‘ನಾನು ನಮ್ಮ ಹಳ್ಳಿಗೆ ಮರಳಬೇಕು. ಗೆಳೆಯರೊಂದಿಗೆ ಊರು ಸುತ್ತುತ್ತಾ ಆರಾಮಾಗಿರರ್ಬೇಕು. ನೆಮ್ಮದಿಯಾಗಿ ಕಣ್ತುಂಬ ನಿದ್ದೆ ಮಾಡ್ಬೇಕು…’ ಎಂದು ಹೇಳುತ್ತಿರುತ್ತಾನೆ ಚಿತ್ರದ ಕಥಾನಾಯಕ ಮುತ್ತು. ಯಾರಿಗೋ ನೆರವಾಗಲು ಹೋಗಿ ತೊಂದರೆಗೆ ಸಿಲುಕಿ ಹಣ ಹೊಂದಿಸಲು ಆತ ಬೆಂಗಳೂರು ಸೇರಿರುತ್ತಾನೆ. ಮಹಾನಗರಿಯಲ್ಲಿ ಅವನ ಬದುಕಿನಲ್ಲಿ ಹಲವು ತಿರುವುಗಳು ಎದುರಾಗುತ್ತವೆ. ಬದಲಾಗಲೇಬೇಕಾದ ಅನಿವಾರ್ಯತೆ ಆತನದ್ದು. ಈ ಮಧ್ಯೆ ಆಗಾಗ ಅವನಿಗೆ ತನ್ನೂರು, ಅಮ್ಮ ಕಾಡುತ್ತಿರುತ್ತಾರೆ. ಹುಟ್ಟೂರಿನ ನೆನಪುಗಳೊಂದಿಗೇ ಸಾಗುವ ಅವನು ಕೊನೆಗೊಂದು ದಿನ ಮನೆ ಸೇರುತ್ತಾನೆ. ಆದರೆ ಆಗ ಪರಿಸ್ಥಿತಿಗಳು ಸಂಪೂರ್ಣ ಬದಲಾಗಿರುತ್ತವೆ. ನಿರ್ದೇಶಕ ರೋಹಿತ್ ಪದಕಿ ನಾಯಕನ ತವರಿನ ಕನವರಿಕೆಗಳ ಜೊತೆ ಮಾಫಿಯಾ ಜಗತ್ತನ್ನು ಚಿತ್ರದಲ್ಲಿ ಹೇಳುತ್ತಾ ಹೋಗಿದ್ದಾರೆ.
‘ಯುವ’ ಸಿನಿಮಾದೊಂದಿಗೆ ಚಿತ್ರರಂಗಕ್ಕೆ ಪರಿಚಯವಾದವರು ಯುವ ರಾಜಕುಮಾರ್. ಅಲ್ಲಿ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಇಮೇಜು ಇತ್ತು. ಈ ಚಿತ್ರದ ದ್ವಿತಿಯಾರ್ಧದಲ್ಲೂ ಅವರ ಪಾತ್ರಪೋಷಣೆ ಹೀಗೇ ಇದೆ. ರೋಹಿತ್ ಪದಕಿ ಅವರ ಈ ಚಿತ್ರವನ್ನು ಯಾವುದೇ ನಿರ್ಧಿಷ್ಟ ಜಾನರ್‌ಗೆ ಸೀಮಿತಗೊಳಿಸಲಾಗದು. ನಿರ್ದೇಶಕ ರೋಹಿತ್ ಪದಕಿ ವೃತ್ತಿ ಬದುಕಿನಲ್ಲೂ ಇದೊಂದು ಹೊಸ ಪ್ರಯೋಗ. ಚಿತ್ರದ ಮೊದಲಾರ್ಧ ಎಂಗೇಜಿಂಗ್ ಆಗಿದ್ದು, ಫ್ಯಾಮಿಲಿ ಸೆಂಟಿಮಂಟ್, ಎಮೋಷನ್ಸ್‌ಗೆ ಹೆಚ್ಚು ಸ್ಕೋಪ್ ಇದೆ. ಫಸ್ಟ್ ಹಾಫ್ ಬಿಗಿಯಾಗಿ ಕಟ್ಟಿರುವ ನಿರ್ದೇಶಕರು ದ್ವಿತಿಯಾರ್ಧದಲ್ಲಿ ಕೊಂಚ ಹಿಡಿತ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ | ಫಸ್ಟ್ ಶೋ| ನೀಲಾಕಾಶವ ಅರಿತುಕೋ ನೀ ಸಂಚಾರಿ…
ರಿಲೀಸ್‌ಗೂ ಮುನ್ನ ಚಿತ್ರದ ಎರಡು ಹಾಡುಗಳು ಕ್ಲಿಕ್ಕಾಗಿದ್ದವು. ಇದು ಚಿತ್ರಕ್ಕೆ ದೊಡ್ಡ Invitation ಆಯ್ತು. ಈ ಎರಡು ಹಾಡುಗಳ ಜೊತೆ ಚಿತ್ರದಲ್ಲಿನ ಇತರೆ ಹಾಡುಗಳ ಸಾಹಿತ್ಯ, ಸಂಗೀತವೂ ಚೆನ್ನಾಗಿದೆ. ಸಂಗೀತ ಸಂಯೋಜಕ ಚರಣ್ ರಾಜ್ ಗೀತ ಸಂಗೀತದ ಜೊತೆ ಹಿನ್ನೆಲೆ ಸಂಗೀತದಲ್ಲೂ ಸದ್ದು ಮಾಡಿದ್ದಾರೆ. ಚಿತ್ರದ ಓಘಕ್ಕೆ ಅವರ BGM ಸಾಥ್ ಕೊಟ್ಟಿದೆ. ವಾರಣಾಸಿ ಹಾಗೂ ನಗರದ ಕಿರು ಗಲ್ಲಿಗಳನ್ನು ಛಾಯಾಗ್ರಾಹಕ ಸತ್ಯ ಹೆಗ್ಡೆ ಚೆನ್ನಾಗಿ ಸೆರೆಹಿಡಿದಿದ್ದಾರೆ. ಹೀರೋ ಯುವ ಅವರಿಗೆ ಎರಡು ಗೆಟಪ್‌ಗಳಿದ್ದು, ಪಾತ್ರವನ್ನು ಅರಿತು ನಟಿಸಿದ್ದಾರೆ. ನಾಯಕಿಯರಾದ ಸಂಪದಾ ಮತ್ತು ಸಂಜನಾ ಆನಂದ್ ಅವರ ಪಾತ್ರಗಳನ್ನು ಇನ್ನಷ್ಟು ಬಲಪಡಿಸಬೇಕಿತ್ತು. ಸಿಕ್ಕ ಅವಕಾಶವನ್ನು ಅವರು ಚೆನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ಇದೇ ಮಾತು ನಟ ಆದಿತ್ಯ ಅವರಿಗೂ ಅನ್ವಯಿಸುತ್ತದೆ. ಕೆಲವು ಮಿತಿಗಳಿದ್ದಾಗ್ಯೂ ‘ಎಕ್ಕ’, ಪ್ರೇಕ್ಷಕರನ್ನು ರಂಜಿಸುತ್ತದೆ.







