ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನಾಮನಿರ್ದೇಶನ ಸಂಬಂಧ ಉದ್ಭವಿಸಿರುವ ವಿವಾದದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ಮತ್ತು ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು, ತಮ್ಮ ವಿರುದ್ಧದ ಸುಳ್ಳು ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಜಿ.ಎಂ. ಗಾಡ್ಕರ್ ಅವರು ದಿನೇಶ್ ಅಮೀನ್ ಮಟ್ಟು ವಿರುದ್ಧ ದಾಖಲಿಸಿರುವ ದೂರಿನ ಕುರಿತು ಸ್ಪಷ್ಟೀಕರಣ ನೀಡಿರುವ ಅವರು, ಈ ಆರೋಪಗಳು ಆಧಾರರಹಿತ ಮತ್ತು ಚಾರಿತ್ರ್ಯ ವಧೆಯ ಉದ್ದೇಶದಿಂದ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ದಿನೇಶ್ ಅಮೀನ್ ಮಟ್ಟು ತಮ್ಮ ಪತ್ರದಲ್ಲಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಟಿಯುಡಿಎ) ಸುಳ್ಳು ದಾಖಲೆಗಳನ್ನು ಸಲ್ಲಿಸಿ ನಿವೇಶನ ಪಡೆದಿದ್ದಾರೆ ಎಂಬ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ನಾನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ನಿವೇಶನವನ್ನು ಪಡೆದಿಲ್ಲ. ಕೇಂದ್ರ ಸರ್ಕಾರದ ಐಡಿಎಸ್‌ಎಮ್‌ಟಿ ಯೋಜನೆಯಡಿ 1994ರಲ್ಲಿ ಒಂದು ನಿವೇಶನವನ್ನು ಕಾನೂನಾತ್ಮಕವಾಗಿ ಪಡೆದಿದ್ದೇನೆ, ಅದಕ್ಕೆ ಸಂಬಂಧಿಸಿದ ಎಲ್ಲ ಷರತ್ತುಗಳನ್ನು ಪಾಲಿಸಿದ್ದೇನೆ. ಸ್ಥಳೀಯವಾಗಿ 15 ವರ್ಷಗಳ ಕಾಲ ನಿವಾಸಿಯಾಗಿರಬೇಕೆಂಬ ಯಾವುದೇ ಷರತ್ತು ಈ ಯೋಜನೆಯಡಿ ಇರಲಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ಪೋಸ್ಟ್‌ಗಳು ಮತ್ತು ಮಾಧ್ಯಮ ವರದಿಗಳು ಎತ್ತಿಹಿಡಿದಿವೆ, ಆದರೆ ಇದಕ್ಕೆ ಯಾವುದೇ ದಾಖಲೆಯ ಆಧಾರವಿಲ್ಲ ಎಂದು ಮಟ್ಟು ಒತ್ತಿ ಹೇಳಿದ್ದಾರೆ.
ಎರಡನೆಯದಾಗಿ, ತಮ್ಮ ವಿರುದ್ಧ ಹಲವಾರು ದೂರುಗಳನ್ನು ದಾಖಲಿಸಲಾಗಿದೆ ಎಂದು ಒಪ್ಪಿಕೊಂಡಿರುವ ಮಟ್ಟು, ಈ ದೂರುಗಳು ದುರುದ್ದೇಶಪೂರಿತ ಮತ್ತು ಆಧಾರರಹಿತವಾಗಿವೆ. “ಕೆಲವು ವ್ಯಕ್ತಿಗಳು ವೈಯಕ್ತಿಕ ದ್ವೇಷದಿಂದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಯಾವುದೇ ಪ್ರಕರಣದಲ್ಲಿ ನನ್ನ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ. ಫೇಕ್ ನ್ಯೂಸ್ ಆರೋಪದ ಪ್ರಕರಣದಲ್ಲಿ ಎರಡು ವರ್ಷಗಳಾದರೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ, ಇದು ಆರೋಪದ ನಿರಾಧಾರತೆಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ, ತಮ್ಮ ವಿರುದ್ಧ ಯಾವುದೇ ಕಾನೂನುಬದ್ಧ ದೋಷಾರೋಪಣೆ ಇಲ್ಲ ಎಂದು ವಿವರಿಸಿದ್ದಾರೆ.
ಮೂರನೆಯದಾಗಿ, ದೂರುದಾರ ಗಾಡ್ಕರ್ ಉಲ್ಲೇಖಿಸಿರುವ ‘ದಿ ಪಾಲಿಸಿ ಫ್ರಂಟ್’ ಸಂಸ್ಥೆಯ ಆರೋಪವನ್ನು ಸಹ ಮಟ್ಟು ತಿರಸ್ಕರಿಸಿದ್ದು. “ನಾನು ಈ ಸಂಸ್ಥೆಯ ಮಾಲೀಕನೂ ಅಲ್ಲ, ಪಾಲುದಾರನೂ ಅಲ್ಲ. ಬೇನಾಮಿ ಸಂಸ್ಥೆಯನ್ನು ನಡೆಸುವ ಯಾವುದೇ ಅಗತ್ಯವೂ ನನಗಿಲ್ಲ. ಸುಳ್ಳು ಮಾಹಿತಿಯ ಆಧಾರದ ಮೇಲೆ ಈ ಆರೋಪಗಳನ್ನು ಮಾಡಲಾಗಿದೆ ಎಂದರು.
ಕಳೆದ 40 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿರುವ ದಿನೇಶ್ ಅಮೀನ್ ಮಟ್ಟು, ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ಜೀವನ ನಡೆಸಿರುವುದಾಗಿ ಹೇಳಿದ್ದಾರೆ. “ನನ್ನ ವಿರುದ್ಧದ ಆರೋಪಗಳು ಯಾವುದೂ ಸಾಬೀತಾಗಿಲ್ಲ, ಇದು ನನ್ನ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆಗೆ ಸಾಕ್ಷಿಯಾಗಿದೆ,” ಎಂದರು. ಅಲ್ಲದೇ ದೂರುದಾರ ಜಿ.ಎಂ. ಗಾಡ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿಯೂ ರಾಜ್ಯಪಾಲರಿಗೆ ತಿಳಿಸಿದ್ದಾರೆ. ತಮ್ಮ ಸ್ಪಷ್ಟೀಕರಣವನ್ನು ಗಂಭೀರವಾಗಿ ಪರಿಗಣಿಸಿ, ಸುಳ್ಳು ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸುವಂತೆ ರಾಜ್ಯಪಾಲರಿಗೆ ವಿನಂತಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವು ವಿಧಾನ ಪರಿಷತ್‌ಗೆ ಆರತಿ ಕೃಷ್ಣ, ರಮೇಶ್ ಬಾಬು, ದಿನೇಶ್ ಅಮೀನ್ ಮಟ್ಟು, ಮತ್ತು ಡಿ.ಜಿ. ಸಾಗರ್ ಅವರನ್ನು ನಾಮನಿರ್ದೇಶನ ಮಾಡಲು ಶಿಫಾರಸು ಮಾಡಿತ್ತು. ಆದರೆ, ಗಾಡ್ಕರ್ ದೂರಿನಿಂದಾಗಿ ಈ ಪ್ರಕ್ರಿಯೆಗೆ ತೊಡಕುಂಟಾಗಿದೆ. ಈ ವಿವಾದವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯಪಾಲರು ಈ ಪತ್ರವನ್ನು ಹೇಗೆ ಪರಿಗಣಿಸುತ್ತಾರೆ ಎಂಬುದು ಕಾದುನೋಡಬೇಕಾಗಿದೆ.







