ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೂನ್ 19ರ ಬೆಳಗ್ಗೆ 6 ಗಂಟೆಯಿಂದ ಜೂನ್ 20ರ ಬೆಳಗ್ಗೆ 6 ಗಂಟೆಯವರೆಗೆ ಕಾವೇರಿ ನೀರು ಸರಬರಾಜಿನಲ್ಲಿ 24 ಗಂಟೆಗಳ ವ್ಯತ್ಯಯವಾಗಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಮತ್ತು ವಿದ್ಯುತ್ ನಿರ್ವಹಣೆಯ ಕಾರಣದಿಂದ ಈ ಸ್ಥಗಿತ ಅನಿವಾರ್ಯ ಎಂದು ತಿಳಿಸಿದೆ. ಈ ಅವಧಿಯಲ್ಲಿ ನಾಗರಿಕರು, ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳು ಮುಂಜಾಗ್ರತೆಯಾಗಿ ನೀರನ್ನು ಸಂಗ್ರಹಿಸಿಕೊಳ್ಳುವಂತೆ ಬಿಡಬ್ಲ್ಯೂಎಸ್ಎಸ್ಬಿ ಮನವಿ ಮಾಡಿದೆ.
ಬಿಡಬ್ಲ್ಯೂಎಸ್ಎಸ್ಬಿ ಪ್ರಕಾರ, ಟಿ.ಕೆ. ಹಳ್ಳಿಯಲ್ಲಿ ಕಾವೇರಿ 5ನೇ ಹಂತದ ಯೋಜನೆಯಡಿ 3,000 ಎಂಎಂ ವ್ಯಾಸದ ಹೊಸ ಕೊಳವೆ ಮಾರ್ಗವನ್ನು ಜೋಡಿಸುವ ಕಾರ್ಯ ನಡೆಯಲಿದೆ. ಇದರ ಜೊತೆಗೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಸೂಚಿಸಿರುವ ವಿದ್ಯುತ್ ಸ್ಥಾವರಗಳ ವಾರ್ಷಿಕ ನಿರ್ವಹಣೆ ಮತ್ತು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಮ್ಪಿ) ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ 24 ಗಂಟೆಗಳ ಅವಧಿಯಲ್ಲಿ ನೀರಿನ ಕೊರತೆಯಿಂದ ತೊಂದರೆಯಾಗದಂತೆ ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಿಸಿಕೊಳ್ಳಬೇಕು ಎಂದು ಬಿಡಬ್ಲ್ಯೂಎಸ್ಎಸ್ಬಿ ಕೋರಿದೆ. ವಾಣಿಜ್ಯ ಘಟಕಗಳು, ಕೈಗಾರಿಕೆಗಳು ಮತ್ತು ಆಸ್ಪತ್ರೆಗಳಿಗೂ ಈ ಸೂಚನೆಯನ್ನು ನೀಡಲಾಗಿದೆ. “ನಾವು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ನಿಗದಿತ ಸಮಯಕ್ಕೆ ನೀರಿನ ಸರಬರಾಜನ್ನು ಪುನರಾರಂಭಿಸಲು ಪ್ರಯತ್ನಿಸುತ್ತೇವೆ,” ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಜನರಿಗೆ ತೊಂದರೆಯಾಗದಂತೆ ಮಾಧ್ಯಮಗಳ ಮೂಲಕ ಈ ಮಾಹಿತಿಯನ್ನು ವ್ಯಾಪಕವಾಗಿ ಪ್ರಸಾರ ಮಾಡುವಂತೆಯೂ ಮಂಡಳಿ ಕೋರಿದೆ.
ಈ ಯೋಜನೆಯಡಿ 775 ದಶಲಕ್ಷ ಲೀಟರ್ಗಳಷ್ಟು (ಎಮ್ಎಲ್ಡಿ) ನೀರನ್ನು ಪ್ರತಿದಿನ ಸರಬರಾಜು ಮಾಡಲಾಗುತ್ತಿದೆ, ಇದರಿಂದ ಸುಮಾರು 50 ಲಕ್ಷ ಜನರಿಗೆ ಪೈಪ್ಲೈನ್ ಮೂಲಕ ಕಾವೇರಿ ನೀರು ಒದಗಲಿದೆ. ಬಿಬಿಎಮ್ಪಿಗೆ ಸೇರ್ಪಡೆಯಾದ 110 ಹಳ್ಳಿಗಳು ಮತ್ತು ಮಹದೇವಪುರ, ಯಶವಂತಪುರ, ಯಲಹಂಕ, ರಾಜರಾಜೇಶ್ವರಿನಗರ, ಕೆಂಗೇರಿ, ಬೊಮ್ಮನಹಳ್ಳಿ ಸೇರಿದಂತೆ ಹೊರವಲಯದ ಪ್ರದೇಶಗಳು ಈ ಯೋಜನೆಯಿಂದ ಪ್ರಯೋಜನ ಪಡೆಯಲಿವೆ. ಈ ಯೋಜನೆಯಿಂದ ನಗರದ ನೀರಿನ ಕೊರತೆಯನ್ನು 400 ದಶಲಕ್ಷ ಲೀಟರ್ಗಳಷ್ಟು ಕಡಿಮೆಗೊಳಿಸುವ ಗುರಿಯಿದೆ.







