ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಒಮ್ಮೆಗೇ ಸುದ್ದಿಯಾದ ಸಿನಿಮಾ ‘ಕೊತ್ತಲವಾಡಿ’. ನಟ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಪ್ರಾಜೆಕ್ಟ್ ಎನ್ನುವ ಕಾರಣಕ್ಕೂ ಇದು ಸುದ್ದಿಯಾಗಿತ್ತು. ಜೈರಾಜ್ ಚೊಚ್ಚಲ ನಿರ್ದೇಶನದ ಸಿನಿಮಾ ಮರಳು ಮಾಫಿಯಾ ಸುತ್ತ ಹೆಣೆದ ಕತೆ. ಹಾಗೆ ನೋಡಿದರೆ ಮರಳು ಮಾಫಿಯಾ ಕುರಿತ ಕತೆಗಳು ಕನ್ನಡದಲ್ಲಿ ಸಾಕಷ್ಟು ಬಂದಿವೆ. ಆದರೆ ಮರಳು ಮಾಫಿಯಾವನ್ನೇ ಕೇಂದ್ರಬಿಂದುವಾಗಿಸಿಕೊಂಡು ಮಾಡಿರುವ ಸಿನಿಮಾಗಳು ವಿರಳ. ಆ ನಿಟ್ಟಿನಲ್ಲಿ ‘ಕೊತ್ತಲವಾಡಿ’ ಗಮನ ಸೆಳೆಯುತ್ತದೆ. ನಿರ್ದೇಶಕ ಜೈರಾಜ್ ಕೂಡ ಮರಳು ಮಾಫಿಯಾ ಆಳ – ಅಗಲವನ್ನು ಸಾಕಷ್ಟು ಅಧ್ಯಯನ ಮಾಡಿ ಸಿನಿಮಾ ಮಾಡಿದ್ದಾರೆ. ಜೊತೆಗೆ ಪ್ರೀತಿಯ ಎಳೆ, ಗ್ರಾಮೀಣ ಬದುಕನ್ನೂ ಬೆರೆಸಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಚಿತ್ರವೊಂದಲ್ಲಿ ಹೀರೋಯಿಸಂನಿಂದಾಚೆಗೆ ಪಾತ್ರಗಳನ್ನು ಕಟ್ಟಿ ಬೆಳೆಸುವುದು ಸವಾಲು. ಚಿತ್ರದಲ್ಲಿ ನಿರ್ದೇಶಕರು ಸವಾಲಿಗೆ ಒಡ್ಡಿಕೊಂಡಿದ್ದಾರೆ. ನಾಯಕನಟ ಪೃಥ್ವಿ ಅಂಬರ್ ಜೊತೆಗೆ ನಟರಾದ ಗೋಪಾಲಕೃಷ್ಣ ದೇಶಪಾಂಡೆ ಮತ್ತು ರಾಜೇಶ್ ನಟರಂಗ ಅವರ ಪಾತ್ರಗಳೂ ಚಿತ್ರದಲ್ಲಿ ಮಿಂಚುತ್ತವೆ. ಇತ್ತೀಚಿನ ದಿನಗಳಲ್ಲಿ ವಿಶಿಷ್ಟ ಪಾತ್ರಗಳಲ್ಲಿ ನಟಿಸುತ್ತಿರುವ ಗೋಪಾಲಕೃಷ್ಣ ದೇಶಪಾಂಡೆ ಈ ಚಿತ್ರದಲ್ಲಿನ ‘ಗುಜರಿ ಬಾಬು’ ಪಾತ್ರವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಹಣ, ಸವಲತ್ತು ಇಲ್ಲದಾಗಿನ ಒಳ್ಳೆಯತನ, ಅಧಿಕಾರ ಸಿಕ್ಕನಂತರ ಬಯಲಾಗುವ ಒಳಮನಸ್ಸು, ಅಧಿಕಾರಕ್ಕಾಗಿ ನಡೆಸುವ ಹಪಾಹಪಿ, ಅಧಿಕಾರ ಕೈತಪ್ಪಿದಾಗಿನ ಸಂಕಟ… ಹೀಗೆ ಅವರ ಪಾತ್ರಕ್ಕಿಲ್ಲಿ ಸಾಕಷ್ಟು ಮುಖಗಳಿವೆ. ಅವರು ಕೂಡ ಪಾತ್ರವನ್ನು ಅರಿತು ಅಭಿನಯಿಸಿ ಗೆದ್ದಿದ್ದಾರೆ. ಮತ್ತೊಂದೆಡೆ ನಟ ರಾಜೇಶ್ ನಟರಂಗ ಹೆಚ್ಚು ಮಾತಿಲ್ಲದ ಮತ್ತು ತೂಕದ ಸಂಭಾಷಣೆಗಳ ಪಾತ್ರದಲ್ಲಿ ಇಷ್ಟವಾಗುತ್ತಾರೆ.
ಇದನ್ನೂ ಓದಿ | ಫಸ್ಟ್ ಶೋ | ಇದು ಪ್ರತಿ ಊರುಗಳ ಸಹಜ – ಸರಳ ಕತೆ!
ಹೀರೋ ಪೃಥ್ವಿ ಅಂಬರ್ ಅವರಿಗೆ ಬಹುಶಃ ಇದು ಅವರ ನಟನಾ ಬದುಕಿನಲ್ಲೇ ದೊಡ್ಡ ಕ್ಯಾನ್ವಾಸ್‌ನ ಸಿನಿಮಾ. ಪಾತ್ರವನ್ನು ಕಟ್ಟಿರುವ ರೀತಿ ಮತ್ತು ಚಿತ್ರದ ಬಜೆಟ್ ಎರಡೂ ಕಾರಣಕ್ಕೆ. ಅವರು ಕೂಡ ಸಾಕಷ್ಟು ತಯಾರಿಯೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಿರುತೆರೆ ನಟಿ ಕಾವ್ಯ ಶೈವ ಅವರಿಗಿದು ಅಚಾನಕ್ಕಾಗಿ ಬಂದ ಅವಕಾಶ. ಪಾತ್ರಕ್ಕೆ ಅವರು ಅತ್ಯಂತ ಸೂಕ್ತ ಆಯ್ಕೆ. ಮುಗ್ಧ ಹಳ್ಳಿ ಹುಡ್ಗಿಯಾಗಿ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಚಿತ್ರದ ಓಘಕ್ಕೆ ನೆರವಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಊಹಿಸಬಹುದಾದರೂ, ಕಡೇ ಕ್ಷಣದವರೆಗೂ ಪ್ರೇಕ್ಷಕರನ್ನು ಕೂರಿಸುವ ಜಾಣ್ಮೆ ಮೆರೆದಿದ್ದಾರೆ ನಿರ್ದೇಶಕ ಜೈರಾಜ್. ಕೆಲವು ಓರೆ ಕೋರೆಗಳ ಹೊರತಾಗಿಯೂ ಇದು ‘ಎಂಗೇಜಿಂಗ್’ ಸಿನಿಮಾ ಆಗಿದೆ.







