ಐದು ವರ್ಷದ ಪ್ರೀತಿಯಲ್ಲಿ ಅವರು ಪರಸ್ಪರರನ್ನು ಅರಿತಿರಲಿಲ್ಲವೇ? ಸಿನಿಮಾ ಮುಗಿದ ನಂತರ ಪ್ರೇಕ್ಷಕರಿಗೆ ಇದಕ್ಕೆ ಉತ್ತರ ಸಿಗುತ್ತದೆ! ಸಾಂಗತ್ಯದಲ್ಲಿನ ಗೊಂದಲಗಳು, ಅವುಗಳಿಗೆ ಕಂಡುಕೊಳ್ಳಬಹುದಾದ ಪರಿಹಾರಗಳನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನ ನಡೆಸಿದ್ದಾರೆ ನಿರ್ದೇಶಕ ಮಂಸೋರೆ. ಒಂದೊಳ್ಳೆಯ ಅನುಭವಕ್ಕಾಗಿ ‘ದೂರ ತೀರ ಯಾನ’ಕ್ಕೆ ಹೋಗಿಬನ್ನಿ…
ಆರಂಭವೇ ತೋರಿದೆ ಮುಂದಿನ ದಾರಿ… ನೀಲಾಕಾಶವ ಅರಿತುಕೋ ನೀ ಸಂಚಾರಿ… – ‘ದೂರ ತೀರ ಯಾನ’ ಸಿನಿಮಾದ ಶೀರ್ಷಿಕೆ ಹಾಡಿನ ಪಲ್ಲವಿಯ ಸಾಲುಗಳಿವು. ಮದುವೆಯಾಗುವ ತೀರ್ಮಾನಕ್ಕೆ ಮುನ್ನ ಯುವಪ್ರೇಮಿಗಳಾದ ಆಕಾಶ ಮತ್ತು ಭೂಮಿ ಒಬ್ಬರಿಗೊಬ್ಬರು ಅರಿಯಬೇಕಿರುತ್ತದೆ. ಅವರು ಪ್ರವಾಸ ಹೊರಡುತ್ತಾರೆ. ನಿಸರ್ಗದ ಮಧ್ಯೆಯ ಪಯಣ ಅವರಿಗೆ ಬದುಕಿನ ಒಳನೋಟ ನೀಡುತ್ತದೆ. ಮಾರ್ಗ ಮಧ್ಯದಲ್ಲಿ ಹಲವರನ್ನು ಎದುರುಗೊಳ್ಳುತ್ತಾರೆ. ಇಲ್ಲಿ ಜೀವನಾನುಭವದ lessons ಸಿಗುತ್ತವೆ. ಈ ಅರಿವಿನ ಪ್ರಯಾಣವೇ ಸಿನಿಮಾ. ಹಾಗಾದರೆ, ಐದು ವರ್ಷದ ಪ್ರೀತಿಯಲ್ಲಿ ಅವರು ಪರಸ್ಪರರನ್ನು ಅರಿತಿರಲಿಲ್ಲವೇ? ಸಿನಿಮಾ ಮುಗಿದ ನಂತರ ಪ್ರೇಕ್ಷಕರಿಗೆ ಇದಕ್ಕೆ ಉತ್ತರ ಸಿಗುತ್ತದೆ! ಸಾಂಗತ್ಯದಲ್ಲಿನ ಗೊಂದಲಗಳು, ಅವುಗಳಿಗೆ ಕಂಡುಕೊಳ್ಳಬಹುದಾದ ಪರಿಹಾರಗಳನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನ ನಡೆಸಿದ್ದಾರೆ ನಿರ್ದೇಶಕ ಮಂಸೋರೆ.

ಹಾಗೆ ನೋಡಿದರೆ ಸಿನಿಮಾದ ಕತೆಯ ಎಳೆ ಚಿಕ್ಕದು. ಸೂಕ್ಷ್ಮವಾದ ವಿಷಯವನ್ನು ಅಚ್ಚುಕಟ್ಟಾಗಿ ಚಿತ್ರಕಥೆ ಮಾಡಿಕೊಂಡಿದ್ದಾರೆ ಮಂಸೋರೆ. ಪ್ರಮುಖವಾಗಿ ಸಂಗೀತದ ಹಿನ್ನೆಲೆಯಲ್ಲಿ ಕತೆ ದಾಟಿಸುವ ಪ್ರಯತ್ನವಿದೆ. ನಿಸರ್ಗವೂ ಒಂದು ಪಾತ್ರವಾಗಿದ್ದು, ಛಾಯಾಗ್ರಹಣಕ್ಕೆ ಹೆಚ್ಚು ಸ್ಕೋಪ್ ಇದೆ. ತಂತ್ರಜ್ಞರನ್ನು ಚೆನ್ನಾಗಿ ದುಡಿಸಿಕೊಂಡಿರುವ ಅವರಿಗೆ ಕಲಾವಿದರಿಂದಲೂ ಸೂಕ್ತ ಬೆಂಬಲ ಸಿಕ್ಕಿದೆ. ಹಾಗಾಗಿ ಪುಟ್ಟ ಕತೆಯನ್ನು ಯಾವ ಹಂತದಲ್ಲಿಯೂ ಪ್ರೇಕ್ಷಕರಿಗೆ ಬೇಸರಗೊಳಿಸದಂತೆ ಹೇಳಿದ್ದಾರೆ. ಅವರ ಈ ಹಿಂದಿನ ನಾಲ್ಕು ಪ್ರಯೋಗಗಳಲ್ಲಿ ಸಿನಿಮಾದ ಕಂಟೆಂಟೇ ಪ್ರಧಾನವಾಗಿತ್ತು. ಈ ಬಾರಿ ಪ್ರೇಕ್ಷಕರಿಗೆ ಥಿಯೇಟರ್ ಎಕ್ಸ್‌ಪೀರಿಯನ್ಸ್ ಕೂಡ ನೀಡಲು ಪ್ರಯತ್ನಿಸಿದ್ದಾರೆ. ನಿರೂಪಣೆಯ ಜೊತೆಗೆ ವಿಶ್ಯುಯಲೈಜೇಷನ್ ಕೂಡ ಗಮನ ಸೆಳೆಯುತ್ತದೆ.
‘ಪ್ರೇಮಕತೆಗಳಿಗೆ ಕೊನೆಯಿಲ್ಲ’ ಎನ್ನುವಂತೆ ‘ದೂರ ತೀರ ಯಾನ’ ಸಿನಿಮಾ ಕೂಡ ನೂತನ ಹೊಳಹುಗಳೊಂದಿಗೆ ತಯಾರಾಗಿದೆ. ತಾಜಾತನದ ನಿರೂಪಣೆಯೊಂದಿಗೆ ನಿರ್ದೇಶಕರು ಚಿತ್ರವನ್ನು ಆಪ್ತವಾಗಿ ಕಟ್ಟಿದ್ದಾರೆ. ರೊನಡ ಬಕ್ಕೇಶ್ ಮತ್ತು ಅವರ ತಂಡದವರ ಸಂಗೀತ ಚಿತ್ರಕ್ಕೆ ಅಗತ್ಯವಿದ್ದ ಭೂಮಿಕೆ ಒದಗಿಸಿದೆ. ಕವಿರಾಜ್, ಪ್ರಮೋದ್ ಮರವಂತೆ, ಗೌಸ್ ಪೀರ್, ಕಿರಣ್ ಕಾವೇರಪ್ಪ ಅವರು ಕತೆಗೆ ಅಗತ್ಯವಿದ್ದ ಸಂದರ್ಭಕ್ಕೆ ಸೂಕ್ತವಾಗಿ ಹೊಂದುವಂತಹ ಅರ್ಥಪೂರ್ಣ ಗೀತೆಗಳನ್ನು ರಚಿಸಿದ್ದಾರೆ. ಛಾಯಾಗ್ರಾಹಕ ಶೇಖರ್ ಚಂದ್ರ ಅವರು ಕಡಲು, ಅಡವಿಯನ್ನು ಆಕರ್ಷಕವಾಗಿ ಸೆರೆಹಿಡಿದು ಪ್ರೇಕ್ಷಕರಿಗೆ ದಾಟಿಸಿದ್ದಾರೆ. ಲೇಖಕಿ ಚೇತನಾ ತೀರ್ಥಹಳ್ಳಿ ಅವರ ಸಂಭಾಷಣೆ ಚಿತ್ರದ ತೂಕ ಹೆಚ್ಚಿಸಿದೆ. ಮುಖ್ಯ ಪಾತ್ರಗಳಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ಅವರದ್ದು matured ಮತ್ತು ಲವಲವಿಕೆಯ ಅಭಿನಯ. ಮಾರ್ಗಮಧ್ಯೆ ಪ್ರೇಮಿಗಳಿಗೆ ಅಚಾನಕ್ಕಾಗಿ ಎದುರುಗೊಳ್ಳುವ ಪಾತ್ರಗಳು ಹಾಗೂ ಪಾತ್ರಗಳನ್ನು ನಿರ್ವಹಿಸಿರುವ ನಟ – ನಟಿಯರ ಆಯ್ಕೆಯೂ ಚೆನ್ನಾಗಿದೆ. ಸದಭಿರುಚಿಯ ಕತೆ ಮತ್ತು ತಂಡದ ಬೆಂಬಲಕ್ಕೆ ನಿಂತ ನಿರ್ಮಾಪಕ ದೇವರಾಜ್ ಆರ್ ಅಭಿನಂದನಾರ್ಹರು. ಒಂದೊಳ್ಳೆಯ ಅನುಭವಕ್ಕಾಗಿ ‘ದೂರ ತೀರ ಯಾನ’ಕ್ಕೆ ಹೋಗಿಬನ್ನಿ…







