ವದೆಹಲಿ: ಭಾರತದಲ್ಲಿ ಸುಮಾರು 14 ವರ್ಷಗಳ ಬಳಿಕ ಮತ್ತೊಮ್ಮೆ ಜನಗಣತಿ ನಡೆಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸಿದ್ಧತೆ ನಡೆಸಿದೆ. ಈ ಜನಗಣತಿಯನ್ನು ಜನಗಣತಿ-2027 ಎಂದು ಹೆಸರಿಸಲಾಗಿದ್ದು, ಇದರೊಂದಿಗೆ ಜಾತಿ ಗಣತಿಯನ್ನೂ (Caste Census) ನಡೆಸಲು ನಿರ್ಧರಿಸಲಾಗಿದೆ. ಈ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಸಚಿವಾಲಯ ಬುಧವಾರ ಪ್ರಕಟಿಸಿದೆ. ಮೊದಲ ಹಂತವು ಅಕ್ಟೋಬರ್ 1, 2026ರಿಂದ ಹಿಮಾಚಲ ಪ್ರದೇಶ, ಉತ್ತರಾಖಂಡ, ಲಡಾಖ್, ಜಮ್ಮು ಮತ್ತು ಕಾಶ್ಮೀರದಂತಹ ಹಿಮಚಾದಿತ ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ. ಎರಡನೇ ಹಂತವು ಮಾರ್ಚ್ 1, 2027ರಿಂದ ದೇಶದ ಉಳಿದ ಭಾಗಗಳಲ್ಲಿ ನಡೆಯಲಿದೆ.
ಭಾರತದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸುವ ಸಂಪ್ರದಾಯವಿದೆ. ಇದು ಸರ್ಕಾರಕ್ಕೆ ನೀತಿಗಳ ರೂಪಿಸುವಿಕೆ, ಸಂಪನ್ಮೂಲಗಳ ಸಮಾನ ವಿತರಣೆ ಮತ್ತು ದೇಶದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಅತ್ಯಗತ್ಯ ದತ್ತಾಂಶವನ್ನು ಒದಗಿಸುತ್ತದೆ. ಆದರೆ, ಕೊರೊನಾ ಸಾಂಕ್ರಾಮಿಕದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಮುಂದೂಡಲಾಗಿತ್ತು. ಈ ಬಾರಿ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಸೇರಿಸಲಾಗಿದ್ದು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ನವೀಕರಣದ ಕೆಲಸವೂ ನಡೆಯಲಿದೆ.
ಭಾರತದಲ್ಲಿ ಜಾತಿ, ಜನಗಣತಿಯ ಇತಿಹಾಸ
ಭಾರತದಲ್ಲಿ ಮೊದಲ ಜನಗಣತಿಯನ್ನು 1872ರಲ್ಲಿ ನಡೆಸಲಾಯಿತು. ಸ್ವಾತಂತ್ರ್ಯದ ನಂತರ ಮೊದಲ ಜನಗಣತಿಯು 1951ರಲ್ಲಿ ನಡೆಯಿತು. ಕೊನೆಯ ಜನಗಣತಿಯು 2011ರಲ್ಲಿ ನಡೆದಿದ್ದು, ಆಗ ಭಾರತದ ಒಟ್ಟು ಜನಸಂಖ್ಯೆ 121 ಕೋಟಿಯಷ್ಟಿತ್ತು. ಈ ಸಮೀಕ್ಷೆಯ ಪ್ರಕಾರ, ಲಿಂಗ ಅನುಪಾತವು 1000 ಪುರುಷರಿಗೆ 940 ಮಹಿಳೆಯರಷ್ಟಿದ್ದು, ಸಾಕ್ಷರತೆಯ ಪ್ರಮಾಣವು 74.04% ಆಗಿತ್ತು. 1951ರಿಂದ ಪ್ರತಿ ದಶಕಕ್ಕೊಮ್ಮೆ ಜನಗಣತಿ ನಡೆಸುವ ಸಂಪ್ರದಾಯವಿದ್ದರೂ, ಇದೀಗ 14 ವರ್ಷಗಳ ಬಳಿಕ ಈ ಸಮೀಕ್ಷೆ ನಡೆಯುತ್ತಿರುವುದು ಗಮನಾರ್ಹವಾಗಿದೆ.
ದೇಶದಲ್ಲಿ ಜಾತಿ ಗಣತಿಯು ಮೊದಲ ಬಾರಿಗೆ 1881ರಲ್ಲಿ ಜನಗಣತಿಯ ಭಾಗವಾಗಿ ಆರಂಭವಾಯಿತು. 1931ರವರೆಗೆ ಪ್ರತಿ ಜನಗಣತಿಯಲ್ಲಿ ಜಾತಿವಾರು ದತ್ತಾಂಶವನ್ನು ಸಂಗ್ರಹಿಸಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, 1941ರಲ್ಲಿ ಸಂಗ್ರಹಿಸಿದ ಜಾತಿವಾರು ದತ್ತಾಂಶವನ್ನು ಪ್ರಕಟಿಸಲಾಗಿರಲಿಲ್ಲ. ಸ್ವಾತಂತ್ರ್ಯದ ನಂತರ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಜಾತಿವಾರು ದತ್ತಾಂಶವನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. 1931ರ ನಂತರ ಇತರ ಜಾತಿಗಳ ಸಂಪೂರ್ಣ ದತ್ತಾಂಶವನ್ನು ಎಂದಿಗೂ ಪ್ರಕಟಿಸಲಾಗಿಲ್ಲ.







