ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನೌಷಧಿ ಕೇಂದ್ರಗಳನ್ನು ನಿಷೇಧಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2025ರ ಮೇ 14ರಂದು ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಆದೇಶವು ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಔಷಧ ಒದಗಿಸುವ ಕೇಂದ್ರಗಳ ಮುಂದುವರಿಕೆಗೆ ದಾರಿ ಮಾಡಿಕೊಟ್ಟಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತುಗಾಂವ್ ಹಲಸಿ ನಿವಾಸಿ ಶ್ರೀಕಾಂತ ಅನಂತಾಚಾರ್ಯ ಜೋಶಿ ಸೇರಿದಂತೆ 16 ಜನೌಷಧಿ ಕೇಂದ್ರಗಳ ಮಾಲೀಕರು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕಲಬುರಗಿಯ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ಏಕಸದಸ್ಯ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿ, ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಆದೇಶಕ್ಕೆ ತಡೆ ನೀಡಿತು. ವಿಚಾರಣೆಯಲ್ಲಿ ಅರ್ಜಿದಾರರ ಪರವಾಗಿ ವಕೀಲ ಅನಿರುದ್ಧ ಎ.ಕುಲಕರ್ಣಿ ವಾದ ಮಂಡಿಸಿದರು. “ಸರ್ಕಾರದ ಆದೇಶ ಏಕಪಕ್ಷೀಯವಾಗಿದ್ದು, ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯಲ್ಲಿ ಜೀವನೋಪಾಯದ ಹಕ್ಕಿನ ಉಲ್ಲಂಘನೆಯಾಗಿದೆ,” ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.
ನ್ಯಾಯಪೀಠವು ಅರ್ಜಿದಾರರ ವಾದವನ್ನು ಮಾನ್ಯ ಮಾಡಿ, ಜನೌಷಧಿ ಕೇಂದ್ರಗಳನ್ನು ಪ್ರತಿಬಂಧಿಸದಂತೆ ಆದೇಶಿಸಿತು. ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಸರ್ಕಾರದ ವೈದ್ಯಕೀಯ ಮತ್ತು ಔಷಧೀಯ ಬ್ಯೂರೊದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.
ಜನೌಷಧಿ ಕೇಂದ್ರಗಳು ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಭಾಗವಾಗಿವೆ. ಈ ಕೇಂದ್ರಗಳು ಶೇ.50ರಿಂದ 90ರಷ್ಟು ರಿಯಾಯಿತಿಯಲ್ಲಿ ಗುಣಮಟ್ಟದ ಜನರಿಕ್ ಔಷಧಗಳನ್ನು ಮಾರಾಟ ಮಾಡುತ್ತವೆ. ಬಡತನ ರೇಖೆಗಿಂತ ಕೆಳಗಿರುವವರು, ಹಿರಿಯ ನಾಗರಿಕರು, ದಿನಗೂಲಿ ಕಾರ್ಮಿಕರು, ದೀರ್ಘಕಾಲದ ರೋಗಗಳಿಂದ ಬಳಲುವವರಿಗೆ ಈ ಕೇಂದ್ರಗಳು ದೊಡ್ಡ ನೆರವಾಗಿವೆ. “ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವುದು ಸಾರ್ವಜನಿಕ ಆರೋಗ್ಯದ ಹಕ್ಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ,” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ. “ಈ ತೀರ್ಪು ರಾಜ್ಯ ಸರ್ಕಾರದ ಜನವಿರೋಧಿ ನೀತಿಗೆ ತಕ್ಕ ಉತ್ತರವಾಗಿದೆ,” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ರಾಜ್ಯ ಸರ್ಕಾರದ ಆದೇಶವು ಜನೌಷಧಿ ಕೇಂದ್ರಗಳ ಹಂಚಿಕೆಯನ್ನು ಸ್ಥಗಿತಗೊಳಿಸುವುದರ ಜೊತೆಗೆ, ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಹೊರಗಿನಿಂದ ಔಷಧ ಖರೀದಿಸಲು ಶಿಫಾರಸು ಮಾಡದಂತೆ ಸೂಚಿಸಿತ್ತು. ಆದರೆ, ಈ ಕೇಂದ್ರಗಳು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದ್ದು, ಬಡವರಿಗೆ ಕೈಗೆಟಕುವ ಆರೋಗ್ಯ ಸೇವೆ ಒದಗಿಸುವ ಗುರಿಯನ್ನು ಹೊಂದಿವೆ.







