“ಕೆಟ್ಟ ಮಕ್ಕಳಿದ್ದಾರೂ ಕೆಟ್ಟ ತಂದೆ ತಾಯಿಯರು ಇರೊಲ್ಲ. “
“ಕೆಟ್ಟ ತಂದೆ ತಾಯಿಯರು ಇದ್ದಾರೂ, ಕೆಟ್ಟ ಮಕ್ಕಳು ಇರೊಲ್ಲ”
ಒಳ್ಳೆಯದು ಕೆಟ್ಟದ್ದು ಅನ್ನೋದು ಗೆರೆ ಒಡೆದಂತೆ ಇರಲು ಸಾಧ್ಯವಿಲ್ಲ, ಸಮಯ, ಸಂದರ್ಭಗಳು ಈ ಒಳಿತು-ಕೆಡುಕುಗಳನ್ನು ನಿರ್ಧರಿಸುತ್ತವೆ. ಹಾಗಾಗಿ ಎರಡನ್ನೂ ತೀರ್ಪಿನ ದೃಷ್ಟಿಯಲ್ಲಿ ನೋಡದ ಒಳ್ಳೆಯ ಮನಸ್ಸು ಬೇಕು ಅಷ್ಟೇ.
ಶುಕ್ರವಾರ ತೆರೆ ಕಂಡಿರುವ ‘ಎಕ್ಸ್ ಅಂಡ್ ವೈ’ ಚಿತ್ರದ ಮೂಲಕ ನಿರ್ದೇಶಕ ಡಿ ಸತ್ಯಪ್ರಕಾಶ್ ತಮ್ಮ ಎಂದಿನ ಫಿಲಾಸಫಿಯ ಜರ್ನಿಯ ಮೂಲಕ ಹೊಸದೊಂದು ಅನುಭವವನ್ನು ಕಟ್ಟಿಕೊಟ್ಟಿದ್ದಾರೆ. ಫ್ಯಾಂಟಸಿ ಮಾಧ್ಯಮದ ಮೂಲಕ ಕ್ರೋಮೋಸೋಮ್‌ಗಳು, ಏಲಿಯನ್‌ನಂತಹ ವಿಶಿಷ್ಟ ಪಾತ್ರಗಳ ಮೂಲಕ ತಿಳಿಹಾಸ್ಯದ ಲವಲವಿಕೆಯ, ನವೀರಾದ ಕತೆಯನ್ನು ಕನ್ನಡ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.
ಒಂದು ಅಸಾಮಾನ್ಯ ಕಾಲ್ಪನಿಕ ಕಥಾಹಂದರದೊಂದಿಗೆ ಚಿತ್ರ ಆರಂಭವಾಗುತ್ತದೆ. ಒಂದು ಆತ್ಮವು ಮಾನವನಾಗಿ ಜನ್ಮ ತಾಳಲು ಭೂಮಿಗೆ ಬಂದರೆ, ಜಾತಿ ಶ್ರೇಣಿಗಳು, ಕುಟುಂಬ ಸಂಕೀರ್ಣತೆಗಳು ಮತ್ತು ಸಂಬಂಧಗಳ ಒಡಕುಗಳನ್ನು ಕಂಡು ತನ್ನ ನಿರ್ಧಾರವನ್ನು ಪುನರ್ವಿಮರ್ಶಿಸುತ್ತದೆ. ನಾಲ್ಕು ದಿನಗಳಲ್ಲಿ ಭೂಮಿಯ ಜೀವನದ ಕಹಿ-ಸಿಹಿಯನ್ನು ಅರಿತ ಆ ಆತ್ಮವು, ಮಾನವನಾಗಿ ಹುಟ್ಟುವ ಬದಲು ಹೂವಾಗಿ ಹುಟ್ಟುವ ಆಯ್ಕೆಯನ್ನು ಮಾಡಿಕೊಳ್ಳುತ್ತದೆ. ಈ ಕಥಾವಸ್ತುವು ಜಾತೀಯತೆ, ಸಂಬಂಧಗಳ ನಡುವಿನ ಸಂಕೀರ್ಣತೆಯನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಈ ಚಿತ್ರದಲ್ಲಿ ತಂದೆ-ತಾಯಿಯನ್ನ ಮಕ್ಕಳು ವೃದ್ಧಾಶೃಮಕ್ಕೆ ಬಿಟ್ಟರೆ, ಮಕ್ಕಳನ್ನ ಪೋಷಕರು ಅನಾಥಾಶ್ರಮದಲ್ಲಿ ಬಿಟ್ಟುಹೋಗುವಂತಹ ಸಾಮಾಜಿಕ ಸಮಸ್ಯೆಗಳನ್ನು ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿದ್ದಾರೆ.
ಇದನ್ನೂ ಓದಿ| ಸತ್ಯ ಪ್ರಕಾಶ್ ನಿರ್ದೇಶನದ ʻಎಕ್ಸ್ ಅಂಡ್ ವೈʼ; ಕನ್ನಡ ಚಿತ್ರರಂಗಕ್ಕೆ ಬೇಕಿದ್ದ ಹೊಚ್ಚ ಹೊಸ ತಂಗಾಳಿ
ಈ ಚಿತ್ರದ ಮೂಲಕ ನಿರ್ದೇಶಕ ಸತ್ಯ ನಟರೂ ಆಗಿದ್ದಾರೆ. ಕ್ರೀಡಾಪಟು ಎಂಬ ವಿಚಿತ್ರದ ಹೆಸರಿನ ಮೂಲಕ ಆಟೋ ಆಂಬುಲೆನ್ಸ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸತ್ಯ ಇಡೀ ಚಿತ್ರದ ಸೂತ್ರಧಾರ. ಸದಾ ಒಳಿತನ್ನೇ ಬಯಸುವ ಗಾಯಗೊಂಡವರಷ್ಟೇ ಎಮರ್ಜೆನ್ಸಿಯಲ್ಲಿರುವುದಿಲ್ಲ, ಎಲ್ಲ ರೀತಿಯ ಸಂಕಷ್ಟದಲ್ಲಿರುವವರೂ ಎಮರ್ಜೆನ್ಸಿಯಲ್ಲಿರುತ್ತಾರೆ, ಅವರಿಗೆ ತನ್ನಿಂದಾಗುವ ಸಹಾಯ ಮಾಡಬೇಕೆನ್ನುವ ಮನೋಭಾವದವ ಈ ಪಾತ್ರದ ಚಿತ್ರವನ್ನು ಲವಲವಿಕೆಯಿಂದ ಕರೆದೊಯ್ಯುತ್ತದೆ.
ಸತ್ಯಪ್ರಕಾಶ್‌ರವರ ನೈಜ ನಟನೆಯು ಈ ಪಾತ್ರಕ್ಕೆ ಜೀವ ತುಂಬಿದ್ದು, ಪ್ರೇಕ್ಷಕರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ರೂಪಿಸುತ್ತದೆ.ಕ್ರೀಡೆಯ ಪಾತ್ರವು ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಅತರ್ವ ಪ್ರಕಾಶ್‌ರವರ ಬುದ್ಧಿಮಾಂದ್ಯದ ವ್ಯಕ್ತಿಯ ಪಾತ್ರವು ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಬೃಂದಾ ಆಚಾರ್ಯರ ಕೃಪಾಳ ಪಾತ್ರವು ಸೊಗಸಾಗಿ ಮೂಡಿಬಂದಿದೆ. ಇನ್ನುಳಿದಂತೆ, ಹರಿಣಿ, ಸುಂದರ್ ವೀಣ, ವೀಣಾ ಸುಂದರ್, ದೊಡ್ಡಣ್ಣ, ಮತ್ತು ಆಯನ್‌ರವರಂತಹ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರದ ಛಾಯಾಗ್ರಹಣ (ಲವಿತ್), ಸಂಗೀತ (ಕೌಶಿಕ್ ಹರ್ಷ), ಮತ್ತು ಸಂಕಲನ (ಬಿಎಸ್ ಕೆಂಪರಾಜು) ಕಥೆಗೆ ಸೊಗಸಾದ ಚೌಕಟ್ಟನ್ನು ಒದಗಿಸುತ್ತವೆ. ಬೆಂಗಳೂರು ಮತ್ತು ಮಂಗಳೂರಿನ ದೃಶ್ಯಗಳನ್ನು ಛಾಯಾಗ್ರಹಣವು ಸುಂದರವಾಗಿ ಸೆರೆಹಿಡಿದಿದೆ. ಸಂಗೀತವು ಕಥೆಯ ಲಘು ಮತ್ತು ಗಂಭೀರ ಕ್ಷಣಗಳಿಗೆ ಸರಿಹೊಂದುತ್ತದೆ. ಚಿತ್ರದ ಈ ತಾಂತ್ರಿಕ ಅಂಶಗಳು ಕಥೆಗೆ ಶಕ್ತಿಯನ್ನು ತುಂಬಿವೆ.
X & Y ಒಂದು ಸಂದೇಶಪೂರ್ಣ ಮನರಂಜನೆಯ ಚಿತ್ರವಾಗಿದೆ. ಜಾತೀಯತೆ, ಕುಟುಂಬ ಸಂಬಂಧಗಳು, ಮತ್ತು ವೈಯಕ್ತಿಕ ಆಕಾಂಕ್ಷೆಗಳನ್ನು ಕಾಲ್ಪನಿಕ ಚೌಕಟ್ಟಿನಲ್ಲಿ ಚಿತ್ರಿಸುವ ಈ ಚಿತ್ರವು, ಲಘು ಹಾಸ್ಯದ ಮೂಲಕ ಗಂಭೀರ ವಿಷಯಗಳನ್ನು ಪ್ರಸ್ತುತಪಡಿಸುತ್ತದೆ. ಡಿ. ಸತ್ಯಪ್ರಕಾಶ್‌ರವರ ನಿರ್ದೇಶನ ಮತ್ತು ನಟನೆಯು ಕನ್ನಡ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿದೆ.
X & Y ಜೀವನದ ಮೌಲ್ಯವನ್ನು ಅರಿವು ಮೂಡಿಸುವ, ಎಲ್ಲ ವಯಸ್ಸಿನವರಿಗೂ ಆಕರ್ಷಕವಾಗಿರುವ ಚಿತ್ರವಾಗಿದೆ. ಕಾಲ್ಪನಿಕ ಕಥಾಹಂದರ, ಲಘು ಹಾಸ್ಯ, ಮತ್ತು ಭಾವನಾತ್ಮಕ ಕ್ಷಣಗಳ ಮಿಶ್ರಣದೊಂದಿಗೆ, ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ಹೊಸ ದಾರಿಯನ್ನು ತೋರಿಸುತ್ತದೆ. ಎಲ್ಲರೂ ಚಿತ್ರಮಂದಿರದಲ್ಲಿ ನೋಡಲೇಬೇಕಾದ ಚಿತ್ರವಿದು.







