ಕೇಂದ್ರ v/s ರಾಜ್ಯ: ರಾಜಕೀಯ ಭಿನ್ನತೆಯ ಒಳನೋಟ

ಭಾರತದ ಫೆಡರಲ್ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯ ಘರ್ಷಣೆಗಳು ಆಡಳಿತವನ್ನು ಕುಂಠಿತಗೊಳಿಸುತ್ತವೆ, ಇದಕ್ಕೆ ಅಧಿಕಾರ ವಿಭಜನೆಯ ಗೊಂದಲ, ರಾಜಕೀಯ ಧ್ರುವೀಕರಣ, ಮತ್ತು ಆರ್ಥಿಕ ಭಿನ್ನತೆಯೇ ಕಾರಣ. ಸಹಕಾರ, ಸಂವಿಧಾನಾತ್ಮಕ ಸುಧಾರಣೆಗಳು, ಮತ್ತು ಜನಪರ ರಾಜಕೀಯದಿಂದ ಇದಕ್ಕೆಲ್ಲಾ ಪರಿಹಾರ ಸಾಧ್ಯ.
centre-state-conflicts-india-federal-challenges

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಫೆಡರಲ್ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ವಿಭಜನೆಯು ಭಾರತದ ಸಂವಿಧಾನದ ಮೂಲ ಆಧಾರವಾಗಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಕಿತ್ತಾಟಗಳು ಆಡಳಿತದ ಗುಣಮಟ್ಟವನ್ನು ಕುಂಠಿತಗೊಳಿಸುತ್ತಿವೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಈ ಘರ್ಷಣೆಗಳು ಆಡಳಿತದ ಸವಾಲಾಗಿವೆ. ಈ ಘರ್ಷಣೆಗಳಿಗೆ ಕಾರಣವಾಗಿರುವ ಹಲವಾರು ಅಂಶಗಳನ್ನು ಕೆಳಗೆ ವಿವರಿಸಲಾಗಿದೆ:

ಭಾರತದ ಸಂವಿಧಾನವು ಕೇಂದ್ರ, ರಾಜ್ಯ, ಮತ್ತು ಸಮವಿಕಾರ ಪಟ್ಟಿಗಳ ಮೂಲಕ ಅಧಿಕಾರವನ್ನು ವಿಭಜಿಸಿದೆ. ಕೇಂದ್ರ ಪಟ್ಟಿಯಲ್ಲಿ ರಕ್ಷಣೆ, ವಿದೇಶಾಂಗ ವ್ಯವಹಾರ, ಮತ್ತು ರಾಷ್ಟ್ರೀಯ ಆರ್ಥಿಕ ನೀತಿಗಳಂತಹ ವಿಷಯಗಳಿವೆ, ಆದರೆ ರಾಜ್ಯ ಪಟ್ಟಿಯಲ್ಲಿ ಕೃಷಿ, ಕಾನೂನು-ಸುವ್ಯವಸ್ಥೆ, ಮತ್ತು ಸಾರ್ವಜನಿಕ ಆರೋಗ್ಯವಂತಹ ವಿಷಯಗಳಿವೆ. ಸಮವಿಕಾರ ಪಟ್ಟಿಯಲ್ಲಿ ಶಿಕ್ಷಣ, ಪರಿಸರದಂತಹ  ವಿಷಯಗಳಿದ್ದು, ಇದು ಎರಡೂ ಸರ್ಕಾರಗಳಿಗೆ ಜಂಟಿ ಜವಾಬ್ದಾರಿಯನ್ನು ನೀಡುತ್ತದೆ. ಆದರೆ, ಈ ವಿಭಜನೆಯ ಸ್ಪಷ್ಟತೆಯ ಕೊರತೆಯಿಂದಾಗಿ ಆಗಾಗ ಗೊಂದಲ ಉಂಟಾಗುತ್ತದೆ. ಉದಾಹರಣೆ: ಶಿಕ್ಷಣವು ಸಮವಿಕಾರ ಪಟ್ಟಿಯಲ್ಲಿದ್ದು, ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಜಾರಿಯ ಸಂದರ್ಭದಲ್ಲಿ ಕೆಲವು ರಾಜ್ಯಗಳು ತಮ್ಮ ಸ್ಥಳೀಯ ಶೈಕ್ಷಣಿಕ ವಿಶೇಷತೆಗಳಿಗೆ ಧಕ್ಕೆಯಾಗುತ್ತದೆ ಎಂದು ವಿರೋಧಿಸಿದವು. ಕೆಲವೊಮ್ಮೆ ಕೇಂದ್ರವು ರಾಷ್ಟ್ರೀಯ ಏಕರೂಪತೆಯನ್ನು ಒತ್ತಾಯಿಸಿದಾಗ, ರಾಜ್ಯಗಳು ತಮ್ಮ ಸ್ವಾಯತ್ತತೆಯ ಮೇಲಿನ ಹಸ್ತಕ್ಷೇಪ ಎಂದು ಭಾವಿಸುತ್ತವೆ, ಇದು ಘರ್ಷಣೆಗೆ ಮೂಲ ಕಾರಣವಾಗುತ್ತದೆ.

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಭಿನ್ನ ರಾಜಕೀಯ ಪಕ್ಷಗಳು ಆಡಳಿತದಲ್ಲಿರುವುದು ಸಾಮಾನ್ಯ. ಇದರಿಂದಾಗಿ, ರಾಜಕೀಯ ಒಗ್ಗಟ್ಟಿನ ಬದಲು ವಿರೋಧ ಮತ್ತು ತಿಕ್ಕಾಟ ಉಂಟಾಗುತ್ತದೆ. ಕೇಂದ್ರದಲ್ಲಿರುವ ಪಕ್ಷವು ತನ್ನ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ರಾಜ್ಯಗಳ ಮೇಲೆ ನೀತಿಗಳನ್ನು ಒತ್ತಾಯಿಸಿದರೆ, ವಿರೋಧಿ ಪಕ್ಷಗಳ ಆಡಳಿತದ ರಾಜ್ಯಗಳು ಇದನ್ನು ರಾಜಕೀಯವಾಗಿ ತಿರಸ್ಕರಿಸುತ್ತವೆ. ಉದಾಹರಣೆ 2020ರ ಕೃಷಿ ಕಾನೂನುಗಳನ್ನ ತೆಗೆದುಕೊಳ್ಳೋಣ. ಈ ನೀತಿಯ  ವಿರುದ್ಧ ಪಂಜಾಬ್, ಹರಿಯಾಣ, ಮತ್ತು ಇತರ ರಾಜ್ಯಗಳಲ್ಲಿ ಆದ ಪ್ರತಿಭಟನೆಗಳು ಕೇಂದ್ರದ ನೀತಿಗಳಿಗೆ ವಿರೋಧವಾಗಿ ರಾಜಕೀಯ ಧ್ರುವೀಕರಣವನ್ನು ತೋರಿಸಿದವು. ಈ ರಾಜಕೀಯ ಧ್ರುವೀಕರಣವು ಆಡಳಿತದ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುವುದಲ್ಲದೆ, ಜನರಿಗೆ ತೊಂದರೆಯನ್ನುಂಟು ಮಾಡುತ್ತದೆ.

ಇನ್ನು ಈ ಆರ್ಥಿಕ ವಿಷಯಗಳು ಕೇಂದ್ರ ಮತ್ತು ರಾಜ್ಯಗಳ ನಡುವಿನ ಘರ್ಷಣೆಗೆ ಪ್ರಮುಖ ಕಾರಣವಾಗಿವೆ. ರಾಜ್ಯಗಳು ತಮ್ಮ ಆರ್ಥಿಕ ಸ್ವಾತಂತ್ರ್ಯಕ್ಕೆ ಕೇಂದ್ರದಿಂದ ತಡೆಯಾಗುತ್ತಿದೆ ಎಂದು ದೂರುತ್ತವೆ. 2017ರಲ್ಲಿ ಜಿಎಸ್‌ಟಿ ಜಾರಿಯಾದಾಗ, ರಾಜ್ಯಗಳು ತಮ್ಮ ತೆರಿಗೆ ಸಂಗ್ರಹಣೆಯ ಸ್ವಾತಂತ್ರ್ಯವನ್ನು ಕಳೆದುಕೊಂಡವು. ಕೇಂದ್ರವು ಜಿಎಸ್‌ಟಿ ಪರಿಹಾರ ಧನವನ್ನು ಸಕಾಲದಲ್ಲಿ ವಿತರಿಸದಿದ್ದಾಗ, ರಾಜ್ಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವು. ರಾಜ್ಯಗಳಿಗೆ ತಮ್ಮ ಸಂಪನ್ಮೂಲಗಳನ್ನು ಸಂಗ್ರಹಿಸಲು ಮತ್ತು ಖರ್ಚು ಮಾಡಲು ಸೀಮಿತ ಅಧಿಕಾರವಿರುವುದರಿಂದ, ಕೇಂದ್ರದ ಮೇಲೆ ಅವಲಂಬನೆ ಹೆಚ್ಚಾಗಿದೆ, ಇದು ಘರ್ಷಣೆಗೆ ಕಾರಣವಾಗಿದೆ.

ಕೇಂದ್ರವು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸುವ ಕೆಲವು ನೀತಿಗಳು ರಾಜ್ಯಗಳ ಸ್ಥಳೀಯ ಅಗತ್ಯಗಳಿಗೆ ಹೊಂದಿಕೆಯಾಗದಿರುವುದು ಉದಾಹರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಕೆಲವು ಅಂಶಗಳು, ತಮಿಳುನಾಡಿನಂತಹ ರಾಜ್ಯಗಳಲ್ಲಿ, ಭಾಷಾ ನೀತಿಯ ವಿಷಯದಲ್ಲಿ ವಿರೋಧಕ್ಕೆ ಕಾರಣವಾದವು. ಭಾರತದ ಸಾಂಸ್ಕೃತಿಕ, ಆರ್ಥಿಕ, ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೆ ಏಕರೂಪದ ನೀತಿಗಳನ್ನು ಜಾರಿಗೊಳಿಸಲು ಯತ್ನಿಸಿದಾಗ, ರಾಜ್ಯಗಳು ತಮ್ಮ ಸ್ಥಳೀಯ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂದು ವಾದಿಸುತ್ತವೆ.

ಇನ್ನು ಈ ಪ್ರಾಕೃತಿಕ ವಿಪತ್ತುಗಳು, ಆರೋಗ್ಯ ಸಂಕಷ್ಟಗಳು, ಅಥವಾ ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಬ್ಬರನ್ನೊಬ್ಬರು ದೂಷಿಸುವುದು ಸಾಮಾನ್ಯವಾಗಿದೆ. 2020-2021ರಲ್ಲಿ ಕೊರೊನಾ ಸಾಂಕಾಮಿಕ ಸಂದರ್ಭದಲ್ಲಿ, ಆಕ್ಸಿಂಜನ್, ಔಷಧಿಗಳ,ಮತ್ತು  ಲಸಿಕೆಗಳ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಭಿನ್ನಾಭಿಪಾಯಗಳು ಉಂಟಾದವು. ಕೇಂದ್ರವು ಸಂಪನ್ಮೂಲ ವಿತರಣೆಯಲ್ಲಿ ವಿಳಂಬ ಮಾಡಿದ್ದು ಹಲವು ರಾಜ್ಯಗಳಿಗೆ ತೊಂದರೆಯಾಗಿದೆ. ಹಾಗೆಯೇ ಕೇರಳದಂತಹ ರಾಜ್ಯಗಳಲ್ಲಿ ಪ್ರವಾಹ ಸಂದರ್ಭದಲ್ಲಿ, ಕೇಂದ್ರದಿಂದ ಸಕಾಲದಲ್ಲಿ ಧನಸಹಾಯ ಬಾರದಿದ್ದಕ್ಕೆ, ರಾಜಕೀಯ ಆರೋಪ-ಪ್ರತ್ಯಾರೋಪಗಳು ಶುರುವಾಗಿತ್ತು. ಈ ರಾಜಕೀಯೀಕರಣವು ತಕ್ಷಣದ ಸಹಾಯವನ್ನು ತಡೆಯುವುದಲ್ಲದೆ, ಜನರಲ್ಲಿ ಸರ್ಕಾರದ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುತ್ತದೆ.

ರಾಜ್ಯಗಳು ತಮ್ಮ ಸಂವಿಧಾನಾತ್ಮಕ ಸ್ವಾಯತ್ತತೆಯನ್ನು ರಕ್ಷಿಸಿಕೊಳ್ಳಲು ಒತ್ತಾಯಿಸುತ್ತವೆ, ಆದರೆ ಕೇಂದ್ರವು ರಾಷ್ಟ್ರೀಯ ಏಕತೆ ಮತ್ತು ರಾಷ್ಟೀರಯ ಒಗ್ಗಟ್ಟಿನ ಆದ್ಯತೆಯನ್ನು ಒತ್ತಿಹೇಳುತ್ತದೆ. ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯ ರದ್ದತಿಯಂತಹ ನಿರ್ಧಾರಗಳು ಕೇಂದ್ರದ ಕೇಂದ್ರೀಕೃತ ಅಧಿಕಾರವನ್ನು ತೋರಿಸಿದವು. ರಾಜ್ಯ ಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯವಿದ್ದರೂ, ಕೇಂದ್ರದ ಬಹುಮತದಿಂದಾಗಿ ರಾಜ್ಯಗಳ ಧ್ವನಿಯನ್ನು ಕೆಲವೊಮ್ಮೆ ಅಡಗಿಸಲಾಗುತ್ತದೆ.

ಕೇಂದ್ರೀಯ ತನಿಖಾ ಸಂಸ್ಥೆಗಳಾದ CBI, ED, ಮತ್ತು NIAಯಂತಹ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತದೆ. ಕಾನೂನು-ಸುವ್ಯವಸ್ಥೆ ರಾಜ್ಯದ ವಿಷಯವಾದರೂ, ಕೇಂದ್ರದ ಹಸ್ತಕ್ಷೇಪದಿಂದಾಗಿ ರಾಜ್ಯಗಳ ಸ್ವಾಯತತೆಗೆ ಧಕ್ಕೆಯಾಗುತ್ತದೆ.

 ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಮಾಡಬೇಕು ಎಂದು ಕೇಂದ್ರ ತ್ರೀಭಾಷಾ ನೀತಿಯನ್ನು ತಂದಿದೆ. ಇದು ತಮಿಳನಾಡು, ಕರ್ನಾಟಕ, ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ವಿರೋಧಕ್ಕೆ ಕಾರಣವಾಯಿತು. ರಾಜ್ಯಗಳ ಸಂಸ್ಕೃತಿಯನ್ನು ಗಣನೆಗೆ ತೆಗೆದುಕೊಳ್ಳದೆ ಕೇಂದ್ರದಿಂದ ಜಾರಿಗೊಳಿಸಲಾದ ನೀತಿಗಳು, ರಾಜಕೀಯ ಘರ್ಷಣೆಗೆ ಕಾರಣವಾಗಿವೆ.

ಈ ರಾಜಕೀಯ ಕಿತ್ತಾಟದಿಂದಾಗಿ ಜನರಿಗೆ ಸಮಯಕ್ಕೆ ಸರಿಯಾದ ಸೇವೆಗಳು ದೊರಕದಿರುವುದು ಸಾಮಾನ್ಯ. ಜನರು ಸರ್ಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಕೇಂದ್ರ ಮತ್ತು ರಾಜ್ಯಗಳು ಒಬ್ಬರನ್ನೊಬ್ಬರು ದೂಷಿಸುವುದರಿಂದ ಜನರಿಗೆ ಯಾರು ಜವಾಬ್ದಾರರೆಂದು ತಿಳಿಯದಿರುವ ಸ್ಥಿತಿಯುಂಟಾಗುತ್ತದೆ.

ಪರಿಹಾರವೇನು?

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರವನ್ನು ಉತ್ತೇಜಿಸಲು ನೀತಿ ಆಯೋಗ, ಜಿಎಸ್‌ಟಿ ಕೌನ್ಸಿಲ್‌ನಂತಹ ಸಂಸ್ಥೆಗಳನ್ನು ಬಲಪಡಿಸಬೇಕು. 

ಅಧಿಕಾರ ವಿಭಜನೆಯಲ್ಲಿ ಸ್ಪಷ್ಟತೆ ತರಲು ಸಂವಿಧಾನದ ಕೆಲವು ಷರತ್ತುಗಳನ್ನು ಪರಿಷ್ಕರಿಸಬಹುದು. ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ನೀಡಬೇಕು.

ರಾಜಕೀಯ ಪಕ್ಷಗಳು ಜನಪರ ಕೆಲಸಕ್ಕೆ ಆದ್ಯತೆ ನೀಡಬೇಕು. ದುರ್ಘಟನೆಗಳ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಿಂತ ಜನರ ಕ್ಷೇಮಕ್ಕೆ ಒತ್ತು ನೀಡಬೇಕು.

ಜನರಿಗೆ ತಮ್ಮ ಹಕ್ಕುಗಳು ಮತ್ತು ಸರ್ಕಾರದ ಜವಾಬ್ದಾರಿಗಳ ಬಗ್ಗೆ ತಿಳಿವಳಿಕೆ ನೀಡುವುದರಿಂದ ಸರ್ಕಾರವನ್ನು ಜವಾಬ್ದಾರಿಯಿಂದ ಕೆಲಸ ಮಾಡಲು ಒತ್ತಾಯಿಸಬಹುದು.

ಕೇಂದ್ರ-ರಾಜ್ಯ ಭಿನ್ನಾಭಿಪ್ರಾಯಗಳು ಭಾರತದ ಫೆಡರಲ್ ವ್ಯವಸ್ಥೆಯ ಸವಾಲಾಗಿವೆ. ಆದರೆ, ಸಹಕಾರ, ಸಂವಿಧಾನಾತ್ಮಕ ಸುಧಾರಣೆಗಳು, ಮತ್ತು ರಾಜಕೀಯ ಇಚ್ಛಾಶಕ್ತಿಯ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಜನಪರ ಆಡಳಿತವೇ ಭಾರತದ ಪ್ರಜಾಪ್ರಭುತ್ವದ ಶಕ್ತಿಯಾಗಿದ್ದು, ಇದನ್ನು ಎಲ್ಲಾ ಸರ್ಕಾರಗಳು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »