ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ವಿದೇಶ ಪ್ರಯಾಣಕ್ಕೆ ಬೆಂಗಳೂರಿನ ಸಿಸಿಹೆಚ್ 57ನೇ ನ್ಯಾಯಾಲಯ ಅನುಮತಿ ನೀಡಿದೆ. ‘ಡೆವಿಲ್: ದಿ ಹೀರೋ’ ಸಿನಿಮಾದ ಚಿತ್ರೀಕರಣಕ್ಕಾಗಿ ಜುಲೈ 1ರಿಂದ ಜುಲೈ 27, 2025ರವರೆಗೆ ವಿದೇಶದಲ್ಲಿ ಶೂಟಿಂಗ್ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ನ್ಯಾಯಾಲಯವು ದರ್ಶನ್‌ಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕದಲ್ಲಿ ದರ್ಶನ್ ತಪ್ಪದೇ ಹಾಜರಾಗಬೇಕು ಎಂಬುದು ಪ್ರಮುಖ ಷರತ್ತು. ಈ ಷರತ್ತಿನ ಮೇರೆಗೆ ಅವರಿಗೆ ಜುಲೈ 1ರಿಂದ ಜುಲೈ 27ರವರೆಗೆ ವಿದೇಶದಲ್ಲಿ ‘ಡೆವಿಲ್: ದಿ ಹೀರೋ’ ಸಿನಿಮಾದ ಚಿತ್ರೀಕರಣಕ್ಕಾಗಿ ಅವಕಾಶ ನೀಡಲಾಗಿದೆ.
ದರ್ಶನ್ ಅವರು ‘ಡೆವಿಲ್: ದಿ ಹೀರೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನಕ್ಕೊಳಗಾದಾಗ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಜಾಮೀನು ಪಡೆದ ನಂತರ ಚಿತ್ರೀಕರಣ ಪುನರಾರಂಭವಾಗಿದ್ದು, ಈಗ ವಿದೇಶದಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣಕ್ಕೆ ದರ್ಶನ್ ಸಿದ್ಧರಾಗಿದ್ದಾರೆ. ವಿದೇಶ ಪ್ರಯಾಣಕ್ಕೆ ಅನುಮತಿ ಪಡೆಯಲು ದರ್ಶನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ಇದಕ್ಕೆ ಕೋರ್ಟ್ ಅನುಮತಿ ನೀಡಿದೆ.
ಪ್ರಕರಣ ಕುರಿತಂತೆ:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎರಡನೇ ಪ್ರಮುಖ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಹಲವು ತಿಂಗಳು ಜೈಲುವಾಸ ಅನುಭವಿಸಿದ್ದ ಇವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ, ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಸದ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ಮುಂದೂಡಿಕೆಯಾಗಿದೆ. ಈ ನಡುವೆ ವಿದೇಶ ಪ್ರಯಾಣಕ್ಕೆ ಅನುಮತಿ ದೊರೆತಿರುವುದು ದರ್ಶನ್‌ಗೆ ದೊಡ್ಡ ರಿಲೀಫ್ ನೀಡಿದೆ.







