ಭಾರತದ ಗಗನಯಾನ ಮಿಷನ್‌ನ ಬಗ್ಗೆ ಜಗತ್ತಿನಾದ್ಯಂತ ಭಾರೀ ಆಸಕ್ತಿ ಮೂಡಿದ್ದು, ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಉತ್ಸಾಹಿಗಳು ಇದರ ಭಾಗವಾಗಲು ಉತ್ಸುಕರಾಗಿದ್ದಾರೆ ಎಂದು ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. ಆಗಸ್ಟ್ 18ರ ಸಂಜೆ ಪ್ರಧಾನಿ ಮೋದಿಯವರನ್ನು ಭೇಟಿಯಾದ ಶುಕ್ಲಾ ಅವರು, ಕೆಲಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಆಕ್ಸಿಯಮ್- 4 ಮಿಷನ್‌ನ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದ ತಮ್ಮ ಬಾಹ್ಯಾಕಾಶ ಪ್ರಯಾಣದ ಅನುಭವಗಳನ್ನು ಹಂಚಿಕೊಂಡರು. ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು, ಕಕ್ಷೆಯ ಪ್ರಯೋಗಾಲಯದಲ್ಲಿ ನಡೆಸಿದ ಪ್ರಯೋಗಗಳು ಮತ್ತು ಬಾಹ್ಯಾಕಾಶದಲ್ಲಿ ಭಾರತದ ಸಾಧನೆಗಳ ಬಗ್ಗೆ ಚರ್ಚಿಸಿದರು.
ಈ ಸಂವಾದದ ವೀಡಿಯೊವನ್ನು ಆಗಸ್ಟ್ 19ರಂದು ಹಂಚಿಕೊಳ್ಳಲಾಗಿದೆ. ಶುಕ್ಲಾ ಅವರು ಪ್ರಧಾನಿಗೆ ಆಕ್ಸಿಯಮ್- 4 ಮಿಷನ್ ಪ್ಯಾಚ್ ಮತ್ತು ಬಾಹ್ಯಾಕಾಶಕ್ಕೆ ಹಾರಿದ ಭಾರತದ ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಅವರು ಶುಕ್ಲಾ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಸ್ವಾಗತಿಸಿದರು ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಭವಿಷ್ಯದ ಬಗ್ಗೆ ಮಾತನಾಡಿದರು. “ಬಾಹ್ಯಾಕಾಶ ನಿಲ್ದಾಣ ಮತ್ತು ಗಗನಯಾನ ಇವು ನಮ್ಮ ದೊಡ್ಡ ಮಿಷನ್‌ಗಳು. ನಿಮ್ಮ ಅನುಭವಗಳು ಅದಕ್ಕೆ ಬಹಳ ಉಪಯೋಗಕಾರಿಯಾಗಲಿವೆ” ಎಂದು ಮೋದಿ ಹೇಳಿದರು.
ಶುಭಾಂಶು ಶುಕ್ಲಾ ಅವರು ಭಾರತದ ಗಗನಯಾನ ಮಿಷನ್‌ನ ಬಗ್ಗೆ ಜನರು ತುಂಬಾ ಉತ್ಸುಕರಾಗಿದ್ದಾರೆ ಎಂದು ಹೇಳಿದರು. “ನನ್ನ ಆಕ್ಸಿಯಮ್- 4 ಮಿಷನ್ ಸಿಬ್ಬಂದಿಗಳು ಗಗನಯಾನ ಉಡಾವಣೆಯ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರು. ಅವರು ನಮ್ಮ ವಾಹನದಲ್ಲಿ ಪ್ರಯಾಣಿಸಲು ಬಯಸಿದ್ದರು ಮತ್ತು ಉಡಾವಣೆಗೆ ಆಹ್ವಾನಿಸಲು ಸಹಿ ಮಾಡಿದ ಘೋಷಣೆಗಳನ್ನು ನನ್ನಿಂದ ತೆಗೆದುಕೊಂಡರು” ಎಂದು ಅವರು ವಿವರಿಸಿದರು. ಜಗತ್ತಿನಾದ್ಯಂತ ಗಗನಯಾನದ ಬಗ್ಗೆ ಆಸಕ್ತಿ ಹೆಚ್ಚಾಗಿದ್ದು, ಇದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಯಕತ್ವದ ಸ್ಥಾನವನ್ನು ಸಾಧಿಸುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಶುಕ್ಲಾ ಹೇಳಿದರು.
ವರದಿಯ ಹಿನ್ನೆಲೆ:
ಆಕ್ಸಿಯಮ್- 4 ಮಿಷನ್ ಜೂನ್ 25, 2025ರಂದು ಫ್ಲೋರಿಡಾದಿಂದ ಉಡಾವಣೆಯಾಗಿ, ಜುಲೈ ೧೫ರಂದು ಭೂಮಿಗೆ ಮರಳಿತು. ಶುಕ್ಲಾ ಅವರು ಪೆಗ್ಗಿ ವಿಟ್ಸನ್ (ಯುಎಸ್), ಸ್ಲಾವೋಸ್ ಉಜ್ನಾನ್ಸ್ಕಿ-ವಿಸ್ನಿವ್‌ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಪು (ಹಂಗೇರಿ) ಅವರೊಂದಿಗೆ ಸೇರಿ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದರು ಮತ್ತು 20 ಔಟ್‌ರೀಚ್ ಚಟುವಟಿಕೆಗಳನ್ನು ಮಾಡಿದರು. ಈ ಮಿಷನ್ ಭಾರತದ ಗಗನಯಾನಕ್ಕೆ ಮಹತ್ವದ ಹೆಜ್ಜೆಯಾಗಿದ್ದು, ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮಗಳು, ಮಾನವ ದೇಹದ ಮೇಲಿನ ಪ್ರಭಾವ ಮತ್ತು ವಸ್ತು ವಿಜ್ಞಾನದ ಸಂಶೋಧನೆಗಳನ್ನು ಒಳಗೊಂಡಿತ್ತು.
ಇದನ್ನೂ ಓದಿ | ಶುಭಾಂಶು ಶುಕ್ಲಾ ಬಾಹ್ಯಕಾಶ ಯಾತ್ರೆ: ಶಶಿ ತರೂರ್ ಶ್ಲಾಘನೆ
ಆಗಸ್ಟ್ 17ರಂದು ಭಾರತಕ್ಕೆ ಮರಳಿದ ಶುಕ್ಲಾ ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ದೊರೆಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಐಎಸ್‌ಆರ್‌ಒ ಅಧ್ಯಕ್ಷ ಡಾ. ವಿ ನಾರಾಯಣನ್ ಸೇರಿದಂತೆ ಅಧಿಕಾರಿಗಳು ಸ್ವಾಗತಿಸಿದರು. ಆಗಸ್ಟ್ 09ರಂದು ಸಂಸತ್ತಿನಲ್ಲಿ ಶುಕ್ಲಾ ಅವರ ಸಾಧನೆಯನ್ನು ಗೌರವಿಸಲಾಯಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇದನ್ನು ಯುವಕರಿಗೆ ಸ್ಫೂರ್ತಿ ಎಂದು ಕೊಂಡಾಡಿದರು ಮತ್ತು 2047ರ ವಿಕಸಿತ ಭಾರತಕ್ಕೆ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವವನ್ನು ಒತ್ತಿ ಹೇಳಿದರು. ಕಾಂಗ್ರೆಸ್ ಸಂಸದ ಶಶಿ ತರೂರ್ ಸಹ ಈ ಸಾಧನೆಯನ್ನು ಹೊಗಳಿದರು, ಆದರೆ ವಿರೋಧ ಪಕ್ಷಗಳು ಚರ್ಚೆಯಲ್ಲಿ ಭಾಗವಹಿಸದಿರುವುದನ್ನು ಸಚಿವ ಸಿಂಗ್ ಟೀಕಿಸಿದರು.







