ಧಾರವಾಡ ವಿದ್ಯಾರ್ಥಿಗಳ ಪ್ರತಿಭಟನೆಗೆ ಜಯ: 3 ವರ್ಷ ವಯೋಸಡಿಲಿಕೆ

ರಾಜ್ಯ ಸರ್ಕಾರವು ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಗಳಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ.
karnataka 3year age relaxation

ಧಾರವಾಡದ ಜುಬಿಲಿ ಸರ್ಕಲ್‌ನಲ್ಲಿ ಕಣ್ಣೀರು ಚಿಮ್ಮಿಸುತ್ತಾ ಕೂಗಿದ ವಿದ್ಯಾರ್ಥಿಗಳ ಧ್ವನಿ ಇಂದು ಸಾರ್ಥಕಗೊಂಡಿದೆ. “ಸರ್‌, ನಮ್ಮ ಎಕ್ಸಾಮ್ ಬಂದಿಲ್ಲ, ವಯಸ್ಸು ಆಗಾಯ್ತು. ಆ ಕಡೆ ಉದ್ಯೋಗವೂ ಇಲ್ಲ. ಇಲ್ಲಿ ಏಜ್ ಆಗಿದೆ ಅಂತ ಯಾರೂ ಕೆಲಸ ಕೊಡಲ್ಲ. ಇದು ಭಾರೀ ಅನ್ಯಾಯ ರೀ!” ಎಂದು ಕರೆದಿದ್ದ ಪಿಎಸ್‌ಐ ತಯಾರಿ ಮಾಡಿದ ವಿದ್ಯಾರ್ಥಿನಿಯ ಮಾತುಗಳು ಕೊನೆಗೂ ಸರ್ಕಾರದ ಕಿವಿಗೆ ಬಿದ್ದಿದೆ.

ಸೋಮವಾರ (ಸೆಪ್ಟೆಂಬರ್ 29) ರಾಜ್ಯ ಸರ್ಕಾರವು ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಗಳಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಇದನ್ನು “ದಸರಾ ಬಂಪರ್ ಗಿಫ್ಟ್” ಎಂದು ಕರೆದು, ನಿರುದ್ಯೋಗ ಯುವಕರಿಗೆ ದೊಡ್ಡ ರಿಲೀಫ್ ನೀಡಿದೆ.

ಇತ್ತೀಚೆಗೆ ಧಾರವಾಡದಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘ (ಎಕೆವಿಎಸ್‌ಎ)ದಿಂದ ಆಯೋಜಿಸಿದ ಪ್ರತಿಭಟನೆಯು ಸರ್ಕಾರಕ್ಕೆ ಬಿಸಿ ಮುಟ್ಟಿಸಿತು. ಸೆಪ್ಟೆಂಬರ್ 24ರಂದು ಜುಬಿಲಿ ಸರ್ಕಲ್‌ನಲ್ಲಿ ಸುಮಾರು 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಗ್ಗೂಡಿ ಜಾತಾ ಮಾಡಿ, ರಸ್ತೆಯನ್ನು 30 ನಿಮಿಷಗಳಕ್ಕಿಂತಲೂ ಹೆಚ್ಚು ಸಮಯ ತಡೆಹಿಡಿದಿದ್ದರು. ನಗರದ ಸಾಮಾನ್ಯ ಜೀವನ ಸ್ಥಗಿತಗೊಂಡಿತ್ತು. 

ಕೋವಿಡ್‌ನಿಂದಾಗಿ ನೇಮಕಾತಿ ವಿಳಂಬವಾಗಿ, ಸಾವಿರಾರು ಯುವಕರು ವಯಸ್ಸು ಮೀರಿ ಹೊರಬಿದ್ದಿದ್ದಾರೆ ಎಂದು ಆರೋಪಿಸಿ, ಕನಿಷ್ಠ 5 ವರ್ಷದ ವಯೋಸಡಿಲಿಕೆ ನೀಡಿ, ಪೊಲೀಸ್ ಇಲಾಖೆಯ ಪಿಎಸ್‌ಐ, ಸಿಬಿಐ, ಎಸ್‌ಐ ಸೇರಿದಂತೆ ಖಾಲಿ ಹುದ್ದೆಗಳನ್ನು ತುರ್ತು ಭರ್ತಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. 

ಎಕೆವಿಎಸ್‌ಎ ರಾಜ್ಯಾಧ್ಯಕ್ಷ ಕಾಂತ್ ಕುಮಾರ್, “ಕೋವಿಡ್‌ನಿಂದಾಗಿ ನೇಮಕಾತಿ ವಿಳಂಬವಾಯಿತು. ಇದರಿಂದಾಗಿ ಸಾವಿರಾರು ಯುವಕರು ವಯಸ್ಸು ಮೀರಿ ಹೊರಬಿದ್ದಿದ್ದಾರೆ. ಕನಿಷ್ಠ 5 ವರ್ಷದ ವಯಸ್ಸು ವಯೋಸಡಿಲಿಕೆ ನೀಡಿ, ಖಾಲಿ ಹುದ್ದೆಗಳನ್ನು ತುರ್ತು ಭರ್ತಿ ಮಾಡಬೇಕು” ಎಂದು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ, ಇದೇ ತಿಂಗಳ 6ರಂದು ರಾಜ್ಯ ಸರ್ಕಾರ ಸಿವಿಲ್ ಹುದ್ದೆಗಳ ನೇರ ನೇಮಕಾತಿಗಳಿಗೆ 2 ವರ್ಷಗಳ ಸಡಿಲಿಕೆ ಮಾಡಿ ಆದೇಶಿಸಿತ್ತು. ಆದರೆ ವಿದ್ಯಾರ್ಥಿಗಳ ಒತ್ತಡದ ನಂತರ, ಡಿಪಾರ್ಟ್‌ಮೆಂಟ್ ಆಫ್ ಪರ್ಸನಲ್ ಅಂಡ್ ಅಡ್ಮಿನಿಸ್ಟ್ರೇಟಿವ್ ರಿಫಾರ್ಮ್ಸ್ (ಡಿಪಿಎಆರ್) 3 ವರ್ಷಗಳ ಸಡಿಲಿಕೆಯ ಆದೇಶ ಹೊರಡಿಸಿದೆ. ಇದು ಡಿಸೆಂಬರ್ 31, 2027ರವರೆಗೆ ನಡೆಯುವ ನೇರ ನೇಮಕಾತಿ ನೋಟಿಫಿಕೇಶನ್‌ಗಳಿಗೆ ಒಂದು ಬಾರಿಗೆ ಅನ್ವಯವಾಗುತ್ತದೆ.

ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಸಮಾನವಾಗಿ ಲಭ್ಯವಾಗುವ ಈ ಸಡಿಲಿಕೆಯು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಂಘಟನೆಗಳ ಆಗ್ರಹಗಳಿಗೆ ಪ್ರತಿಕ್ರಿಯೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ| ವಿದ್ಯಾಕಾಶಿಯಲ್ಲಿ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ 

ಈ ಆದೇಶವು ವಿದ್ಯಾರ್ಥಿಗಳ ಹೋರಾಟದ ಫಲವಾಗಿದ್ದು, ಅವರ ಕನಸುಗಳಿಗೆ ಹೊಸ ಜೀವ ತಂದಿದೆ. ಆದರೆ ಎಕೆವಿಎಸ್‌ಎ ನಾಯಕರು 5 ವರ್ಷ ಸಡಿಲಿಕೆ ಮಾತ್ರ ಸಾಕಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರ ಖಾಲಿ ಹುದ್ದೆಗಳನ್ನು ತುರ್ತು ಭರ್ತಿ ಮಾಡಿ, ಉದ್ಯೋಗ ಸೃಷ್ಟಿ ಮತ್ತು ನೇಮಕಾತಿ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »