರವಯುತವಾಗಿ ಬದುಕಲು ಈ ಯೋಜನೆ ದಾರಿದೀಪವಾಗಿದೆ.






