ಕನ್ನಡ ಅತಿ ಶ್ರೀಮಂತ ಭಾಷೆ; ಒಂದು ಪದಕ್ಕೆ ಹಲವಾರು ಸಮಾನಾರ್ಥಕ ಮತ್ತು ನಾನಾರ್ಥಕ ಪದಗಳನ್ನು ಕೊಡಬಲ್ಲ ಅತಿ ದೊಡ್ಡ ಪದ ಸಂಪತ್ತನ್ನು ಹೊಂದಿರುವ ಭಾಷೆ. ಆದರೆ ಇಂದು ಡಿಜಿಟಲ್ ಮಾಧ್ಯಮದಲ್ಲಿ ಏಕೆ ಹಿಂದಿದೆ?
ಒಂದು ಭಾಷೆ ಬೆಳೆಯಲು ಅಥವಾ ಬಳಸಲು ಅದಕ್ಕೆ ಕೆಲವೊಂದು ಮೂಲಭೂತ ಅಂಶಗಳು ಬೇಕು ಅವು ಏನೆಂದರೆ ಮಾತನಾಡಲು ಪದಗಳು, ಬರೆಯಲು ಲಿಪಿ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳಲು ವ್ಯಾಕರಣ. ಆದರೆ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಕಾಲಕಾಲಕ್ಕೂ ಮಾನವನ ಸಂವಹನ ಸುಧಾರಿಸುತ್ತಿದೆ ಈ ಸುಧಾರಣೆಗಳಲ್ಲಿ ಭಾಷೆಯು ಬದಲಾಗುತ್ತದೆ. ಮಾನವನು ಮೊದಲು ಮಾತನಾಡುವುದನ್ನು ಕಲಿತನೋ ಅಥವಾ ಬರೆಯುವುದನ್ನು ಕಲಿತನು ಎಂದು ಪ್ರಶ್ನೆ ಕೇಳಿದರೆ ಮಾನವನು ಬರೆಯುವುದನ್ನು ಶುರುಮಾಡುವ ಬಹಳ ಹಿಂದೆಯೇ ಅವನ ಮೌಖಿಕವಾಗಿ ಭಾಷೆಯನ್ನು ಕಂಡುಕೊಂಡಿದ್ದ ಹಾಗೂ ಒಂದು ಮಾಹಿತಿಯನ್ನು ತಮ್ಮ ಮುಂದಿನ ಪೀಳಿಗೆಯವರಿಗೆ ತಲುಪಿಸಲು ಮಾನವನು ಒಂದು ವಿಧಾನವನ್ನು ಕಂಡುಕೊಳ್ಳಲು ಲಿಪಿಯ ಆವಿಷ್ಕಾರ ಮಾಡಿದ. ಕಾಲಕಾಲಕ್ಕೆ ನಮ್ಮ ಕನ್ನಡ ಭಾಷೆಯು ಹಲವಾರು ರೀತಿಯ ಪರಿವರ್ತನೆಯನ್ನು ಕಂಡಿದೆ ಆದರೆ ಈಗಲೂ ಅದು ಕನ್ನಡವಾಗಿಯೇ ಉಳಿದಿದೆ. ಸಾವಿರಾರು ವರ್ಷ ಬದಲಾವಣೆ, ಸುಧಾರಣೆ ಎಲ್ಲವನ್ನೂ ಕಂಡ ನಮ್ಮ ಕನ್ನಡ ಭಾಷೆ ಇಂದು ಇಂಟರ್ನೆಟ್ ನಲ್ಲಿ ಮತ್ತು ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಂಡು ಬೆಳೆಯಲು ಆಗುತ್ತಿಲ್ಲ; ಎಂಬ ಸತ್ಯವನ್ನು ನಾವು ಮೊದಲು ಗುರುತಿಸಿ ಒಪ್ಪಿಕೊಂಡರೆ ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾ ಪರಿಹಾರ ಕಂಡುಕೊಳ್ಳಬಹುದು.
ಕಲ್ಲಲ್ಲಿ ಬರೆದ ಕನ್ನಡ, ಕಟ್ಟಿಗೆಯ ಮೇಲೆ ಬರೆಯಲಾಯಿತು, ಎಲೆಗಳ ಮೇಲೆ ಬರೆಯಲಾಯಿತು, ಕಾಗದದ ಮೇಲೆ ಬರೆಯಲಾಯಿತು ಮತ್ತು ಇಂದು ಕಂಪ್ಯೂಟರ್ ಮತ್ತು ಫೋನಿನಲ್ಲಿ ಬರೆಯಲಾಗುತ್ತಿದೆ. ಆದರೆ ಹಿಂದಿನ ಎಲ್ಲಾ ವಿಧಾನದಲ್ಲೂ ಕನ್ನಡ ಎಲ್ಲಾ ಭಾಷೆಗೂ ಸಮಾನವಾಗಿ ನಿಂತಿತ್ತು ಈಗ ಡಿಜಿಟಲೀಕರಣ ವಿಷಯದಲ್ಲಿ ಮಾತ್ರ ಸಮರ್ಥವಾಗಿ ಬಳಸಲು ಆಗುತ್ತಿಲ್ಲ. ಕನ್ನಡಭಾಷೆಯನ್ನು ಡಿಜಿಟಲ್‌ನಲ್ಲಿ ಸಮರ್ಥವಾಗಿ ಬಳಸಲು ಏನು ಬೇಕು?
ಡಿಜಿಟಲ್ ಕನ್ನಡಕ್ಕೆ ಏನು ಬೇಕು ?
೧. ಫಾಂಟ್‌ಗಳು
೨. ವ್ಯಾಕರಣ ಪರೀಕ್ಷಕ (grammar checker)
೩. ಕೀಲಿಮಣಿ ಲೇಔಟ್
೪. ಭಾಷಾಂತರ ಅಪ್ಲಿಕೇಶನ್
೫. ಹೊಸಪದಗಳನ್ನು ಕನ್ನಡಕ್ಕೆ ರೂಪಾಂತರಿಸುವ ಒಂದು ನಿಘಂಟು
ಯಾರು ಮಾಡಬೇಕು?
ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಬೆಳವಣಿಗೆಯ ಮಾತು ಬಂದರೆ ಇದು ಸರ್ಕಾರ ಮಾಡಬೇಕಾದ ಕೆಲಸ ಅನ್ನಿಸುತ್ತದೆ. ಏಕೆಂದರೆ ಡಿಜಿಟಲ್ ವಿಷಯದಲ್ಲಿ ಏನಾದರೂ ಮಾಡಲು ಸಮಯ ಮತ್ತು ಸಂಪನ್ಮೂಲಗಳು ಬೇಕು, ಒಬ್ಬರೇ ಮಾಡುವಂತಹ ಕೆಲಸವಲ್ಲ. ಇಂಟರ್ನೆಟ್‌ನ ಪ್ರಾರಂಭದಿಂದಲೂ ಡಿಜಿಟಲ್ ಕನ್ನಡದ ವಿಷಯದಲ್ಲಿ ಸರ್ಕಾರ ಮಾಡಿದ ಎಲ್ಲ ಕೆಲಸಗಳನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ಅದು “ಕುದುರೆಗೆ ನೀರು ತೋರಿಸುವ ಕೆಲಸ”. ಮೇಲೆ ಗುರುತಿಸಿದ ಐದು ಅಂಶಗಳು ಈಗಾಗಲೇ ಇದೆ ಎಂದು ಎಲ್ಲರೂ ಹೇಳಬಹುದು. ಆದರೆ, ನಾನು ಮಾತನಾಡುತ್ತಿರುವುದು ಸಮರ್ಥವಾಗಿ ಕನ್ನಡವನ್ನು ಡಿಜಿಟಲ್‌ನಲ್ಲಿ ಬಳಸಲು ಅವು ಹಳೆಯದಾಗಿವೆ ಎಂದು. ನವೀಕರಣದ ಅವಶ್ಯಕತೆ ಇದೆ; ಸರ್ಕಾರ ಬರಿ ಟೆಂಡರ್ ದೃಷ್ಟಿಯಿಂದ ಕನ್ನಡವನ್ನು ನೋಡದೆ ಸಮಯದ ಜೊತೆಗೆ ವಿಕಾಸಗೊಳುವ ಸಮರ್ಥನೀಯ ಬೆಳವಣಿಗೆಯನ್ನು ತರಬೇಕು.
ಡಿಜಿಟಲ್ ಕನ್ನಡಕ್ಕೆ ಬೇಕಾಗಿರುವ ಆ ಐದು ಅಂಶಗಳು ಬಹುಶಿಸ್ತೀಯ ವಿಷಯಗಳಾದರು ಒಂದು ಒಳ್ಳೆಯ ಯೋಜನೆಯ ಮುಕಾಂತರ ಸಾಧಿಸಬಹುದು.
“ಡಿಜಿಟಲ್ ಯುಗದಲ್ಲಿ ಕನ್ನಡ ಬೆಳೆಯದಿದ್ದರೆ ಅದಕ್ಕೆ ನಾವೆಲ್ಲರೂ ಸಮನಾಗಿ ಕಾರಣ”







