ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 10, 2025ರಂದು ಈ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಘೋಷಿಸಿದ್ದಾರೆ.
ಈ 19.15 ಕಿಮೀ ಉದ್ದದ ಹಳದಿ ಮಾರ್ಗವು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ವಿಸ್ತರಿಸಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದೆ. 5,056.99 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಈ ಮಾರ್ಗವು ಸುಮಾರು 8 ಲಕ್ಷ ಪ್ರಯಾಣಿಕರಿಗೆ ಸೌಲಭ್ಯವನ್ನು ಒದಗಿಸಲಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್, ಹೊಸೂರು ರಸ್ತೆ, ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಜಂಕ್ಷನ್‌ನಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಈ ಉದ್ಘಾಟನೆಯ ಜೊತೆಗೆ, 15,611 ಕೋಟಿ ರೂಪಾಯಿ ವೆಚ್ಚದಲ್ಲಿ 44.65 ಕಿಮೀ ಉದ್ದದ ಮೆಟ್ರೋ ಹಂತ-3 (ಆರೆಂಜ್ ಲೈನ್) ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಮಾರ್ಗದ ಉದ್ಘಾಟನೆಯು ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರವನ್ನು ಒದಗಿಸಲಿದೆ ಎಂದು ತೇಜಸ್ವಿ ಸೂರ್ಯ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಏಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸೂರ್ಯ, “ಪ್ರಧಾನಿ ಶ್ರೀ ನರೇಂದ್ರ ಮೋದಿ ಆಗಸ್ಟ್ 10ರಂದು ಪ್ರಮುಖ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಜನರ ಪರವಾಗಿ, ನಮ್ಮ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಯಾವಾಗಲೂ ಆದ್ಯತೆ ನೀಡಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು,” ಎಂದಿದ್ದಾರೆ.
ಹಳದಿ ಮಾರ್ಗವು ಆರ್‌ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಸ ರಸ್ತೆ, ಕುಡ್ಲು ಗೇಟ್, ಮತ್ತು ಹೆಬ್ಬಗೋಡಿಯಂತಹ 16 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗವು ಸಂಪೂರ್ಣವಾಗಿ ಎಲಿವೇಟೆಡ್ ಆಗಿದ್ದು, ರಾಗಿಗುಡ್ಡ-ಸಿಲ್ಕ್ ಬೋರ್ಡ್ ಫ್ಲೈಓವರ್‌ನ ಜೊತೆಗೆ ರೈಲ್-ಕಮ್-ರೋಡ್ ಫ್ಲೈಓವರ್ ಆಗಿ ನಿರ್ಮಾಣವಾಗಿದೆ.
ಇದನ್ನೂ ಓದಿ | ನಮ್ಮ ಮೆಟ್ರೋ ಹಳದಿ ಮಾರ್ಗ: ಸುರಕ್ಷತಾ ಗ್ರೀನ್ ಸಿಗ್ನಲ್
ಆರಂಭದಲ್ಲಿ, ಮೂರು ಚಾಲಕರಹಿತ ರೈಲುಗಳು ಪ್ರತಿ 25 ನಿಮಿಷಗಳಿಗೊಮ್ಮೆ ಸಂಚರಿಸಲಿದ್ದು, ದಿನಕ್ಕೆ ಸುಮಾರು 25,000 ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿವೆ. 2026ರ ವೇಳೆಗೆ 15 ರೈಲುಗಳೊಂದಿಗೆ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭವಾಗಲಿದ್ದು, ದೈನಂದಿನ ಪ್ರಯಾಣಿಕರ ಸಂಖ್ಯೆ 2 ಲಕ್ಷಕ್ಕೆ ಏರಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ (BMRCL) ಅಂದಾಜಿಸಿದೆ. ಈ ಯೋಜನೆಗೆ ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಖಾಸಗಿ ಸಂಸ್ಥೆಗಳು ಕ್ರಮವಾಗಿ 115 ಕೋಟಿ ರೂಪಾಯಿ ಮತ್ತು 100 ಕೋಟಿ ರೂಪಾಯಿಗಳ ಕೊಡುಗೆ ನೀಡಿವೆ.







