ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ: ವಾಹನ ತಪಾಸಣೆಯಲ್ಲಿ ಸುರಕ್ಷತೆಗೆ ಒತ್ತು

ಕರ್ನಾಟಕ ರಾಜ್ಯದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ಪೊಲೀಸರ ಸುರಕ್ಷತೆ ಖಾತ್ರಿಪಡಿಸಲು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಬೆಂಗಳೂರು, ಜೂನ್ 3, 2025: ಕರ್ನಾಟಕ ರಾಜ್ಯದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ಪೊಲೀಸರ ಸುರಕ್ಷತೆ ಖಾತ್ರಿಪಡಿಸಲು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಅವರು ಸುತ್ತೋಲೆ ಹೊರಡಿಸಿದ್ದಾರೆ. ಇತ್ತೀಚಿನ ದುರಂತ ಘಟನೆಗಳನ್ನು ಗಮನಿಸಿ, ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವಾಗ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಮೇ 26ರಂದು ಮಂಡ್ಯ ಜಿಲ್ಲೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಇದ್ದರಿಂದ ಹೆದ್ದಾರಿಯಲ್ಲಿ ದಟ್ಟಣೆ ಉಂಟಾಗಿ, ರಸ್ತೆ ಅಪಘಾತದಲ್ಲಿ ಒಂದು ಮಗು ಮೃತಪಟ್ಟಿತ್ತು. ಅಂತೆಯೇ, ಮೇ 13ರಂದು ದಾವಣಗೆರೆಯಲ್ಲಿ ವಾಹನ ತಪಾಸಣೆ ವೇಳೆ ವೇಗವಾಗಿ ಬಂದ ಕ್ಯಾಂಟರ್‌ನಿಂದ ಪೊಲೀಸ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದರು. ಈ ಘಟನೆಗಳು ಪೊಲೀಸರ ಸುರಕ್ಷತಾ ಕೊರತೆಯನ್ನು ಎತ್ತಿ ತೋರಿಸಿದ್ದು, ಸಾರ್ವಜನಿಕರ ಮತ್ತು ಸ್ವತಃ ಪೊಲೀಸರ ಜೀವಕ್ಕೆ ಧಕ್ಕೆ ತರುವಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಈ ಸುತ್ತೋಲೆ ಹೊರಡಿಸಲಾಗಿದೆ.

ಪೊಲೀಸರು ಸಕಾರಣವಿಲ್ಲದೆ ವಾಹನ ತಪಾಸಣೆ ನಡೆಸಬಾರದು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಕಣ್ಣಿಗೆ ಸ್ಪಷ್ಟವಾಗಿ ಕಂಡುಬರುವ ಸಂಚಾರ ನಿಯಮ ಉಲ್ಲಂಘನೆಗಳು ಮಾತ್ರ ದಾಖಲಿಸಲು ಅವಕಾಶವಿದೆ. ಹೆದ್ದಾರಿಗಳಲ್ಲಿ ಜಿಗ್‌ಜ್ಯಾಗ್ ಮಾದರಿಯ ಬ್ಯಾರಿಕೇಡ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಸ್ತೆಯಲ್ಲಿ ದಿಢೀರ್ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಸೂಚಿಸುವುದು, ಬೈಕ್ ಸವಾರರನ್ನು ಎಳೆಯುವುದು ಅಥವಾ ವಾಹನದ ಕೀಲಿಯನ್ನು ಕಸಿದುಕೊಳ್ಳುವಂತಹ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಲಾಗಿದೆ.

ವೇಗವಾಗಿ ಚಲಿಸುವ ವಾಹನಗಳನ್ನು ಬೆನ್ನಟ್ಟುವ ಬದಲು, ಅವುಗಳ ನೋಂದಣಿ ಸಂಖ್ಯೆಯನ್ನು ಗುರುತಿಸಿ, ಜಿಲ್ಲಾ ಪೊಲೀಸ್ ಠಾಣಾ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ತಪಾಸಣೆ ಸಂದರ್ಭದಲ್ಲಿ ಪೊಲೀಸರು ರಿಫ್ಲೆಕ್ಟಿವ್ ಜಾಕೆಟ್ ಧರಿಸುವುದು, ಸಂಜೆ ವೇಳೆ ಎಲ್‌ಇಡಿ ಬ್ಯಾಟನ್ ಬಳಸುವುದು ಮತ್ತು ಬಾಡಿ ವಾರ್ನ್ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಉಪಯೋಗಿಸುವಂತೆ ನಿರ್ದೇಶಿಸಲಾಗಿದೆ.

ಹೆದ್ದಾರಿಗಳಲ್ಲಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಬದಲು, ಎಫ್‌ಟಿವಿಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಅನುಸರಿಸಬೇಕು. ತಪಾಸಣಾ ಸ್ಥಳದ 100-150 ಮೀಟರ್ ಮೊದಲೇ ರಿಫ್ಲೆಕ್ಟಿವ್ ರಬ್ಬರ್ ಕೋನ್‌ಗಳು ಮತ್ತು ಸುರಕ್ಷತಾ ಸಲಕರಣೆಗಳನ್ನು ಅಳವಡಿಸಬೇಕು. ರಾತ್ರಿ ವೇಳೆ ತಪಾಸಣೆಯನ್ನು ಸಿಗ್ನಲ್ ದೀಪಗಳು ಅಥವಾ ಜಂಕ್ಷನ್‌ಗಳ ಬಳಿ ಮಾತ್ರ ನಡೆಸಬೇಕು. ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಅಧೀಕ್ಷಕರು ಈ ಸುತ್ತೋಲೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಾತರಿಪಡಿಸಬೇಕು ಎಂದು ಡಾ. ಸಲೀಂ ಆದೇಶಿಸಿದ್ದಾರೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »